ಮೂಲ ಸೌಲಭ್ಯ ಒದಗಿಸುವಲ್ಲಿ ಪಕ್ಷಗಳು ವಿಫಲ: ಜಯತೀರ್ಥ
ರಾಯಚೂರು: ನಗರದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸುವಲ್ಲಿ ಇದುವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳ ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಪ್ರಾಮಾಣಿಕವಾಗಿ ಜನರ ಸೇವೆ ಮಾಡಲು ಕಣಕ್ಕಿಳಿದಿರುವುದಾಗಿ ಪಕ್ಷೇತರ ಅಭ್ಯರ್ಥಿ ಜಯತೀರ್ಥ ಹೇಳಿದರು.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಜನತೆಗೆ ಪ್ರತಿ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ನೀರಿನ ಅಭಾವದ ಬಗ್ಗೆ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು.
ನಾನಾ ರೀತಿಯ ಸಮಸ್ಯೆ: ಅದೇ ರೀತಿ ನಗರದಲ್ಲಿ ಮೂಲಸೌಲಭ್ಯಗಳ ಕೊರತೆ ಸಾಕಷ್ಟಿದ್ದು, ಮಹಿಳೆಯರಿಗೆ ಶೌಚಾಲಯ, ಉತ್ತಮ ರಸ್ತೆಯ ಅಭಾವವಿದ್ದು, ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಂದಲೂ ಜನತೆ ದೂರವೇ ಉಳಿಯುವಂತಾಗಿದೆ ಎಂದು ದೂರಿದರು.
ಕಳೆದ 20ವರ್ಷಗಳಿಂದ ತಾವು ರಾಜಕೀಯ ಕ್ಷೇತ್ರದಲ್ಲಿದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೂ ಎಲ್ಲ ಪಕ್ಷಗಳು ತಮಗೆ ಅವಕಾಶ ನೀಡದ್ದರಿಂದ ಬೇಸತ್ತು ಸದ್ಯ ಪಕ್ಷೇತರರಾಗಿ ಕಣಕ್ಕಿಳಿದಿದ್ದಾಗಿ ತಿಳಿಸಿ, ತಮಗೆ ಎಲ್ಲ ಜಾತಿ ಜನಾಂಗದ ಮತದಾರರ ಸಂಪರ್ಕವಿದೆ. ಅವರೆಲ್ಲರ ಒತ್ತಾಸೆಯ ಮೇರೆಗೆ ಸ್ಪರ್ಧಿಸಿರುವುದಾಗಿ ಅವರು ಹೇಳಿದರು.
ನಗರದ ಪ್ರತಿಷ್ಠಿತ ಒಪೆಕ್ ಆಸ್ಪತ್ರೆಯು ಮುಚ್ಚಿದ್ದರಿಂದ ಹೈ.ಕ. ಭಾಗದ ರೋಗಿಗಳಿಗೆ ತೊಂದರೆಯಾಗಿದ್ದು, ಪ್ರಮುಖ ನಗರಗಳಿಗೆ ಚಿಕಿತ್ಸೆಗೆ ತೆರಳುವಂತಾಗಿದೆ. ಈ ನಿಟ್ಟಿನಲ್ಲಿ ಯಾಮೊಬ್ಬ ರಾಜಕಾರಣಿಯೂ ವಿಷಯ ಪ್ರಸ್ತಾಪಿಸುತ್ತಿಲ್ಲ. ಇದು ಆಯಾ ರಾಜಕೀಯ ಪಕ್ಷಗಳ ಬದ್ಧತೆ ಮತ್ತು ಕಳಕಳಿಯನ್ನು ಹೊರಹಾಕಿದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ವಿಜಯವಿಠ್ಠಲ, ಶ್ರೀನಿವಾಸ, ವರದರಾಜು ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

