ಚುನಾವಣೆ ವೆಚ್ಚದ ವೀಕ್ಷಕರ ನೇಮಕ
ರಾಯಚೂರು: ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾಯಿರಿಸಲು ವೀಕ್ಷಕರನ್ನು ನೇಮಿಸಲಾಗಿದೆ. ರಾಜ್ಯ ಚುನಾವಣಾ ಆಯೋಗವು ಈ ಕುರಿತು ನೇಮಕಾತಿ ಹೊರಡಿಸಿ, ವೀಕ್ಷಕರು ಏ.10ರಿಂದ ಮೇ 5ರವರೆಗೆ ಮತ್ತು ಜೂ.7ರಿಂದ ಜೂ.14ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ. ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರಕ್ಕೆ ವಿ.ಕೆ. ಸಿಂಗ್ ಅವರನ್ನು ನೇಮಿಸಲಾಗಿದೆ. ಅದೇ ರೀತಿ ಸಿಯಾಸರಣ್ ಅವರನ್ನು ಲಿಂಗಸ್ಗೂರು, ಸಿಂಧನೂರು, ಮಸ್ಕಿ ಕ್ಷೇತ್ರಗಳಿಗೆ ನೇಮಿಸಲಾಗಿದೆ. ಆರ್.ಬಿ. ಶಿಂಧೆ ಅವರನ್ನು ಮಾನವಿ ಮತ್ತು ದೇವದುರ್ಗ ಕ್ಷೇತ್ರಕ್ಕೆ ವೆಚ್ಚಗಳ ವೀಕ್ಷಕರಾಗಿ ನೇಮಿಸಿ ಆಯೋಗ ಆದೇಶ ಹೊರಡಿಸಿದೆ.
ಮತದಾರರ ಹೆಸರು ಪರಿವೀಕ್ಷಣೆ
ರಾಯಚೂರು: ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಏ.8ರ ನಂತರದಲ್ಲಿ ಹೆಸರು ಸೇರ್ಪಡೆಯಾಗುವ ಮತದಾರರ ಹೆಸರನ್ನು ಪರಿವೀಕ್ಷಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮತದಾರರ ಪಟ್ಟಿಯಲ್ಲಿ ಏ. 8ರಿಂದ ನಂತರದಲ್ಲಿ ಹೆಸರು ಸೇರ್ಪಡೆಯಾಗುವ ಮತದಾರರನ್ನು ನಿರಂತರ ಪರಿವೀಕ್ಷಣೆಯಲ್ಲಿಟ್ಟು ಮುಂದಿನ ಚುನಾವಣೆಯಲ್ಲಿ ಮತದಾನಕ್ಕೆ ಪರಿಗಣಿಸಲಾಗುವುದೆಂದು ತಿಳಿಸಿದೆ.
ಅಧಿಕಾರಿಗಳ ನೇಮಕ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆಗೆ ಸೆಕ್ಟರಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸೆಕ್ಟರಲ್ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಮತ್ತು ಮತದಾನ ಕೇಂದ್ರಗಳ ಭೌತಿಕ ತಪಾಸಣೆ ಹಾಗೂ ಚುನಾವಣಾ ಕೆಲಸ ಸುಗಮವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ದೃಷ್ಟಿಯಿಂದ ರಾಯಚೂರು ಜಿಲ್ಲೆಯ ಎಲ್ಲ 7 ವಿಧಾನಸಭೆ ಕ್ಷೇತ್ರಗಳಿಗೆ ನೇಮಕವಾಗಿದ್ದು, ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾಲಕಾಲಕ್ಕೆ ವರದಿಗಳನ್ನು ನಿಗದಿತ ನಮೂನೆಯಲ್ಲಿ ಸಂಭಂಧಿಸಿದ ಚುನಾವಣಾಧಿಕಾರಿಗೆ ನೀಡಲು ಜಿಲ್ಲಾಡಳಿತ ಸೂಚಿಸಿದೆ.
ಸಿಪಿಎಂ; ಉಚ್ಚಾಟನೆ
ರಾಯಚೂರು: ಸಿಪಿಎಂ ಜಿಲ್ಲಾ ಸಮಿತಿಯಿಂದ ಪಕ್ಷದ ಮುಖಂಡ ಹನುಮಗೌಡ ಮದರಕಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲಯ್ಯ ಜಾಲಹಳ್ಳಿ, ಕಳೆದ ಕೆಲ ದಿನಗಳಿಂದ ದೇವದುರ್ಗ ತಾಲೂಕಿನಲ್ಲಿ ಹನುಮಗೌಡ ಮದರಕಲ್ ಅವರು ಸಿಪಿಎಂ ಪಕ್ಷದ ನಿಯಮಾವಳಿಗಳನ್ನು ಮೀರಿ ವೈಯಕ್ತಿಕ ತಿಳಿವಳಿಕೆಯ ಆಧಾರದಲ್ಲಿಯೇ ತೊಡಗಿ ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿದ್ದರಿಂದ ಆ ಬಗ್ಗೆ ಸಮಿತಿಯ ಸಭೆಯಲ್ಲಿ ಚರ್ಚಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ. ದೇವದುರ್ಗ ತಾಲೂಕಿನ ಪಕ್ಷದ ಕಾರ್ಯಕರ್ತರು ಹನುಮಗೌಡ ಮದರಕಲ್ ಅವರೊಂದಿಗೆ ಸಂಪರ್ಕವಿರಿಸಿಕೊಳ್ಳದಂತೆ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

