ಮಂತ್ರಾಲಯದ ಶ್ರೀರಾಯರ ಮಠ ಭಕ್ತರಿಲ್ಲದೇ ಭಣ ಭಣ
ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ ರಾಯಚೂರು ಆ.2
ತುಂಗಭದ್ರಾ ನದಿಯ ಪ್ರವಾಹ ಹೆಚ್ಚಳದ ವದಂತಿ, ತೆಲಂಗಾಣ ಪ್ರತ್ಯೇಕ ರಾಜ್ಯ ನೀಡಿಕೆ ವಿರೋಧಿಸಿ ಸೀಮಾಂಧ್ರದ ಹೋರಾಟದ ಫಲವಾಗಿ ಮಂತ್ರಾಲಯ ಮತ್ತು ಶ್ರೀಶೈಲಂಗೆ ಆಗಮಿಸುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ರಾಯರ ಆರಾಧನೆಗೂ ಭಕ್ತರ ಕೊರತೆಯ ಭೀತಿ ಕಾಡುತ್ತಿದೆ.
ಕಳೆದೊಂದು ವಾರದಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಆರಾಧನೆಗೂ ಮುನ್ನವೇ ಮಂತ್ರಾಲಯದಲ್ಲಿ ನದಿಯ ನೀರು ಉಕ್ಕಿ ಹರಿಯುತ್ತಿದೆ. ಕೊಪ್ಪಳದ ತುಂಗಭದ್ರಾ ಜಲಾಶಯದಿಂದ ಕಳೆದ ಕೆಲವು ದಿನಗಳಿಂದ ದಿನವೂ 1 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ. ಅದರಿಂದ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಆದರೆ ಪ್ರವಾಹ ಅಪಾಯಕಾರಿಯಾಗಿಲ್ಲ.
ತುಂಗಭದ್ರಾ ನದಿ ನೀರು ಕಳೆದ ಎರಡು ದಿನಗಳಿಂದ ಇಳಿಕೆಯಾಗಿದೆ. ಅಷ್ಟೇ ಅಲ್ಲ ಶ್ರೀಮಠದಿಂದ ನಿರ್ಮಿಸಿದ ಕಾಂಕ್ರೀಟ್ ಹಾಸಿನವರೆಗೆ ಮಾತ್ರ ನೀರು ಬಂದಿದೆ. ಆದರೆ 2009ರ ಪ್ರವಾಹ ಸಂದರ್ಭ ಮಂತ್ರಾಲಯವನ್ನು ಕಂಡಿದ್ದ ಭಕ್ತರು ಭೀತಿಗೆ ಸಿಲುಕಿದ್ದಾರೆ. ಮಂತ್ರಾಲಯದಲ್ಲಿ ಪ್ರವಾಹ ಹೆಚ್ಚಲಿದೆ ಎಂಬ ವದಂತಿ ಹರಡಿದ್ದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆಯೂ ಗಣನೀಯವಾಗಿ ಕುಸಿತ ಕಂಡಿದೆ.
ಈ ಮಧ್ಯೆ ತೆಲಂಗಾಣ ಪ್ರತ್ಯೇಕ ರಾಜ್ಯದ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದಂದಿನಿಂದ ಸೀಮಾಂಧ್ರ ಪ್ರದೇಶದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೋರಾಟ ತೀವ್ರಗೊಂಡಿದೆ. ರಸ್ತಾ ರೋಕೋ, ಪ್ರತಿಭಟನೆಗಳ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಸೀಮಾಂಧ್ರ ಭಾಗದಲ್ಲಿರುವ ಮಂತ್ರಾಲಯ ಸೇರಿ ಶ್ರೀಶೈಲಂಗೆ ಸಂಚರಿಸುವ ಬಸ್ಗಳು ಸುರಕ್ಷತೆ ಕಾರಣಗಳಿಂದ ಸಂಚಾರವನ್ನು ಸ್ಥಗಿತಗೊಳಿಸಿವೆ. ಆದ್ದರಿಂದ ಭಕ್ತರಿಗೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವುದೂ ಕಷ್ಟವಾಗುತ್ತಿದೆ.
ಸಂಖ್ಯೆಯಲ್ಲಿ ಗಣನೀಯ ಇಳಿಮುಖ: ಶ್ರೀಮಠಕ್ಕೆ ಗುರುವಾರ ಮತ್ತು ಭಾನುವಾರದಂದು 15 ರಿಂದ 20 ಸಾವಿರ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದರು. ಹಾಗೆಯೇ ಸಾಮಾನ್ಯ ದಿನಗಳಲ್ಲಿ 8 ರಿಂದ 10 ಸಾವಿರ ಭಕ್ತರಿರುತ್ತಿದ್ದರು. ಆದರೀಗ ಈ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ದಿನವೂ ಕೇವಲ 500 ರಿಂದ 1 ಸಾವಿರ ಭಕ್ತರು ಮಾತ್ರ ಶ್ರೀಮಠಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಮಧ್ಯೆ ಶ್ರೀಮಠಕ್ಕೆ ದಿನವೂ ಕರ್ನಾಟಕ ಸೇರಿ ದೇಶದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ದೂರವಾಣಿ ಕರೆಗಳು ಬರುತ್ತಿದ್ದು ಮಂತ್ರಾಲಯದಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದಾರೆ.
ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಸ್ಥಿರವಾಗಿದೆ, ಅಪಾಯವಿಲ್ಲ ಎಂದು ಭಕ್ತರಲ್ಲಿ ವಾಸ್ತವಾಂಶವನ್ನು ತಿಳಿಸುವ ಕಾರ್ಯದಲ್ಲಿ ಶ್ರೀಮಠದ ಸಿಬ್ಬಂದಿ ತೊಡಗಿದ್ದಾರೆ.
ಆ.19ರಿಂದ ಆ.25ರವರೆಗೆ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಆ ವೇಳೆಗೆ ಸೀಮಾಂಧ್ರ ಪ್ರದೇಶದಲ್ಲಿನ ಹೋರಾಟ ಕಡಿಮೆಯಾಗದಿದ್ದಲ್ಲಿ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ವಿವಿಧೆಡೆಯಿಂದ ಆಗಮಿಸುವವರಿಗೆ ಶ್ರೀಕ್ಷೇತ್ರ ತಲುಪುವುದು ಕಷ್ಟಸಾಧ್ಯವಾಗಲಿದೆ.
ಪ್ರವಾಹ ಭೀತಿಯ ವದಂತಿ ಮತ್ತು ಸೀಮಾಂಧ್ರದ ಹೋರಾಟದ ಹಿನ್ನೆಲೆ ಶ್ರೀಮಠದ ವಸತಿ ಗೃಹಗಳಲ್ಲಿ ಕೊಠಡಿಗಳನ್ನು ಮುಂಗಡ ಕಾಯ್ದಿರಿಸಿದ್ದವರೂ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
- ಸುಯಮೀಂದ್ರಾಚಾರ್ಯ, ಶ್ರೀಮಠದ ಹೆಚ್ಚುವರಿ ಆಪ್ತ ಕಾರ್ಯದರ್ಶಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

