ಸುರಾನಾ ಸಂಸ್ಥೆ, ಕಾರ್ಮಿಕ ಇಲಾಖೆ ವಿರುದ್ಧ 22ರಂದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.18
ತಾಲೂಕಿನ ಚಿಕ್ಕಸೂಗೂರು ನಲ್ಲಿರುವ ಸುರಾನಾ ಸಂಸ್ಥೆ ಕಾರ್ಮಿಕ ವಿರೋಧಿ ನೀತಿ ಹಾಗೂ ಕಾರ್ಮಿಕ ಇಲಾಖೆ ಬೇಜವಾಬ್ದಾರಿ ವರ್ತನೆ ಖಂಡಿಸಿ ಏ.22ರಂದು ಸಿಐಟಿಯು ಪ್ರತಿಭಟನೆ ನಡೆಸಲಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅನೇಕ ತಿಂಗಳಿನಿಂದ ಸುರಾನಾ ಸಂಸ್ಥೆಯ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದ್ದರೂ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸದೇ ಕಾರ್ಮಿಕರ ದಮನ ನೀತಿ ಅನುಸರಿಸುತ್ತಿದೆ. ಅನೇಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು.
ನ್ಯಾಯ ದೊರಕಿಸಿಕೊಡಿ: ಸುರಾನಾ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಸುಮಾರು 300 ಕಾರ್ಮಿಕರ ಪೈಕಿ ಈಗಾಗಲೇ ಮುಷ್ಕರ ನಡೆಸಿದ್ದರಿಂದ 173 ಜನ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೂ ಕಾರ್ಮಿಕರು ಮುಷ್ಕರ ಮುಂದುವರಿಸಿದ್ದು, ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಗುಲ್ಬರ್ಗದ ಕಾರ್ಮಿಕ ನ್ಯಾಯಾಲಯದಲ್ಲಿ ವಿನಂತಿ ಮಾಡಿದಾಗ ಸಂಧಾನ ಸಭೆ ನಡೆಸಲಾಗಿದೆ. ವಜಾಗೊಂಡ ಕಾರ್ಮಿಕರನ್ನು ಪುನಾ ನೇಮಿಸಿಕೊಂಡು ಬೇಡಿಕೆಗಳ ಈಡೇರಿಕೆ ಕುರಿತು ಪರಿಶೀಲಿಸಲು ನ್ಯಾಯಾಲಯ ಸೂಚಿಸಿದೆ ಎಂದು ತಿಳಿಸಿದರು.
ಆದರೆ ಸುರಾನಾ ಸಂಸ್ಥೆ ಆಡಳಿತ ಮಂಡಳಿಯು ಸಂಧಾನ ಸಭೆಯ ನಡೆವಳಿಕೆಗಳಿಗೆ ಸಹಿ ಮಾಡದೇ ಉಪಕಾರ್ಮಿಕ ಆಯುಕ್ತರ ವಿರುದ್ಧವೇ ಉದ್ಧಟತನ ಪ್ರದರ್ಶಿಸಿದೆ. ಅಷ್ಟೇ ಅಲ್ಲ ಆಡಳಿತ ಮಂಡಳಿಯ ವಿರುದ್ಧ ದನಿ ಎತ್ತುವವರ ವಿರುದ್ಧ ಸೇವೆಯಿಂದ ವಜಾಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಡಿಸಿ ಮಧ್ಯ ಪ್ರವೇಶಿಸಲಿ: ಈ ಹಿನ್ನೆಲೆಯಲ್ಲಿ ಸಿಐಟಿಯು ಸಂಘಟನೆ ಹೋರಾಟಕ್ಕಿಳಿಯಲು ನಿರ್ಧರಿಸಿದ್ದು, ಏ.22ರಂದು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.
ಕನಿಷ್ಟ ವೇತನ ನಿಗದಿಗೊಳಿಸಿ: ಕಾನೂನುಬಾಹಿರವಾಗಿ ವಜಾಗೊಳಿಸಲಾದ ಕಾರ್ಮಿಕರನ್ನು ಪುನಾ ಸೇವೆಗೆ ತೆಗೆದುಕೊಳ್ಳಬೇಕು. ಕಾಯಂ ನೇಮಕಾತಿ ಪತ್ರವನ್ನು ತರಬೇತಿ ಅವಧಿ ಮುಗಿದ ಎಲ್ಲರಿಗೆ ಕೂಡಲೇ ಆ ಅವಧಿಯಿಂದ ನೀಡಬೇಕು. ಕಂಪನಿಯ ಡಿ ದರ್ಜೆ ನೌಕರರಿಗೆ ಮೂಲವೇತನವನ್ನು ಕನಿಷ್ಟ ರು. 6 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕೈಗೊಳ್ಳುವಂತೆ ಗ್ರಾಹಕರ ಸೂಚ್ಯಂಕದ ಏರಿಕೆಗೆ ತಕ್ಕಂತೆ ಕಂಪನಿಯ ನೌಕರರಿಗೆ ತುಟ್ಟಿ ಭತ್ಯೆ ನೀಡಬೇಕು. ಎಲ್ಲ ನೌಕರರಿಗೆ ಸೇವೆಗೆ ಸೇರಿದ 6 ತಿಂಗಳಿನಿಂದಲೇ ವೇತನ ಬಡ್ತಿಗೆ ಪರಿಗಣಿಸಬೇಕು. ವಿದ್ಯಾರ್ಹತೆ ಮತ್ತು ಅನುಭವಕ್ಕೆ ತಕ್ಕಂತೆ ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ. 22ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಚ್. ಪದ್ಮಾ, ಶರಣಗೌಡ, ಸೂಗನಗೌಡ, ನಾಗೇಂದ್ರ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

