ಮಸ್ಕಿ; ದ್ವಿತೀಯ ಇನ್ನಿಂಗ್ಸ್ ವಿನ್ನರ್?
ರಾಯಚೂರು: ಕಳೆದ ಬಾರಿ ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮ ಹೊಸ ಕ್ಷೇತ್ರವೆಂಬ ಹೆಗ್ಗಳಿಕೆ. ಹಾಗಾಗಿ ಹೊಸ ಭರವಸೆಗಳ ಮಹಾಪೂರ. ಆದರೆ ನಿರೀಕ್ಷೆಯಂತೆ ಮಸ್ಕಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿಲ್ಲ. ಬಿಜೆಪಿ ಸರ್ಕಾರದ ರಾಜಕೀಯ ದೊಂಬರಾಟದ ಫಲವಾಗಿ ಕ್ಷೇತ್ರದ ಏಳಿಗೆ ಮರೀಚಿಕೆಯಾಯಿತು. ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ಮಧ್ಯೆಯೇ ಹಣಾಹಣಿ.
2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮ ಹುಟ್ಟಿಕೊಂಡ ಕ್ಷೇತ್ರ ಮಸ್ಕಿಯಲ್ಲಿ ಹತ್ತಾರು ಕನಸುಗಳೊಂದಿಗೆ ಮತದಾರರು ಮತದಾನಕ್ಕೆ ಸಜ್ಜಾಗಿದ್ದರು. ಇನ್ನಾದರೂ ಕ್ಷೇತ್ರದ ಬಹುದಿನದಳ ಸಮಸ್ಯೆಗಲಿಗೆ ಪರಿಹಾರ ದೊರೆತೀತೆಂದು ನಂಬಿದ್ದರು. ಸರ್ಕಾರದಿಂದ ದೊರೆಯದ ಸೂಕ್ತ ಬೆಂಬಲದಿಂದ ಸಮಸ್ಯೆಗಳು ಬಹುತೇಕ ಹಾಗೆಯೇ ಉಳಿದಿವೆ.
ಸಿಂಧನೂರು, ಮಾನವಿ ಹಾಗೂ ಲಿಂಗಸ್ಗೂರು ತಾಲೂಕಿನ ಕೆಲ ಗ್ರಾಮಗಳನ್ನು ಸೇರಿಸಿ ರಚಿಸಿದ ಮಸ್ಕಿ ಎಸ್ಟಿ ಮೀಸಲು ಕ್ಷೇತ್ರದಲ್ಲಿ 2,37,833 ಜನಸಂಖ್ಯೆಯಿದೆ. 1,62,678 ಮತದಾರರಿದ್ದಾರೆ. ಅಭಿವೃದ್ಧಿಯಿಂದ ದೂರ ಸಮಸ್ಯೆಗಳಿಗೆ ತೀರಾ ಹತ್ತಿರದಲ್ಲಿದ್ದ ಹಿಂದುಳಿದ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನೂ ಬರವಿಲ್ಲ.
ಗುಳೆ ಅಧಿಕ: ಬೇಸಿಗೆಯಲ್ಲಿ ಕುಡಿಯುವ ನೀರಿನ ಬರ. ಉದ್ಯೋಗಕ್ಕೆ ಪರದಾಟ. ಪರಿಣಾಮ ಅನೇಕ ಗ್ರಾಮಗಳಿಂದ ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಹೊರರಾಜ್ಯಗಳಿಗೆ ದುಡಿಮೆ ಅರಸಿ ಪ್ರತಿವರ್ಷ ಹೋಗುವವರ ಸಂಖ್ಯೆಯಿಲ್ಲಿ ಅಧಿಕ. ಉದ್ಯೋಗ ಖಾತ್ರಿ ಯೋಜನೆ ಜಾರಿಯಾದರೂ ಅದರ ಕೂಲಿ ಪಾವತಿ ವಿಳಂಬ ಖಂಡಿಸಿ ಸ್ವತ- ಕ್ಷೇತ್ರದ ಬಿಜೆಪಿ ಶಾಸಕ ಪ್ರತಾಪಗೌಡ ಪಾಟೀಲರು ಸಭೆಗಳಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕ್ಷೇತ್ರದ ವಾಸ್ತವ ಸ್ಥಿತಿಗೆ ಸಾಕ್ಷಿ.
ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ಪ್ರತಾಪಗೌಡ ಪಾಟೀಲರು ಈ ಬಾರಿ ಕಾಂಗ್ರೆಸ್ಗೆ ಜಿಗಿದು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿದ್ದಾಗ ಅವರೊಂದಿಗಿದ್ದ ಅವರ ಮಾವ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಅವರೇ ಸದ್ಯ ಕೆಜೆಪಿ ಅಭ್ಯರ್ಥಿ ಹಾಗೂ ಪ್ರಬಲ ಪೈಪೋಟಿಯೂ ಹೌದು.
ನೇರ ಹಣಾಹಣಿ: ಇನ್ನುಳಿದಂತೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಂಕರ್ ಮೇದಾರ್, ಬಿಎಸ್ಸಾರ್ ಕಾಂಗ್ರೆಸ್ ನಿಂದ ಶೇಖರಪ್ಪ ನಾಯಕ ಹಾಗೂ ಜೆಡಿಎಸ್ ನಿಂದ ಅಮರೇಶ ನಾಯಕ ಕಣದಲ್ಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಣದಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ಮಧ್ಯವೇ ನೇರ ಹಣಾಹಣಿ ಕಂಡುಬಂದಿದೆ. ಇನ್ನುಳಿದ ಪಕ್ಷದ ಅಭ್ಯರ್ಥಿಗಳೂ ಸಹ ಗೆಲವಿಗೆ ಪ್ರಯತ್ನಿಸುತ್ತಿದ್ದಾರೆ.
ಕಳೆದ 2008ರ ಚುನಾವಣೆಯಲ್ಲಿ ಹೊಸದಾಗಿ ರಚಿತ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲರಿಗೆ ಆಗ ಯಡಿಯೂರಪ್ಪ ಹವಾದಿಂದಾಗಿ ಗೆಲುವು ದಕ್ಕಿತು. ಆದರೆ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಾಥ್ ದೊರೆಯಲಿಲ್ಲ.
ಮಸ್ಕಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸುವ ಪ್ರಯತ್ನ ಕಟ್ಟಕಡೆಗೆ ಸಾಕಾರಗೊಂಡರೂ ಮೂಲಸೌಲಭ್ಯಗಳ
ಆರೋಗ್ಯ ಸೇವೆಗಳ ಕೊರತೆ, ಮೂಲಸೌಲಭ್ಯಗಳಿಗೆ ಪರದಾಟ. ರಸ್ತೆಗಳ ದುಸ್ಥಿತಿಗೆ ಸಿಂಧನೂರಿನಿಂದ ಮಸ್ಕಿ ಸಂಪರ್ಕ ರಸ್ತೆ ಹಾಗೂ ಸಿಂಧನೂರಿನಿಂದ ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ತಾವರಗೇರಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಉದಾಹರಣೆ. ಈ ರಸ್ತೆಗಳಲ್ಲಿ ದಿನವೂ ಸಂಚರಿಸುವವರು ಸರ್ಕಾರವನ್ನು ಹಿಗ್ಗಾಮುಗ್ಗಾ ಜರಿಯದೇ ಬಿಡುವುದಿಲ್ಲ. ಅಷ್ಟರಮಟ್ಟಿಗೆ ರಸ್ತೆಗಳಲ್ಲಿ ತಗ್ಗುಗಳಿವೆ. ಏಳುತ್ತಾ ಬೀಳುತ್ತಾ ಸಾಗುವುದು ಇಲ್ಲಿ ನಿತ್ಯದ ಕರ್ಮ. ಪ್ರಮುಖ ರಸ್ತೆಗಳ ಸ್ಥಿತಿ ಹೀಗಾದರೆ ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆಗಳಲ್ಲಿ ಸಂಚಾರ ಜೀವಕ್ಕೆ ಸಂಚಕಾರ.
ಕ್ಷೇತ್ರದಲ್ಲಿಯೇ ತುಂಗಭದ್ರಾ ಎಡದಂಡೆ ಕಾಲುವೆಯಿದ್ದರೂ ಕುಡಿಯುವ ನೀರು, ಬೆಳೆಗಳಿಗೆ ಸಮರ್ಪಕ ನೀರೊದಗದಿರುವುದು ಸ್ಪಷ್ಟ. ಹಾಗಾಗಿ ಜನತೆಗೆ ಗೋಳು ತಪ್ಪಲಿಲ್ಲ ಎಂಬುದು ಜನರ ಅಳಲು. ಹೊಸ ಕ್ಷೇತ್ರದ ಜನತೆಯ ನಿರೀಕ್ಷೆಗೆ ತಣ್ಣೀರು, ಕಣ್ಣೀರೇ ಗತಿಯಾಯಿತು.
ಅಂದು-ಇಂದು: 2008ರಲ್ಲಿ ಆಗಷ್ಟೇ ಹುಟ್ಟಿದ್ದ ಮಸ್ಕಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪಗೌಡ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ಆದರೆ ಆನಂತರದಲ್ಲಿ ಅವರು ನಿರೀಕ್ಷಿಸಿದಂತೆ ಅಭಿವೃದ್ಧಿ ಸಾಗಲಿಲ್ಲ. ರಾಜಕೀಯ ವಿದ್ಯಮಾನಗಳಿಂದ ಅನುದಾನ ದೊರೆಯಲಿಲ್ಲ ಎಂಬ ಆರೋಪ ಮಾಡುವಂತಾಯಿತು.
ಪರಿಣಾಮ ಈ ಚುನಾವಣೆ ವೇಳೆಗೆ ಅವರು ಕಾಂಗ್ರೆಸ್ ಸೇರಿ ಕಣಕ್ಕಿಳಿದಿದ್ದಾರೆ. ಮತ್ತೊಂದು ಅವಕಾಶ ಕೊಡಿ ಕ್ಷೇತ್ರ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆಂದು ಮತ ಯಾಚಿಸುತ್ತಿದ್ದಾರೆ. ಎಲ್ಲ ಪಕ್ಷಗಳು ಈಗಾಗಲೇ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದು, ಮತದಾರರ ಸೆಳೆಯಲು ತಂತ್ರ ಪ್ರತಿತಂತ್ರಕ್ಕೆ ಮುಂದಾಗಿವೆ.
ವಿವಿಧ ಆಮಿಷ: ಎಸ್ಟಿಗೆ ಮೀಸಲಾಗಿರುವ ಮಸ್ಕಿ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕ ಮತದಾರರು. ಕೆಜೆಪಿ, ಬಿಜೆಪಿ, ಬಿಎಸ್ಸಾರ್ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಪ್ರತಾಪಗೌಡರ ಅಭಿವೃದ್ಧಿ ವೈಫಲ್ಯವನ್ನೇ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ. ಜತೆಗೆ ಮತದಾರರಿಗೆ ವಿವಿಧ ಆಮಿಷಗಳನ್ನೊಡ್ಡುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆಗೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಬ್ರೇಕ್ ಬಿದ್ದಿಲ್ಲ. ಮಸ್ಕಿ ಕ್ಷೇತ್ರದಲ್ಲೂ ಅದು ಸಾಬೀತಾಗಿದೆ.
ಸದ್ಯ ಕಾಂಗ್ರೆಸ್ನಿಂದ ಅಳಿಯ ಪ್ರತಾಪಗೌಡ ಹಾಗೂ ಕೆಜೆಪಿಯಿಂದ ಸ್ಪರ್ಧಿಸಿರುವ ಮಾವನ ಮಧ್ಯೆ ನೇರ ಹಣಾಹಣಿಯಿದೆ. ಜೆಡಿಎಸ್ ಮತ್ತಿತರೆ ಅಭ್ಯರ್ಥಿಗಳೂ ಪೈಪೋಟಿ ನೀಡಲು ಶತಾಯಗತಾಯ ಪ್ರಯತ್ನಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

