ರಾಯಚೂರು

ವಿಮಾ ಕಾಯ್ದೆ ತಿದ್ದುಪಡಿಗೆ ವಿರೋಧ

Published On :

ರಾಯಚೂರು: ದೇಶದ ಸಾರ್ವಜನಿಕ ರಂಗದ ವಿಮಾ ಕ್ಷೇತ್ರವನ್ನು ಖಾಸಗಿ ಬಂಡವಾಳಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತುತ ವಿಮಾ ಕಾಯ್ದೆ ಮತ್ತು ಸಾಮಾನ್ಯ ವಿಮಾ ವ್ಯವಹಾರ ರಾಷ್ಟ್ರೀಕರಣ ಕಾಯ್ದೆಗೆ ತಿದ್ದುಪಡಿ ತಂದು ಸಮಗ್ರ ವಿಮಾ ಮಸೂದೆ ಜಾರಿಗೆ ಪ್ರಸಕ್ತ ಅಧಿವೇಶನದಲ್ಲಿಯೇ ಮುಂದಾಗಿರುವುದನ್ನು ವಿಮಾ ನೌಕರರ ಸಂಘ ಖಂಡಿಸಿದೆ.
ಈ ಕುರಿತು ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ರವಿ ಮಾತನಾಡಿ, ಸಾರ್ವಜನಿಕ ಕ್ಷೇತ್ರದ ವಿಮಾ ರಂಗದ ಖಾಸಗೀಕರಣ ವಿರೋಧಿಸಿ ಕಳೆದ 2 ದಶಕಗಳಿಂದ ವಿಮಾ ನೌಕರರ ಸಂಘದ ಪದಾಧಿಕಾರಿಗಳು ಹೋರಾಟ ನಡೆಸುತ್ತಿದ್ದಾರೆ. ದೇಶದ ಜನತೆಯು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ವಸ್ತುಸ್ಥಿತಿ ಹೀಗಿದ್ದರೂ, ಕೇಂದ್ರ ಸರ್ಕಾರ ವಿಮಾ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿರುವುದು ದುರದೃಷ್ಟಕರ ಸಂಗತಿ ಎಂದು ಟೀಕಿಸಿದರು.
ಖಾಸಗೀಕರಣದ ಹುನ್ನಾರ: ಕೇಂದ್ರ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ ಈ ಸಮಗ್ರ ವಿಮಾ ತಿದ್ದುಪಡಿ ಮಸೂದೆ 2008ರ ಜಾರಿಯಿಂದ ವಿಮಾ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಸದ್ಯದ ಶೇ.26ರಿಂದ ಶೇ.49ಕ್ಕೇರಿಸಲಿದೆ. ಹಾಗೆಯೇ ಸಾಮಾನ್ಯ ವಿಮಾ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆಯನ್ನು ದಾಖಲಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ವಿಮಾ ಕಂಪನಿಗಳು ಬಂಡವಾಳ ಶೇಖರಣೆಗೆ ಮಾರುಕಟ್ಟೆಗೆ ಹೋಗುವ ಅವಕಾಶ ನೀಡಲಾಗುತ್ತದೆ. ಇದು ನೇರವಾಗಿ ನಾಲ್ಕು ಸಾರ್ವಜನಿಕ ಕಂಪನಿಗಳ ಖಾಸಗೀಕರಣದ ಹುನ್ನಾರವಾಗಿದೆ ಎಂದು ಆರೋಪಿಸಿದರು.
2008ರಲ್ಲಿ ವಿಶ್ವದಾದ್ಯಂತ ಆರ್ಥಿಕ ಕುಸಿತದಿಂದ ಅಲ್ಲಿನ ಅರ್ಥ ವ್ಯವಸ್ಥೆಯ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮವಾಗಿತ್ತು. ಆಗ ವಿದೇಶದಲ್ಲಿ ಅಲ್ಲಿನ ಖಾಸಗಿ ಬ್ಯಾಂಕುಗಳು, ವಿಮಾ ಕಂಪನಿಗಳು ದಿವಾಳಿಯ ಅಂಚಿಗೆ ಬಂದಿದ್ದವು. ಅದರಿಂದ ಎಚ್ಚೆತ್ತ ಅಲ್ಲಿನ ಸರ್ಕಾರಗಳು ನೇರವಾಗಿ ಖಾಸಗಿ ಸಂಸ್ಥೆಗಳನ್ನು ತಮ್ಮ ವಶಕ್ಕೆ ಪಡೆಯುವ ಮೂಲಕ ಪರಿಸ್ಥಿತಿ ನಿಭಾಯಿಸುವ ಕಾರ್ಯ ಮಾಡಿದ್ದವು. ಆದರೆ ದೇಶದಲ್ಲಿ ಮಾತ್ರ ಬ್ಯಾಂಕ್, ವಿಮಾ ಸಂಸ್ಥೆಗಳು ಅಬಾಧಿತವಾಗಿದ್ದವು ಎನ್ನುವುದಕ್ಕೆ ಅವುಗಳು ಸಾರ್ವಜನಿಕ ವಲಯದಲ್ಲಿದ್ದವು ಎಂಬುದನ್ನು ಕೇಂದ್ರ ಮನಗಾಣಬೇಕಿದೆ ಎಂದು ಹೇಳಿದರು.
ಋಣಾತ್ಮಕ ಪ್ರಗತಿ: ಕೇಂದ್ರ ಸರ್ಕಾರದ ಪ್ರಯತ್ನಗಳು ಅನುಮಾನಾಸ್ಪದವಾಗಿದೆ. ದೇಶದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಿಮಾ ಕಂಪನಿಗಳು ತಮ್ಮ ಮಾತೃ ದೇಶಗಳಲ್ಲಿ ತೀವ್ರ ಸಂಕಷ್ಟಗಳಿಗೆ ಗುರಿಯಾಗಿವೆ. ಜಾಗತಿಕ ದೈತ್ಯ ವಿಮಾ ಕಂಪನಿಗಳು ಅಲ್ಲಿನ ಜನರ ವಿಶ್ವಾಸವನ್ನೇ ಕಳೆದುಕೊಂಡಿದ್ದು ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿವೆ. ಮುಂದಿನ ವರ್ಷಗಳಲ್ಲಿ ಈ ಖಾಸಗಿ ಕಂಪನಿಗಳು ಋಣಾತ್ಮಕ ಪ್ರಗತಿ ದಾಖಲಿಸಲಿವೆ ಎಂದು ಜಾಗತಿಕ ಆರ್ಥಿಕ ಸಮೀಕ್ಷೆ ಹೇಳಿದೆ.
ವಸ್ತುಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರವು ಸಾರ್ವಜನಿಕ ವಿಮಾ ರಂಗವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಮುಕ್ತ ಪ್ರವೇಶ ನೀಡುವ, ಸಾಮಾನ್ಯ ವಿಮೆಯ ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಸಮಗ್ರ ವಿಮಾ ಮಸೂದೆ ಸಾರ್ವಜನಿಕರ ವಿರೋಧದ ನಡುವೆಯೂ ಮಂಡಿಸಲು ಹೊರಟಿರುವುದನ್ನು ಅವರು ಖಂಡಿಸಿದರು.
ಹಿತಾಸಕ್ತಿಗೆ ವಿರುದ್ಧ: ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳದ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿದ ಹಣಕಾಸು ಸಚಿವಾಲಯದ ಸ್ಥಾಯಿ ಸಮಿತಿಯು, ಸದ್ಯದ ಪರಿಸ್ಥಿತಿಯಲ್ಲಿ ವಿದೇಶಿ ಬಂಡವಾಳದ ಪ್ರಮಾಣ ಹೆಚ್ಚಳದ ಅವಶ್ಯಕತೆಯಿಲ್ಲ. ಬದಲಾಗಿ ದೇಶೀಯವಾಗಿ ಲಭ್ಯವಿರುವ ಖಾಸಗೀ ಬಂಡವಾಳ ಹೂಡಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದೆ ಎಂದು ತಿಳಿಸಿದರು. ಸ್ಥಾಯಿ ಸಮಿತಿಯ ಈ ಶಿಫಾರಸು ಕಡೆಗಣಿಸಿರುವ ಕೇಂದ್ರ ಸರ್ಕಾರದ ಕ್ರಮವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅಲ್ಲದೇ ದೇಶದ ಆಂತರಿಕ ಉಳಿತಾಯದ ಮೇಲೆ ನೇರ ಹಿಡಿತ ಸಾಧಿಸುವ ಜಾಗತಿಕ ಹಣಕಾಸು ಬಂಡವಾಳದ ಪ್ರಯತ್ನಕ್ಕೆ ಕೆಂಪು ಹಾಸಿನ ಸ್ವಾಗತ ಕೋರುವ ಸಮಗ್ರ ವಿಮಾ ಮಸೂದೆಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವುದರಿಂದ ಕೇಂದ್ರ ಸರ್ಕಾರವು ಈ ಮಸೂದೆಯ ಮಂಡನೆ ಕೈ ಬಿಡಬೇಕು ಎಂದು ದೇಶದ ಎಲ್ಲ  ವಿಮಾ ನೌಕರರು ಒತ್ತಾಯಿಸುತ್ತಲೇ ಬಂದಿದ್ದಾರೆಂದು ತಿಳಿಸಿದರು.
ಜನ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಈ ಮಸೂದೆಯನ್ನು ಸಂಸತ್ತಿನ ಈ ಅಧಿವೇಶನದಲ್ಲಿ ಮಂಡಿಸಿ, ಅಂಗೀಕಾರವಾದಲ್ಲಿ ದೇಶಾದ್ಯಂತ ವಿಮಾ ನೌಕರರು ಒಂದು ದಿನದ ಮುಷ್ಕರಕ್ಕೆ ಮುಂದಾಗುವುದಾಗಿ ಅವರು ಎಚ್ಚರಿಸಿ, ದೇಶದ ಸ್ವಾಯತ್ತ ಆರ್ಥಿಕತೆಗೆ ಬದ್ಧವಾಗಿರುವ ವಿಮಾ ನೌಕರರ ಹೋರಾಟವನ್ನು ಸಾರ್ವಜನಿಕರು ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಈ ವೇಳೆ ವಿಮಾ ನೌಕರರ ಸಂಘದ ಅಧ್ಯಕ್ಷ ಶರಣಗೌಡ, ಸುಧೀರ್, ವೈ. ಬಸವರಾಜ್, ಮೃತ್ಯುಂಜಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.