ರಾಯಚೂರು

2 ಬಾರಿ ಸಿಎಂ ನೀಡಿದ ಹೆಮ್ಮೆ, ಅಭಿವೃದ್ಧಿ ಮಾತ್ರ ಸೊನ್ನೆ

Published On :

ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.20
ಜಿಲ್ಲೆಯಲ್ಲೇ ದಟ್ಟ ಕಾನನ ಹೊಂದಿರುವ ಚಿಂಚೋಳಿ ರಾಜಕೀಯವೂ ಅಷ್ಟೇ ನಿಗೂಢ! ರಾಜ್ಯಕ್ಕೆ 2 ಬಾರಿ ಸಿಎಂ ಕೊಡುಗೆ ನೀಡಿದ ಹೆಮ್ಮೆ ಈ ಕ್ಷೇತ್ರದ್ದು. ಇಲ್ಲಿಂದ ಗೆದ್ದ ವೀರೇಂದ್ರ ಪಾಟೀಲ್ 2 ಬಾರಿ ಮುಖ್ಯಮಂತ್ರಿಗಳಾಗಿದ್ದರು. ಅಷ್ಟೇ ಅಲ್ಲ, ದಕ್ಷ ಆಡಳಿತಗಾರರು ಎಂದು ಹೆಸರು ಪಡೆದಿದ್ದರು.
  ಆದರೇನು ಮಾಡುವುದು, 'ದೀಪದ ಬುಡದಲ್ಲೇ ಕತ್ತಲು' ಅಂತಾರಲ್ಲ, ಆ ಮಾತು ಚಿಂಚೋಳಿಗೂ ಅನ್ವಯ. 2 ಬಾರಿ ಸಿಎಂ ನೀಡಿದ ಕ್ಷೇತ್ರ ಪ್ರಗತಿಯಲ್ಲಿ ದಾಪುಗಾಲು ಹಾಕಬೇಕಿತ್ತು. ಆದರೆ ಎಲ್ಲಕ್ಕಿಂತ ಹಿಂದಿದೆ. ಲಂಬಾಣಿಗಳೇ ಅಧಿಕವಾಗಿರುವ ತಾಂಡಾಗಳಿರುವ ಇಲ್ಲಿ ಮೌಢ್ಯ ಮನೆ ಮಾಡಿದೆ. ಮಕ್ಕಳ ಮಾರಾಟದಂತಹ ಅನಿಷ್ಠಗಳು ಆಗಾಗ ತೆಲೆ ಎತ್ತಿ ರಾಜ್ಯವನ್ನೇ ಕಂಗೆಡಿಸುತ್ತಿವೆ.
ಜನಜೀವನ ಸುಧಾರಣೆ ಕನಸು: ಇಲ್ಲಿನ ಮುಲ್ಲಾಮಾರಿ ರೈತರನ್ನು ಉದ್ಧಾರ ಮಾಡಿಲ್ಲ. ಬದಲಾಗಿ ಆಗಾಗ ತೇಪೆ ಹಚ್ಚಿಕೊಳ್ಳುತ್ತ ಗುತ್ತಿಗೆದಾರರು, ಪುಢಾರಿಗಳ ಪಾಲಿನ ಹಿಂಡುವ ಹೈನಾಗಿದೆ. ಮುಲ್ಲಾಮಾರಿ ಯೋಜನೆ ದಷ್ಟಪುಷ್ಟವಾಗಿ ಎಲ್ಲರಿಗೂ ಅನುಕೂಲವಾಗಬೇಕು ಎಂಬ ವಿಶಾಲ ಪರಿಕಲ್ಪನೆ ಈಚೆಗಿನ ವರ್ಷಗಳಲ್ಲಿ ಇಲ್ಲಿಂದ ಗೆದ್ದು ಸದನ ಪ್ರವೇಶಿಸಿ ರಾಜಕೀಯ ಮಾಡುತ್ತಿರುವವರಲ್ಲಿ ಕಂಡದ್ದು ಅಷ್ಟಕ್ಕಷ್ಟೆ ಎಂಬುದು ವಿಷಾದಕರ ಸಂಗತಿ.
  ಗುಲ್ಬರ್ಗದಿಂದ ಸಂಪರ್ಕ ರಸ್ತೆ ಇಂದಿಗೂ ಸರಿಯಾಗಿಲ್ಲ. ಆಂತರಿಕ ರಸ್ತೆಗಳ ಬಗ್ಗೆ ಬರೆಯದಿರುವುದೇ ಲೇಸು. ಅಷ್ಟು ಹದಗೆಟ್ಟಿವೆ. ರೋಡ್ ಕಲ್ಲೂರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಚೆಟ್ಟಿನಾಡ್‌ನಂತರ ದೈತ್ಯ ಸಿಮೆಂಟ್ ಕಂಪನಿಗಳೂ ಬಂದರೂ ಈ ಭಾಗದ ಗ್ರಾಮೀಣ ಜನಜೀವನ ಸುಧಾರಣೆ ಕನಸಾಗೆ ಉಳಿದಿದೆ.
ಪ್ರಗತಿ ಮಾತ್ರ ಗಗನ ಕುಸುಮ: ಕಾಂಗ್ರೆಸ್ ಭದ್ರಕೋಟೆಯಾಗಿ 1957ರಿಂದ 89ರ ನಡುವಿನ ಎಲ್ಲಾ 8 ಚುನಾವಣೆಗಳಲ್ಲಿ ಹೆಸರು ಮಾಡಿದ್ದ ಚಿಂಚೋಳಿಗೆ ಇದೀಗ ಆ ಪಟ್ಟ ಉಳಿದಿಲ್ಲ. ಏಕೆಂದರೆ ವೀರೇಂದ್ರ ಪಾಟೀಲರು ಇರುವವರೆಗೂ ಇಲ್ಲಿ ಕಾಂಗ್ರೆಸ್ ಗಟ್ಟಿಯಾಗಿತ್ತು. ನಂತರ ಹೋರಾಟಗಾರ ವೈಜನಾಥ ಪಾಟೀಲ್ ಕಣಕ್ಕಿಳಿದಾಗ ಕಣದಲ್ಲಿ ಜೆಡಿಎಸ್ ಉದಯವಾಯ್ತು. ನಂತರ ಪುನರ್ವಿಂಗಡಣೆ ನಂತರ ಮೀಸಲು ಕಣವಾಯ್ತು. ಆಗ ಕಮಲ ಅರಳಿತು. ಹೀಗೆ ಕಾಂಗ್ರೆಸ್, ದಳ, ಕಮಲ ಎಂದು ಹಲವು ಪ್ರಮುಖ ರಾಜಕೀಯ ಪಕ್ಷಗಳನ್ನು ಅಪ್ಪಿಕೊಂಡರೂ ಈ ಕ್ಷೇತ್ರಕ್ಕೆ ಪ್ರಗತಿ ಮಾತ್ರ ಇಂದಿಗೂ ಗಗನ ಕುಸುಮ ಎಂಬುದೇ ದುರಂತ.
  ಅಮರ್ಜಾ ಅಣೆಕಟ್ಟೆಯಿಂದ ನಿರೀಕ್ಷಿತ ಹಸಿರು ಕ್ರಾಂತಿಯಾಗಿಲ್ಲ. ಈ ಯೋಜನೆ ರೈತರ ಪಾಲಿನ ಹೆಮ್ಮೆಯಾಗಬೇಕಿತ್ತು. ಆದರೇನು ಮಾಡುವುದು ಬದಲಾಗುತ್ತಿರುವ ರಾಜಕೀಯ, ದಿನಮಾನಗಳಲ್ಲಿ ಈ ಯೋಜನೆ ಗುತ್ತಿಗೆದಾರರ ಪಾಲಿನ ಸಂಪನ್ಮೂಲವಾಗುತ್ತಿದೆ.
ಚಂದ್ರಂಪಳ್ಳಿ ಯೋಜನೆಯಿಂದ ಅಲ್ಪಸ್ವಲ್ಪ ಅನುಕೂಲವಾದರೂ ರೈತರಿಗೆ ಇಲ್ಲಿಯೂ ಭ್ರಮನಿರಸನವಾಗಿದೆ. ಮುಖ್ಯವಾಗಿ ಇಲ್ಲಿಂದ ಗೆದ್ದು ಇದುವರೆಗೂ ಸದನ ಪ್ರವೇಶಿಸಿದ ಯಾರೊಬ್ಬರೂ ರೈತರ, ಮಧ್ಯಮ ವರ್ಗದವರ ಪರವಾಗಿ ತಮ್ಮ ಹರಿತ ಚಿಂತನೆ ಹರಿಬಿಡದೆ ಹೋಗಿದ್ದೇ ಚಿಂಚೋಳಿಯ ಪ್ರಗತಿಗೆ ದುರ್ದೆಸೆ ಬಂದೊದಗಲು ಕಾರಣ ಎಂದು ಜನರೇ ಚುನಾವಣೆ ಬಂದಾಗೊಮ್ಮೆ ಚರ್ಚಿಸುತ್ತಾರೆ.
ಮಕ್ಕಳ ಮಾರಾಟ ಕಪ್ಪು ಚುಕ್ಕೆ: ಹೆಚ್ಚಿನ ಸಂಖ್ಯೆಯಲ್ಲಿ ಲಂಬಾಣಿಗಳೇ ವಾಸವಾಗಿರುವುದರಿಂದ ಇಲ್ಲಿ ತಾಂಡಾ ಅಭಿವೃದ್ಧಿ ಆದ್ಯತೆ ಮೇರೆಗೆ ಕೈಗೊಳ್ಳಬೇಕಾಗಿತ್ತು. ಆದರೆ ಆಗಾಗ ಇಲ್ಲಿನ ತಾಂಡಾಗಳಿಂದ ಸದ್ದಾಗುವ ಮಕ್ಕಳ ಮಾರಾಟ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳನ್ನು ತಾವಾಗಿಯೇ ಸರ್ಕಾರಕ್ಕೆ ಒಪ್ಪಿಸುವಂತಹ ಕರಾಳ ಬೆಳವಣಿಗೆಗಳೇ ಕನ್ನಡಿ.
  ರಸ್ತೆ, ನೀರು, ಆರೋಗ್ಯ, ಶಿಕ್ಷಣದಂತಹ ಮೂಲಸೌಕರ್ಯಗಳೂ ಚಿಂಚೋಳಿ ಗಡಿಭಾಗ ತಲುಪಿಲ್ಲ ಎಂದ ಮೇಲೆ ಇಲ್ಲಿ ಯಾಕೆ ಹೀಗಾಗುತ್ತಿದೆ, ಮೌಢ್ಯಗಳೇಕೆ ಜೀವಂತವಾಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಲಂಬಾಣಿ ಸೇರಿದಂತೆ ಅನೇಕ ಅಲೆಮಾರಿ ಜನಾಂಗವನ್ನು ಇಲ್ಲಿ ರಾಜಕೀಯದವರು ಮತಬ್ಯಾಂಕ್ ಆಗಿಯೇ ಬಳಸುವ ಮನೋಧೋರಣೆ ಹೊಂದಿರುವುದೇ ಇಲ್ಲಿನ ಪ್ರಗತಿ ಹಸಿರು ಚಿಗುರದೆ ಮುರುಟಲು ಮೂಲ ಕಾರಣ.


ಚಿಂಚೋಳಿ ಹಿನ್ನೋಟ
- 1957, 1962, 1967- ವೀರೇಂದ್ರ ಪಾಟೀಲ್- ಕಾಂಗ್ರೆಸ್
- 1972, 1978, 1983- ದೇವೇಂದ್ರಪ್ಪ ಘಾಳಪ್ಪ- ಕಾಂಗ್ರೆಸ್
- 1985- ವೀರಯ್ಯ ಸ್ವಾಮಿ- ಕಾಂಗ್ರೆಸ್
- 1989- ವೀರೇಂದ್ರ ಪಾಟೀಲ್- ಕಾಂಗ್ರೆಸ್
- 1994 ವೈಜನಾಥ ಪಾಟೀಲ್- ಜೆಡಿಎಸ್
- 1999- ಕೈಲಾಸನಾಥ ಪಾಟೀಲ್- ಕಾಂಗ್ರೆಸ್
- 2004- ವೈಜನಾಥ ಪಾಟೀಲ್- ಜೆಡಿಎಸ್
- 2008- ಸುನೀಲ ವಲ್ಯಾಪೂರೆ- ಬಿಜೆಪಿ
ಚಿಂಚೋಳಿ ಉದ್ಧಾರಕರು ಗೆದ್ದು ಬರುವರೆ? ಇಲ್ಲಿನ ಮತದಾರರು ತಮ್ಮನ್ನು ಚುನಾವಣೆಯಲ್ಲಿ ಬಳಸಿಕೊಂಡು ನಂತರ ಬೀಸಾಡುವ ರಾಜಕೀಯದವರಿಂದ ಬೇಸತ್ತಿದ್ದಾರೆ. ಈ ಬಾರಿ ಕಣದಲ್ಲಿ ಕಾಂಗ್ರೆಸ್ ಡಾ. ಉಮೇಶ ಜಾಧವ ಅವರನ್ನು ಇಳಿಸಿದರೆ, ಕೆಜೆಪಿಯಿಂದ ಸುನೀಲ್ ವಲ್ಯಾಪುರೆ ಇದ್ದಾರೆ. ಇನ್ನೂ ಜೆಡಿಎಸ್ ಮಲ್ಲಿಕಾರ್ಜುನ ಗಾಜರೆ ಅವರನ್ನು ಕಣಕ್ಕಿಳಿಸಿದರೆ ಬಿಜೆಪಿ ರಮೇಶ ಯಾಕಾಪುರ ಅವರಿಗೆ ಅವಕಾಶ ಕಲ್ಪಿಸಿದೆ.
  ಮತದಾರರು “¾ÚáÛÁÚß ಹಿತವರು ಈ «ÛÄÊÁæà×ÚVæ’ ಎಂದು ಚಿಂತನೆ ಮಾಡುತ್ತಿದ್ದಾರೆ. ಈಗಾಗಲೇ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ವಲ್ಯಾಪುರೆ ಇಲ್ಲೀಗ Oæ”d®Ú’ ಮಾಡುತ್ತಿದ್ದಾರೆ. ಉಳಿದ ಮೂವರು ಕ್ಷೇತ್ರಕ್ಕೆ ಹೊಸ ಮುಖಗಳು. ಮತದಾರ ಈ ಬಾರಿ ಹಳೆ ಮುಖವನ್ನೇ ಬೆಂಬಲಿಸುವನೋ ಹೊಸಬರಿಗೆ ಮಣೆ ಹಾಕುವನೋ ಎಂಬುದೇ ಇಲ್ಲಿನ ಮತ ಸಮರದ ಕದನ ಕೂತೂಹಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.