ರಾಯಚೂರು

ರೌಡಿ ಶೀಟರ್‌ಗಳ ಮೇಲೆ ಖಾಕಿ ಕೆಂಗಣ್ಣು

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.26
ವಿಧಾನಸಭೆ ಮತಸಮರದ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಮುಕ್ತ ಹಾಗೂ ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗೆ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಕಿಪಡೆ ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಪ್ರಮುಖವಾಗಿ ಗಲಭೆಗಳು, ಪ್ರಚೋದನೆ ಪ್ರಕರಣಗಳಲ್ಲಿ ಒಳಗೊಂಡಂತಹ ರೌಡಿ ಶೀಟರ್‌ಗಳ ಚಲನವಲನದ ಮೇಲೆ ನಿಗಾ ಇಡುವ ಕೆಲಸ ಕಳೆದ 2 ವಾರಗಳಿಂದ ಆದ್ಯತೆಯಲ್ಲಿ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ವಿಧಾನಸಭೆ ಮತದಾನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡತಹ ಕ್ರಮಗಳ ಕುರಿತಂತೆ 'ಕನ್ನಡಪ್ರಭ' ಜೊತೆ ಮಾತನಾಡಿರುವ ಜಿಲ್ಲಾ ಎಸ್ಪಿ ಎನ್ ಸತೀಶಕುಮಾರ್ ಜನತೆ ಯಾವುದೇ ಭೀತಿ ಇಲ್ಲದೆ ಮುಕ್ತವಾಗಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಪರಿಸರ ತಾವು ನಿರ್ಮಿಸುವ ಭರವಸೆ ನೀಡಿದ್ದಾರೆ.
1,200 ರೌಡಿ ಶೀಟರ್ ಮೇಲೆ ನಿಗಾ: ಜಿಲ್ಲೆಯ 7 ಜಿಲ್ಲೆಗಳಲ್ಲಿ ನಡೆಸಿರುವ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪೊಲೀಸರು ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಹೆಸರಿರುವ ಹಾಗೂ ಗಲಭೆಗೆ ಕಾರಣರಾಗಬಹುದು ಎಂಬ ಗುಮಾನಿ ಇರುವ ವಿವಿಧ ಹಂತಗಳಲ್ಲಿ 1,200 ರೌಡಿ ಶೀಟರ್ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಿದ್ದಾರೆ.
ಇಂತಹ ವ್ಯಕ್ತಿಗಳಲ್ಲಿ ಅನೇಕರಿಂದ ಮುಚ್ಚಳಿಕೆ ಪತ್ರ, ಬಾಂಡ್ ಬರೆಸಿಕೊಂಡು ಬಿಡಲಾಗಿದೆ. ಕೆಲವರನ್ನು ವಶಕ್ಕೂ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇನ್ನೂ ಕೆಲವರ ಚಲನವಲನಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಿಆರ್‌ಪಿಸಿ ಹಾಗೂ ಐಪಿಸಿ ಪ್ರಕಾರ ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಸತೀಶಕುಮಾರ್ ಹೇಳಿದ್ದಾರೆ.
ಆಯುಧಗಳ ಠೇವಣಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ಪರವಾನಿಗೆಯೊಂದಿಗೆ ಆಯುಧ ಪಡೆದ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ ನಾಲ್ಕು ಪ್ರಕರಣಗಳನ್ನು ಹೊರತು ಪಡಿಸಿ ಇನ್ನುಳಿದಂತೆ 2000 ಆಯುಧಗಳನ್ನು ವಿವಿಧ ಠಾಣೆಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಚುನಾವಣೆ ಪ್ರಕ್ರಿಯೆ ಪೂರ್ಣ ಮುಗಿದ ನಂತರವೇ ಆಯುಧಗಳನ್ನು ಪರವಾನಗಿದಾರರಿಗೆ ಮರಳಿಸಲಾಗುತ್ತಿದೆ ಎಂದು ಸತೀಶ ಕುಮಾರ್ ಹೇಳಿದ್ದಾರೆ.
ಅತಿಸೂಕ್ಷ್ಮ- ಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 2037 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಇವುಗಳ ಪೈಕಿ 510 ಅತಿ ಸೂಕ್ಷ್ಮ ಹಾಗೂ 226 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಜಿಲ್ಲೆಯ ಆಳಂದ 150 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಅಫಜಲ್ಪುರ(95 ಮತಗಟ್ಟೆ) ಗುರ್ತಿಸಿಕೊಂಡಿದೆ. ಕೇಂದ್ರ ಚುನಾವಣೆ ವೀಕ್ಷಕರ ಸಲಹೆ- ಸೂಚನೆಗಳನ್ನಾಧರಿಸಿಯೂ ಇಲ್ಲಿ ಮತಗಟ್ಟೆಗಳ ವಿಂಗಡಣೆ ನಡೆಯುತ್ತದೆ. ಹೀಗಾಗಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಯಾವಾಗ ಬೇಕಾದರೂ ಹೆಚ್ಚು- ಕಮ್ಮಿಯಾಗುವ ಸಾಧ್ಯತೆಗಳಿರುತ್ತವೆ ಎಂದು ಸತೀಶಕುಮಾರ್ ಹೇಳಿದ್ದಾರೆ.
ಈ ಉಭಯ ಕ್ಷೇತ್ರಗಳು ಅಂತಾರಾಜ್ಯ ಗಡಿಗೆ ಹೊಂದಿಕೊಂಡಿವೆ. ಈಗಾಗಲೇ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸರಹದ್ದಿನಿಂದ ಜಿಲ್ಲೆಗೆ ಮದ್ಯ, ಹಣ, ಇತರೆ ಆಮಿಷಕ್ಕೆ ಬಳಸುವ ವಸ್ತುಗಳು ಬರದಂತೆ ತೀವ್ರ ನಿಗಾ ಇಡಲಾಗಿದೆ ಎಂದು ಎಸ್ಪಿ ಸತೀಶಕುಮಾರ್ ಹೇಳಿದ್ದಾರೆ.
ವಾರಕಾಲ ಕಟ್ಟೆಚ್ಚರ: 9 ಕ್ಷೇತ್ರಗಳಲ್ಲಿ ಪೊಲೀಸ್ ತನ್ನ ತಂಡಗಳೊಂದಿಗೆ ಹಗಲು- ರಾತ್ರಿ ಕಟ್ಟೆಚ್ಚರ ಇಡಲು ನಿರ್ಧರಿಸಿದೆ. ಈಗಾಗಲೇ ಜಿಲ್ಲಾಡಳಿತದ ಜೊತೆ ಅಲ್ಲಿನ ಅನೇಕ ತಂಡಗಳೊಂದಿಗೆ ಜಂಟಿ ಸಭೆಗಳು ನಡೆದಿವೆ.
ವಾರಕಾಲ ಯಾವುದೇ ಅಕ್ರಮಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಸಾಮಾನ್ಯ ಜನತೆ ಯಾವುದೇ ಅಕ್ರಮಗಳ ವಾಸನೆ ಅರಿತದ್ದೇ ಆದಲ್ಲಿ ತಕ್ಷಣ ಪೊಲೀಸ್ ನಿಯಂತ್ರಣ ಕಚೇರಿ ದೂರವಾಣಿ ಸಂಖ್ಯೆ 100ಕ್ಕಾಗಲಿ, ಜಿಲ್ಲಾಡಳಿತದ ಸಹಾಯವಾಣಿಗಾಗಲಿ ಕರೆ ಮಾಡಿ ಮಾಹಿತಿ ಕೊಟ್ಟಲ್ಲಿ ತಕ್ಷಣ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.


ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ


 ಆಳಂದ- 150
 ಗುಲ್ಬರ್ಗ (ಉ)- 73
 ಗುಲ್ಬರ್ಗ (ದ)- 74
 ಗುಲ್ಬರ್ಗ ಗ್ರಾ)- 84
 ಚಿಂಚೋಳಿ- 63
 ಸೇಡಂ- 67
 ಚಿತ್ತಾಪುರ- 64
 ಜೇವರ್ಗಿ- 72
 ಅಫಜಲ್ಪುರ- 95

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.