ರಾಯಚೂರು

ಬಿಜೆಪಿಗೆ ಪಾಪಾರೆಡ್ಡಿ ಗುಡ್‌ಬೈ, 'ಕೈ'ಗೆ ಜೈ..

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.12
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ದೇವದುರ್ಗದ ಶಾಸಕ ಶಿವನಗೌಡ ನಾಯಕರ ಕುಮ್ಮಕ್ಕಿನಿಂದ ತಮಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಇದರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ನಗರ ಕ್ಷೇತ್ರದ ಮಾಜಿ ಶಾಸಕ ಪಾಪಾರೆಡ್ಡಿ ಅಧಿಕೃತವಾಗಿ ಘೋಷಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಒಂದು ಬಾರಿ ಶಾಸಕರಾಗಿಯೂ ಕಾರ್ಯನಿರ್ವಹಿಸಿದ ಅನುಭವವಿದೆ. ಅಷ್ಟೇ ಅಲ್ಲ, ಕಳೆದ 20 ವರ್ಷಗಳಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಿದ್ದಾಗಿ ತಿಳಿಸಿದರು.
ಅನಂತಕುಮಾರ್, ನಾಯಕರ ಕುತಂತ್ರ: ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ತಾವು ಸಾಕಷ್ಟು ಶ್ರಮಿಸಿದ್ದರೂ ತಮ್ಮನ್ನು ಟಿಕೆಟ್ ನೀಡಿಕೆಯಲ್ಲಿ ಕಡೆಗಣಿಸಲಾಯಿತು. ಪಕ್ಷದ ಹಿರಿಯ ನಾಯಕ ಅನಂತಕುಮಾರ್ ಮತ್ತು ಶಾಸಕ ಶಿವನಗೌಡ ನಾಯಕ ಅವರ ಕುತಂತ್ರದಿಂದಾಗಿ ತಮಗೆ ಟಿಕೆಟ್ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡು ತಮ್ಮ ಅಪಾರ ಬೆಂಬಲದೊಂದಿಗೆ ಕಾಂಗ್ರೆಸ್ ಸೇರಿರುವುದಾಗಿ ತಿಳಿಸಿದರು.
ತಮ್ಮ ಬೆಂಬಲಿಗರಾದ ಎಪಿಎಂಸಿ ಉಪಾಧ್ಯಕ್ಷ ಬಾಬುರಾವ್, ನಗರಸಭೆ ಸದಸ್ಯರೂ ಸೇರಿ ಎಲ್ಲರೂ ಹಂತಹಂತವಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ತಮ್ಮ ಬೆಂಬಲಿಗರಿಗೆ ಎಂದಿಗೂ ತಾವು ಅನ್ಯಾಯವಾಗಲು ಅವಕಾಶ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೂ ಯಾವುದೇ ಅನ್ಯಾಯವಾಗದಂಥ ಭರವಸೆ ದೊರೆತಿದೆ ಎಂದು ಹೇಳಿದರು.
ಮನವಿಗೆ ಕ್ಯಾರೆ ಎನ್ನಲಿಲ್ಲ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಹಾಗೂ ಬೋಳಮಾನದೊಡ್ಡಿ ನೀರಾವರಿ ಯೋಜನೆಗಳ ಚಾಲನೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿದರು.
ತಾಲೂಕಿನ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಈ ಎರಡೂ ಯೋಜನೆಗಳ ಬಗ್ಗೆ ದೊರೆತ ಭರವಸೆ ಹಿನ್ನೆಲೆಯಲ್ಲಿ ತಾವು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕರ್ನಾಟಕ ಜನತಾ ಪಕ್ಷದಿಂದ ತಮಗೆ ಟಿಕೆಟ್‌ಗೆ ಭರವಸೆ ದೊರೆತಿತ್ತು. ಆದರೆ ಈಗಾಗಲೇ ಆಯಾ ಪಕ್ಷಗಳಲ್ಲಿರುವ ಕಾರ್ಯಕರ್ತರು ಹಾಗೂ ನಾಯಕರನ್ನು ಕಡೆಗಣಿಸಿ ಟಿಕೆಟ್ ಪಡೆಯಲು ತಾವು ಸಿದ್ಧರಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾಗಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಹೋರಾಟ: ಸದ್ಯ ತಾವು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಸಕ್ತ ಚುನಾವಣೆಯಲ್ಲಿ ರಾಯಚೂರು ನಗರ, ಗ್ರಾಮೀಣ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ತಾವು ಹೋರಾಡುವುದಾಗಿ ಹೇಳಿದ ಅವರು, ಬಿಜೆಪಿಯಲ್ಲಿ ಮೂಲ ಬಿಜೆಪಿಗರು, ಆರೆಸ್ಸೆಸ್ ಮತ್ತು ಎಬಿವಿಪಿ ಅವರ ಅಣತಿಯಂತೆ ಎಲ್ಲವೂ ನಡೆಯುತ್ತದೆ. ತಾವು 20 ವರ್ಷಗಳಿಂದ ಬಿಜೆಪಿಯಲ್ಲಿದ್ದು ಎಲ್ಲ ಹಂತದಲ್ಲಿ ಸಕ್ರಿಯವಾಗಿ ದುಡಿದರೂ ಕಡೆಯವರೆಗೂ ತಮ್ಮನ್ನು ಪಕ್ಷದ ಹಿರಿಯರು ನಂಬಲಿಲ್ಲ ಎಂದು ಆರೋಪಿಸಿದರು.
ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ತ್ರಿವಿಕ್ರಮ್ ಜೋಷಿ ಅವರಿಗೆ ಪ್ರಸಕ್ತ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿಲ್ಲ. ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸದ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು, ಅಲ್ಲಿನ ಸ್ಥಿತಿಯನ್ನು ಹೊರಹಾಕಿದೆ ಎಂದು ಲೇವಡಿ ಮಾಡಿದರು.
ಏ.10ರಂದೇ ಬಿಜೆಪಿಗೆ ರಾಜಿನಾಮೆ: ಸ್ಥಳೀಯ ರಾಜಕೀಯದಲ್ಲಿ ಎಂದಿಗೂ ಸಕ್ರಿಯವಾಗಿ ಪಾಲ್ಗೊಳ್ಳದ ತ್ರಿವಿಕ್ರಮ್ ಜೋಷಿ ರಾಷ್ಟ್ರೀಯ ನಾಯಕರ ಜತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ನಾಯಕರು ತಮಗೆ ಅನ್ಯಾಯ ಮಾಡಿದ್ದರಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರಿಗೆ ಏ.10ರಂದು ರಾಜಿನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ಬಾಬುರಾವ್ ಸೇರಿದಂತೆ ಅನೇಕರಿದ್ದರು. ಕಾಂಗ್ರೆಸ್ ಪ್ರಮುಖರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.