ಆರೋಗ್ಯ ಕವಚ ಸಿಬ್ಬಂದಿಗೆ ಬೆಂಬಲಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ರಾಯಚೂರು ಆ.3
ಆರೋಗ್ಯ ಕವಚ 108 ಆ್ಯಂಬುಲೆನ್ಸ್ ನೌಕರರ ಹೋರಾಟಕ್ಕೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿವಿಕೆ ಸಂಸ್ಥೆಯ ನಾಮಫಲಕ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, 108 ಆ್ಯಂಬುಲೆನ್ಸ್ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಸರ್ಕಾರ ಅವರ ಬೇಡಿಕೆಗಳ ಈಡೇರಿಕೆಗೆ ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ ಎಂದು ದೂರಿದರು.
ನೌಕರರ ಶ್ರಮ ಕೊಳ್ಳೆ: 2008ರಿಂದ ಇದುವರೆಗೆ ರಾಜ್ಯದ ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕವಚ ನೌಕರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂರಾರು ಜನರ ಜೀವ ರಕ್ಷಿಸಿದ್ದಾರೆ. ಆಂಧ್ರ ಮೂಲಕ ಜಿವಿಕೆ ಸಂಸ್ಥೆಯು ಈ ನೌಕರರ ಶ್ರಮವನ್ನು ಕೊಳ್ಳೆ ಹೊಡೆದಿದೆ ಎಂದು ಆರೋಪಿಸಿದರು.
ನೌಕರರು ಕಳೆದ ಎಂಟು ದಿನಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದು, ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತ್ಯಾಗ್ರಹ ನಡೆಸಿರುವ ಸಿಬ್ಬಂದಿಯಲ್ಲಿ ಕೆಲವರು ಅಸ್ವಸ್ಥಗೊಂಡಿದ್ದಾರೆ. ಆದರೂ ಸರ್ಕಾರ ಅತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.
ಜಿವಿಕೆ ಸಂಸ್ಥೆಯ ಕ್ರಮಕ್ಕೆ ಟೀಕೆ: ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕವಚ ಸಿಬ್ಬಂದಿಯ ಹೋರಾಟದಿಂದ ಜನತೆಗೆ ತೊಂದರೆಯಾಗಿದೆ. ಗ್ರಾಮೀಣರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕಿದೆ. ಜಿವಿಕೆ ಸಂಸ್ಥೆಯು ಹಿರಿಯ ನೌಕರರನ್ನು ವಜಾಗೊಳಿಸಿ ಹೊಸದಾಗಿ ನೇಮಕ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.
ಇದುವರೆಗೆ ಜಿವಿಕೆ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 2,600 ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಸಿವಿಕೆ ಸಂಸ್ಥೆಯಿಂದ ನೌಕರರನ್ನು ಮುಕ್ತಗೊಳಿಸಿ ಸರ್ಕಾರದಿಂದಲೇ ಆರೋಗ್ಯ ಕವಚ ಸಿಬ್ಬಂದಿಯನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಹೋರಾಟಕ್ಕೆ ಕರವೇ ಬೆಂಬಲ: ಸಿಬ್ಬಂದಿಗೆ ಕನಿಷ್ಠ 15 ಸಾವಿರ ವೇತನ ನಿಗದಿ ಮಾಡಬೇಕು. ನೌಕರರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ನೌಕರರು ನಡೆಸುತ್ತಿರುವ ಹೋರಾಟವನ್ನು ಕರವೇ ಬೆಂಬಲಿಸುತ್ತಿದೆ ಎಂದು ತಿಳಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್, ತಾಲೂಕಾಧ್ಯಕ್ಷ ಖಲೀಲ್ ಪಾಷಾ, ಪ್ರಧಾನ ಕಾರ್ಯದರ್ಶಿ ರಘುವೀರ ನಾಯಕ, ಕಿಶನರಾವ್, ನಾಗರಾಜ ಬಿಚ್ಚಾಲಿ, ಅರಾಫತ್, ಮುಮ್ತಾಜುದ್ದೀನ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

