ಎಸ್ಸಿ ಕಾಲೋನಿಗೆ ನೀರಿನ ಸೌಲಭ್ಯಕ್ಕೆ ಆಗ್ರಹ
ದೇವದುರ್ಗ: ವಂದಲಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಒತ್ತಾಯಿಸಿದ್ದಾರೆ.
ತಾಲೂಕಿನ ಪಲ್ಕನಮರಡಿ ಗ್ರಾಪಂ ವ್ಯಾಪ್ತಿಯ ವಂದಲಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಛಲವಾದಿ ಮತ್ತು ಮಾದಿಗ ಜನಾಂಗದವರಿಗೆ ಕಳೆದ 25 ವರ್ಷಗಳಿಂದ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕೆಲ ಜನರು ಈ ಎಸ್ಸಿ ಕಾಲೋನಿಯ ಕೊಳವೆ ಮಾರ್ಗ ಮುಚ್ಚಿದ್ದರಿಂದ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪಲ್ಕನಮರಡಿ ಗ್ರಾಪಂ ಮತ್ತು ತಹಸೀಲ್ದಾರ್ ಹಾಗೂ ತಾಪಂ ಇಒ.ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ಗ್ರಾಮದ ಎಸ್ಸಿ ಕಾಲೋನಿಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಂದು ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆ
ಲಿಂಗಸ್ಗೂರು: ಪ್ರಸಕ್ತ ವಿಧಾನಸಭೆ ಚುನಾವಣೆ ನಿಮಿತ್ತ ಏ.14 ರಂದು ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ತಿಳಿಸಿದ್ದಾರೆ.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಕರೆಯಲಾದ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಮಾಜಿ ಸಂಸದ ಎ.ವೆಂಕಟೇಶ ನಾಯಕ, ಕುಷ್ಟಗಿ ಹಂಗಾಮಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಆಗಮಿಸಲಿದ್ದು, ಸಭೆಗೆ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕೆಂದು ಕೋರಿದ್ದಾರೆ.
ಮಾಧವ ತೀರ್ಥರ ಆರಾಧನೆಗೆ ಪೇಜಾವರ ಶ್ರೀ
ಸಿಂಧನೂರು: ಲಿಂಗಸ್ಗೂರು ತಾಲೂಕಿನ ಸುಕ್ಷೇತ್ರ ಬುದ್ದಿನ್ನಿಯಲ್ಲಿ (ಸಾನಬಾಳ) ಕಣ್ವ ಮಠದ ಸಂಸ್ಥಾಪಕರಾದ ಶ್ರೀಮಾಧವ ತೀರ್ಥರ ಆರಾಧನ ಮಹೋತ್ಸವದಲ್ಲಿ ಉಡುಪಿಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳು ಆಗಮಿಸುವರು ಎಂದು ಆರಾಧನಾ ಮಹೋತ್ಸವ ಸಮಿತಿ ತಿಳಿಸಿದೆ. ಆರಾಧನೆ ಅಂಗವಾಗಿ ಹಯಗ್ರೀವ ಜ್ಞಾನಯಜ್ಞ-ಲಕ್ಷ್ಮೀ ನಾರಾಯಣ ಹವಿರ್ಯಜ್ಞದ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ತತ್ವೋಪದೇಶ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಸದ್ಭಕ್ತರು ಆಗಮಿಸಿ ಸರ್ವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಮಿತಿ ಕೋರಿದೆ.
16ರಂದು ಸ್ನೇಹ ಸಮ್ಮೇಳನ, ಬೀಳ್ಕೊಡುಗೆ
ಸಿಂಧನೂರು: ನಗರದ ನ್ಯಾಷನಲ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜಮೆಂಟ್ನ 7ನೇ ವರ್ಷದ ಸ್ನೇಹ ಸಮ್ಮೇಳನ, ಬಿಬಿಎಂ ಹಾಗೂ ಬಿಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏ.16ರಂದು ನಗರದ ಕೋಟೆ ವೀರಣ್ಣ ದೇವಸ್ಥಾನದ ಸಭಾಂಗಣದಲ್ಲಿ ಬೆ.9.30ಕ್ಕೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಲಿಂಗಸ್ಗೂರು ವಿಸಿಬಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಜಿ.ವಿ. ಕೆಂಚನಗುಡ್ಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಂಧನೂರು ನ್ಯಾಷನಲ್ ಕಾಲೇಜು ಪ್ರಾಂಶುಪಾಲ ಹಾಗೂ ಸದಸ್ಯ ಶರಣಪ್ಪ ವಹಿಸಲಿದ್ದಾರೆ. ಅತಿಥಿಗಳಾಗಿ ಸಿಂಧನೂರು ವಿಸಿಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಆರ್.ಪಂಪಾಪತಿ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ, ಲಿಂಗಸ್ಗೂರು ವಿಸಿಬಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ ಪಾಟೀಲ್, ಸಿಂಧನೂರು ವಿಸಿಬಿ ಎಜ್ಯುಕೇಷನ್ ಟ್ರಸ್ಟ್ ಸದಸ್ಯ ಸತೀಶ್ ಎನ್., ರಾಯಚೂರು ಎಸ್ಎಲ್ಎನ್ ಎಂಜಿನಿಯರಿಂಗ್ ಕಾಲೇಜಿನ ಖಜಾಂಚಿ ಹಾಗೂ ಉಪನ್ಯಾಸಕ ಅಮರೇಶ ಪಾಟೀಲ್, ಸಿಂಧನೂರು ವಿಸಿಬಿ ಎಜುಕೇಷನ್ ಟ್ರಸ್ಟ್ ಸದಸ್ಯ ಚಂದ್ರಶೇಖರ ಬೂದಿಹಾಳ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಬಿಕಾಂ ವಿಭಾಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಕು. ಪ್ರಿಯಾಂಕ ವಿಜಯಜೈನ್, ಬಿಕಾಂ ವಿಭಾಗದ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 10ನೇ ರ್ಯಾಂಕ್ ಪಡೆದ ಕು. ಲಾವಣ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

