ರಾಯಚೂರು

ಹೈ.ಕ. ಅಭಿವೃದ್ಧಿಗಾಗಿ ಪಾಟೀಲ್ ಚುನಾವಣೆ ಕಣಕ್ಕೆ: ಬಸವರಾಜ

Published On :

ಕನ್ನಡಪ್ರಭ ವಾರ್ತೆ, ಸೇಡಂ, ಏ.28
ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ಧಿಗಾಗಿಯೇ ವೈಜನಾಥ ಪಾಟೀಲರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆಂದು ಹೈ.ಕ. ಹೋರಾಟ ಸಮಿತಿಯ ರಾಯಚೂರು ಜಿಲ್ಲಾಧ್ಯಕ್ಷ, ಹಿರಿಯ ವಕೀಲ ಬಿ. ಬಸವರಾಜ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಜನಾಥ ಪಾಟೀಲರನ್ನು ವಿಧಾನಸಭೆಗೆ ಕಳುಹಿಸಿ, ಅಲ್ಲಿ 371 ಕಲಂ ಪ್ರತಿಧ್ವನಿಸಬೇಕೆಂದು ಮಹದಾಸೆಯಿಂದ ತಾಲೂಕಿನಲ್ಲಿ ಪಾಟೀಲರ ಪ್ರಚಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ವೈಜನಾಥ ಪಾಟೀಲರು ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಹೋರಾಟದ ಹಾದಿ ಹಿಡಿದವರು. ನಂತರ 371 ತಿದ್ದುಪಡಿಗಾಗಿ 1996 ರಿಂದ ಹೋರಾಟ ನಡೆಸಿದ ಅವರು, ಕೃಷ್ಣಾ ನದಿಯ ನೀರಾವರಿಗಾಗಿ ಹಲವು ಬಾರಿ ಹೋರಾಟ ನಡೆಸಿ ಜೈಲುವಾಸವನ್ನು ಸಹ ಅನುಭವಿಸಿದ್ದಾರೆ ಎಂದು ತಿಳಿಸಿದರು.
371 ಕಲಂಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಲ್ಲಿ ನಿಯಮಾವಳಿ ರೂಪಿಸಬೇಕಾದರೆ, ಅದಕ್ಕೆ ಒತ್ತಾಸೆಯಾಗಿ ನಿಲ್ಲುವ ವೈಜನಾಥ ಪಾಟೀಲರನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಕಳುಹಿಸಿ ಎಂದು ಮತದಾರರಲ್ಲಿ ಕೋರಿದರು.
ವೈಜನಾಥ ಪಾಟೀಲರು ವಿಧಾನಸಭೆ ಹೋಗಬೇಕಾದ ಅವಶ್ಯಕತೆ ಇದೆ. ಸೇಡಂ ಜನತೆ ಇವರನ್ನು ಗೆಲ್ಲಿಸಿದರೆ ಇಡೀ ಹೈ.ಕ. ಭಾಗವನ್ನು ಗೆಲ್ಲಿಸಿದಂತಾಗುತ್ತದೆ. ಅಧಿಕಾರ ಅವಶ್ಯವಾಗಿದೆ ನಾನು ಈ ಕ್ಷೇತ್ರದ ಮಳಖೇಡ, ಕೋಡ್ಲಾ, ಕೋಲಕುಂದಾ ವಲಯಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದೇನೆ. ನಾನು ಯಾವುದೇ ಪಕ್ಷದ ವ್ಯಕ್ತಿಯಾಗಿ ಇಲ್ಲಿಗೆ ಆಗಮಿಸಿಲ್ಲ ಬದಲಾಗಿ ವೈಜನಾಥ ಪಾಟೀಲರ ಪರ 371 ಸಂಪೂರ್ಣ ಜಾರಿಗಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಈ ಸಮಯದಲ್ಲಿ ಹೋರಾಟ ಸಮಿತಿಯ ರಾಯಚೂರ ಜಿಲ್ಲಾ ಕಾರ್ಯದರ್ಶಿ ಮಲ್ಕಪ್ಪ ಪಾಟೀಲ್, ಈಶ್ವರಪ್ಪ ಪಲ್ಲೂಲ್ ಇದ್ದರು.

ಬಿಜೆಪಿ ಅಭ್ಯರ್ಥಿ ಪವಾಡಶೆಟ್ಟಿ ಮತಯಾಚನೆ
ಆಳಂದ:
ತಾಲೂಕಿನ ಬೇಣ್ಣಿಶಿರೂರ, ಹಿತ್ತಲಶಿರೂರ, ಝಳಕಿ (ಕೆ) ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಪವಾಡಶೆಟ್ಟಿ ಕಾರ್ಯಕರ್ತರೊಂದಿಗೆ ಮತ ನೀಡಿ ಗೆಲ್ಲಿಸುವಂತೆ ಪ್ರಚಾರ ಕೈಗೊಂಡರು. ಇದುವರೆಗೂ ತಾಲೂಕಿನಲ್ಲಿ ಆಡಳಿತ ನಡೆಸಿದ ಗುತ್ತೇದಾರ ಮತ್ತು ಬಿ.ಆರ್. ಪಾಟೀಲ್ ಅವರು ಯಾವುದೇ ಅಭಿವೃದ್ಧಿ ಮಾಡದೆ ವ್ಯಕ್ತಿ ರಾಜಕಾರಣ ಮಾಡಿದ್ದೇ ದೊಡ್ಡ ಸಾಧನೆಯಾಗಿದೆ. ನಾನು ಕೃಷಿ ಪರಿವಾರದ ಅಧ್ಯಕ್ಷನಾದ ಮೇಲೆ ಗೊಬ್ಬರ ಗ್ಯಾಸ್, ದನಗಳ ದೌಣಿ, ಕೃಷಿ ಹೊಂಡಾದಂತಹ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು. ಅಣ್ಣಪ್ಪ ತಳಕೇರಿ, ಮಲ್ಲಿನಾಥ ಒಡಿಯರ, ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ಪಾಟೀಲ್ ಕಡಗಂಚಿ, ಸಂಜಯ ಮಿಸ್ಕಿನ್, ಶಿವಪ್ಪ ನಾಗಶೆಟ್ಟಿ, ಕಾಶಿನಾಥ ಅಣದುರ್ಗೆ, ರೇವಣಸಿದ್ದಪ್ಪ ಪಟ್ನೆ, ಫೀರಪಾಶಾ ನಿಂಬಾಳ, ಬಾಬಾ ಸಾಹೇಬ್ ಕಾಮನಕರ್, ಮಹಾಂತೇಶ ಜಿಡಗಾ, ಶರಣು ಬೆಳಮಗಿ, ಕಾಶಿನಾಥ ಸುತಾರ, ಗುರುಶಾಂತಪ್ಪ ದುತ್ತರಗಿ ಪಾಲ್ಗೊಂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.