ಮಳೆಯ ಹುಡುಗಿಗೆ ಬಿಸಿ ನಡಿಗೆ ಅನುಭವ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ನಗರ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಳೆ ಹುಡುಗಿ ಪೂಜಾ ಗಾಂಧಿ ಅವರಿಗೆ ಪ್ರಚಾರದ ಮೊದಲ ದಿನವೇ ಬೇಸಿಗೆಯ ಬಿರುಬಿಸಿಲಿನ ಅನುಭವವಾಯಿತು. ಭಾನುವಾರ ಬೆಳಗ್ಗೆ ಅವರು ವಿವಿಧ ಧಾರ್ಮಿಕ ಕೇಂದ್ರಗಳಿಗೆ ತೆರಳಿದ ವೇಳೆ ಬಿಸಿಲಿನ ತಾಪ ತಾಳದೇ ಓಡೋಡಿ ದರ್ಶನ ಪಡೆದ ಪ್ರಸಂಗ ನಡೆಯಿತು.
ನಗರಕ್ಕೆ ಶನಿವಾರ ರಾತ್ರಿ ಆಗಮಿಸಿದ ಪೂಜಾ ಗಾಂಧಿ ಅವರು ಮೊದಲಿಗೆ ರೋಡ್ ಶೋ ನಡೆಸಲು ನಿರ್ಧರಿಸಿದ್ದರು. ಆದರೆ ಅದಕ್ಕೆ ಅನುಮತಿ ಸಿಗಲಿಲ್ಲ. ಹಾಗಾಗಿ ಅವರು ಭಾನುವಾರ ಬೆಳಗ್ಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಆಶಾಪುರ ರಸ್ತೆಯಲ್ಲಿರುವ ಅಗಾಫೆ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಪೂಜಾ ಪಡಿಪಾಟಿಲು: ಆನಂತರ ಅವರು ನಗರದ ಮಾಣಿಕಪ್ರಭು ದೇವಸ್ಥಾನಕ್ಕೆ ಧಾವಿಸಿದರು. ಆ ಹೊತ್ತಿಗಾಗಲೇ ಬಿರುಬಿಸಿಲಿನ ತಾಪ ಹೆಚ್ಚಾಗಿತ್ತು. ದೇವಸ್ಥಾನದೊಳಕ್ಕೆ ತೆರಳಲು ಅವರು ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಡುತ್ತಿದ್ದಂತೆಯೇ ಕಾಲು ಚುರ್ರೆಂದಿತು. ಬಿಸಿಯ ಅನುಭವವಾಗುತ್ತಿದ್ದಂತೆಯೇ ಅವರು ಓಡೋಡಿ ದೇವಸ್ಥಾನದೊಳಕ್ಕೆ ಸೇರಿದರು.
ಇದೇ ಪರಿಸ್ಥಿತಿ ಅವರು ನಂತರದಲ್ಲಿ ನಗರದ ಶಂಶಾಲಂ ದರ್ಗಾಕ್ಕೆ ಭೇಟಿ ನೀಡಿದ ವೇಳೆಯೂ ಮರುಕಳಿಸಿತು. ದರ್ಗಾದ ಮುಂಭಾಗದಲ್ಲಿ ಅಳವಡಿಸಿದ್ದ ಗ್ರಾನೈಟ್ ಕಲ್ಲು ಬಿಸಿಲಿಗೆ ಕಾದಿದ್ದು, ಪೂಜಾ ಗಾಂಧಿ ಓಡೋಡುತ್ತಲೇ ದರ್ಗಾದೊಳಕ್ಕೆ ತೆರಳಿದರು. ಅವರು ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಮರಳುವ ವೇಳೆಗೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರು ಸಾಗುವ ಮಾರ್ಗದಲ್ಲಿ ಚಾಪೆ ಹಾಸುವ ಮೂಲಕ ಅವರನ್ನು ಬಿಸಿಲಿನಿಂದ ಪಾರು ಮಾಡಿದ್ದು ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

