ಅಂಬೇಡ್ಕರ್ ದೇಶ ಕಂಡ ಮಹಾನ್ ಮಾನವತಾವಾದಿ
ಕ.ಪ್ರ. ವಾರ್ತೆ, ರಾಯಚೂರು, ಏ.14
ಸಂವಿಧಾನ ಶಿಲ್ಪಿ ಅಂಬೇಡ್ಕರರು ದೇಶ ಕಂಡ ಮಹಾನ್ ಮಾನವತಾವಾದಿಯಾಗಿದ್ದಾರೆ. ಅವರು ದೇಶದಲ್ಲಿ ಎಲ್ಲ ಜಾತಿ- ಜನಾಂಗದವರಲ್ಲಿ ಸಮಾನತೆಗೆ ನಡೆಸಿದ ಹೋರಾಟ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಹೇಳಿದರು.
ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರರ 122ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಗತಿಗೆ ಅಪಾರ ಕೊಡುಗೆ: ದೇಶದ ಪ್ರಗತಿಯಲ್ಲಿ ಸಮಾಜದ ಎಲ್ಲ ಜನಾಂಗದವರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಎಲ್ಲರಿಗೆ ಸಮಾನತೆಯನ್ನು ಸಾರುವ ಕಾರ್ಯವನ್ನು ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಮಾಡಿ ತೋರಿಸಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ದೇಶದ ಪ್ರಗತಿ ಸಾಧಿಸುವಲ್ಲಿ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಸಮಾಜದ ಕೆಳವರ್ಗದವರಿಗೆ ಎಲ್ಲ ಹಂತದಲ್ಲೂ ಸಮಾನತೆ ತಂದುಕೊಡಲು ಅವರು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದ ಅವರು, ಅಂಬೇಡ್ಕರರ ದೇಶ ಕಂಡ ಮಹಾನ್ ದಾರ್ಶನಿಕರು, ಕ್ರಾಂತಿಕಾರಿಯಾಗಿದ್ದರು ಎಂದು ಹೇಳಿದರು.
ಸಮಾನತೆಯ ಹರಿಕಾರ: ಮುಖ್ಯ ಅತಿಥಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ ಮಾತನಾಡಿ, ರಾಷ್ಟ್ರದ ಐಕ್ಯತೆ ಹಾಗೂ ಏಳಿಗೆಗೆ ಅಂಬೇಡ್ಕರರ ಕೊಡುಗೆ ಅಪಾರ. ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಸಮಾನತೆಯನ್ನು ಸಂವಿಧಾನದ ಮೂಲಕ ತಂದುಕೊಡುವ ಕಾರ್ಯವನ್ನು ಅವರು ಮಾಡಿದ್ದಾರೆಂದು ಹೇಳಿದರು.
ಸಮಾಜದಲ್ಲಿ ಶೋಷಿತ ವರ್ಗದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅವರು ಕಾನೂನುಗಳನ್ನು ರಚಿಸಿ ಸಂವಿಧಾನದ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ್ದಾರೆ. ದೇಶದ ಪ್ರಗತಿಯಲ್ಲಿ ಎಲ್ಲರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಎಲ್ಲರಿಗೆ ಸಮಾನ ಅವಕಾಶ ದೊರೆಯುವಂತೆ ಅವರು ಚಿಂತಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಮಂತ ಹೋಳಕರ್ ಅವರು ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಜಿಪಂ ಸಿಇಒ ಜ್ಞಾನಪ್ರಕಾಶ್ ಮಾತನಾಡಿದರು. ಸಾನ್ನಿಧ್ಯವನ್ನು ಆಣದೋರ್ ಬಂತೇಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತೆ ಮಂಜುಶ್ರೀ, ಎಎಸ್ಪಿ ಡಾ. ದಿವ್ಯಾ ಗೋಪಿನಾಥ್, ಪೌರಾಯುಕ್ತ ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿರಸಗಿಕರ್ ನಾಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ದಲಿತ ಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ದಲಿತ ಮುಖಂಡ ಅಂಬಣ್ಣ ಅರೋಲಿಕರ್ ಮತ್ತು ಸಂಗಡಿಗರು ಅಂಬೇಡ್ಕರ್ ಅವರ ಕುರಿತು ದಾನಪ್ಪ ನಿಲೋಗಲ್ ಅವರು ಬರೆದ ಕ್ರಾಂತಿಗೀತೆಯನ್ನು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

