ಜೆಡಿಎಸ್, ಬಿಜೆಪಿ ಭೀತಿಯಲ್ಲಿ ಕಾಂಗ್ರೆಸ್
ಕನ್ನಡಪ್ರಭ ವಾರ್ತೆ, ರಾಯಚೂರು, ಏ.23
ತುಂಗಭದ್ರಾ ಎಡದಂಡೆಯಿಂದ ನೀರಾವರಿ ಸೌಲಭ್ಯವಿದ್ದರೂ ರೈತರಿಗೆ ನೀರಿಲ್ಲದ ಸ್ಥಿತಿ. ಕುಡಿಯುವ ನೀರಿಗೂ ಬರ. ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಕ್ಷೇತ್ರದಲ್ಲಿ ಹರಿದರೂ ರೈತರ ಬದುಕು ಬವಣೆಗೆ ಕೊನೆಯಿಲ್ಲದ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಹೋದರರ ಮಧ್ಯೆ ಕಾದಾಟಕ್ಕೆ ಸಾಕ್ಷಿಯಾಗಿದೆ. ಹೊರಜಿಲ್ಲೆಯಿಂದ ಬಂದಿರುವವರು ಇಲ್ಲಿ ಬಿಜೆಪಿ ಅಭ್ಯರ್ಥಿ. ತ್ರಿಕೋನ ಸ್ಪರ್ಧೆಯ ಕಣವಿದು.
2008ರ ಚುನಾವಣೆಗೂ ಪೂರ್ವದಲ್ಲಿ ಕಲ್ಮಲಾ ವಿಧಾನಸಭೆ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿದ್ದ ಕ್ಷೇತ್ರವೀಗ ರಾಯಚೂರು ಗ್ರಾಮೀಣ ಕ್ಷೇತ್ರವಾಗಿ ಹೆಸರು ಬದಲಿಸಿಕೊಂಡಿದೆ. ಕ್ಷೇತ್ರದ ಹೆಸರು ಬದಲಾದರೂ ಹಣೆಬರೆಹ ಮಾತ್ರ ಈಗಲೂ ಅಷ್ಟಕ್ಕಷ್ಟೇ. ಅಭಿವೃದ್ಧಿ ಅಷ್ಟಕ್ಕಷ್ಟೇ.
ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಈ ಕ್ಷೇತ್ರದ ಮತದಾರರಿಗೆ ರಾಜಕೀಯ ನಾಯಕರ ಬಗ್ಗೆಯೇ ಬೇಸರವಿದೆ.
ಕಾಂಗ್ರೆಸ್ ಗೆಲವು: ಈ ಮೊದಲಿನ ಕಲ್ಮಲಾ ಮತ್ತು ಈಗಿನ ಗ್ರಾಮೀಣ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಇದುವರೆಗೆ ನಡೆದ ಚುನಾವಣೆಗಳಲ್ಲಿ ಒಟ್ಟು ಆರು ಬಾರಿ ಕಾಂಗ್ರೆಸ್ ಗೆಲವು ಕಂಡಿದೆ. ಒಮ್ಮೆ ಜನತಾದಳ ಮತ್ತು ಪಕ್ಷೇತರರೂ ಆಯ್ಕೆಯಾಗಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಕಾಂಗ್ರೆಸ್ ನ ರಾಜಾ ರಾಯಪ್ಪ ನಾಯಕ ಪ್ರತಿನಿಧಿಸುತ್ತಿದ್ದಾರೆ. ಅವರೇ ಈ ಬಾರಿ ಪುನಾ ಕಾಂಗ್ರೆಸ್ ಅಭ್ಯರ್ಥಿ. ಇವರ ಕಿರಿಯ ಸಹೋದರ ರಾಜಾ ಅಮರೇಶ್ವರ ನಾಯಕರೇ ಜೆಡಿಎಸ್ನಿಂದ ಪ್ರತಿಸ್ಪರ್ಧಿ.
ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಅಮರೇಶ್ವರ ನಾಯಕರಿಗೆ ಜೆಡಿಎಸ್ ಪಕ್ಷ ಸಾಕಷ್ಟು ಮುಂಚಿತವಾಗಿಯೇ ಟಿಕೆಟ್ ನೀಡಿದ್ದರಿಂದ ಕ್ಷೇತ್ರದಲ್ಲಿ ಭರಾಟೆಯ ಪ್ರಚಾರ ಕೈಗೊಂಡು ಸಹೋದರನಿಗೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ತೂಗಿ ಅಳೆದು ಟಿಕೆಟ್ ತಡವಾಗಿ ನೀಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ರಾಯಪ್ಪ ನಾಯಕ ಇನ್ನಷ್ಟೇ ಪ್ರಚಾರ ಆರಂಭಿಸಬೇಕಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿರುವುದು ಸ್ಪಷ್ಟ. ಇಲ್ಲಿ ಸ್ಪರ್ಧಿಸಿರುವ ರಾಜಾ ರಾಯಪ್ಪ ನಾಯಕ, ರಾಜಾ ಅಮರೇಶ್ವರ ನಾಯಕ ಹಾಗೂ ಬಿಜೆಪಿಯ ತಿಪ್ಪರಾಜು ಅವರು ಸ್ಥಳೀಯರಲ್ಲ. ಇಲ್ಲಿಯವರೆಗೆ ಸ್ಥಳೀಯರು ಈ ಕ್ಷೇತ್ರ ಪ್ರತಿನಿಧಿಸಲು ಪಕ್ಷಗಳು ಅವಕಾಶ ನೀಡದ್ದರಿಂದ ಅಭಿವೃದ್ಧಿ ಗೌಣ ಎಂಬುದು ಮತದಾರರ ಆರೋಪ.
ಬಿಜೆಪಿಯ ತಿಪ್ಪರಾಜು ದೇವದುರ್ಗ ಶಾಸಕ ಶಿವನಗೌಡ ನಾಯಕರ ಆಪ್ತ ಸಹಾಯಕರಾಗಿದ್ದವರು. ಯಾದಗಿರಿಯ ಜಿಲ್ಲೆಯ ಶಹಾಪುರದವರಾಗಿರುವ ಇವರ ಪರಿಚಯ ಮತದಾರರಿಗೆ ಈಚೆಗೆ ಆಗಿದೆ. ಶಿವನಗೌಡ ನಾಯಕರಿಂದಲೇ ಎಲ್ಲ ರೀತಿಯ ಬೆಂಬಲವಿದೆ.
ಭಾರೀ ಪೈಪೋಟಿ: ಕ್ಷೇತ್ರದ ಜನಸಂಖ್ಯೆ 256006 ರಷ್ಟಿದೆ. 2013ರ ಜ.1ರ ಮಾಹಿತಿಯಂತೆ ಒಟ್ಟು 174459 ಮತದಾರರಿದ್ದಾರೆ. ಎಸ್ಟಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲೀಗ ಕಾಂಗ್ರೆಸ್ನ ವೈಫಲ್ಯವನ್ನು ಮತವಾಗಿ ಪರಿವರ್ತಿಸಲು ಜೆಡಿಎಸ್ನ ಅಮರೇಶ್ವರ ನಾಯಕ ಭಾರೀ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯ ತಿಪ್ಪರಾಜು ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಇಲ್ಲಿ ತ್ರಿಕೋಣ ಸ್ಪರ್ಧೆ ಸದ್ಯಕ್ಕಿದೆ.
ಬಿಜೆಪಿಯ ತಿಪ್ಪರಾಜು ಅವರು ಕಳೆದ ಬಹುತೇಕ ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಂಚರಿಸಿ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದು, ಮತದಾರರ ಓಲೈಕೆಗೆ ಅಗತ್ಯವಿರುವ ಎಲ್ಲ ಆಸೆ, ಆಮಿಷಗಳನ್ನೊಡ್ಡಿರುವುದು ರಹಸ್ಯವಾಗಿ ಉಳಿದಿಲ್ಲ. ಜೆಡಿಎಸ್ ಪ್ರಚಾರದ ವಿಷಯದಲ್ಲಿ ಮುಂದಿದೆ. ಅಮರೇಶ್ವರ ನಾಯಕ ಸರಳ ಸಜ್ಜನಿಕೆಯ ವ್ಯಕ್ತಿ ಎಂಬ ಹೆಸರಿದೆ.
ಅಂದು-ಇಂದು: 2008ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜಾ ರಾಯಪ್ಪ ನಾಯಕ ಅವರು ಜೆಡಿಎಸ್ ನ ರಾಜಾ ರಂಗಪ್ಪ ನಾಯಕ ಅವರನ್ನು ಸೋಲಿಸಿದ್ದರು. ಆದರೆ ಚುನಾವಣೆಯ ನಂತರದಲ್ಲಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಅಷ್ಟಾಗಿ ಆಸಕ್ತಿ ರಾಯಪ್ಪ ನಾಯಕ ತೋರಲಿಲ್ಲ ಎಂಬ ಆರೋಪ ವ್ಯಾಪಕ.
ಜೆಡಿಎಸ್ನ ರಾಜಾ ಅಮರೇಶ್ವರ ನಾಯಕ ಅಥವಾ ಬಿಜೆಪಿಯ ತಿಪ್ಪರಾಜು ಅವರು ಸಮರ್ಥವಾಗಿ ಬಳಸಿಕೊಂಡು ಗೆಲುವು ಕಾಣುತ್ತಾರೆಂಬುದು ಈಗ ಎದ್ದಿರುವ ಪ್ರಶ್ನೆ. ಜೆಡಿಯುನ ವೀರನಗೌಡ ಅರಶಿಣಗಿ, ಕೆಜೆಪಿಯ ಮಲ್ಲೇಶ ನಾಯಕ ಅವರು ಕಣದಲ್ಲಿರುವ ಸ್ಥಳೀಯರಾದರೂ ಇವರ ಪ್ರಭಾವ ಅಷ್ಟಕ್ಕಷ್ಟೇ. ಹೀಗಾಗಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮಧ್ಯೆಯೇ ತ್ರಿಕೋಣ ಫೈಟ್. ಅಂತಿಮವಾಗಿ ಮತದಾರರು ಯಾರ ಪರ ನಿಲ್ಲಲಿದ್ದಾರೆಂಬುದು ಸದ್ಯಕ್ಕೆ ಅಸ್ಪಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

