ರಾಯಚೂರು

ಖಾತ್ರಿ ಕೂಲಿ ತಾರತಮ್ಯ

Published On :

ಕನ್ನಡಪ್ರಭ ವಾರ್ತೆ ,  ಲಿಂಗಸ್ಗೂರು ,  ಆ.7
ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಕೂಲಿ ಹಣ ಕೆಲವರಿಗೆ ನೀಡಿ ಉಳಿದವರಿಗೆ ನೀಡದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ನೊಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿಕಾರರು ಬುಧವಾರ ಹೊನ್ನಳ್ಳಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು.
ತಾರತಮ್ಯ ನೀತಿ: ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸ ಕೆರೆ ಅಭಿವೃದ್ಧಿಗೆ ರು. 5 ಲಕ್ಷ ಕ್ರಿಯಾ ಯೋಜನೆ ತಯಾರಿಸಿ ರು. 8.5 ಲಕ್ಷದವರೆಗೆ ಕೆಲಸ ಮಾಡಲಾಗಿದೆ. ಇದರಲ್ಲಿ ಗ್ರಾಕೂಸ್‌ನ (ಗ್ರಾಮೀಣ ಕೂಲಿಕಾರರ ಸಂಘಟನೆ) ಸುಮಾರು 140 ಜನ ಕೂಲಿಕಾರರಿಗೆ ಮಾತ್ರ ಕೂಲಿ ಹಣ ನೀಡಲಾಗಿದೆ. ಆದರೆ ನೊಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸುಮಾರು 250 ಕೂಲಿಕಾರರಿಗೆ ಕೂಲಿ ಹಣ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ 2012-13 ನೇ ಸಾಲಿನ 2 ಬದು ನಿರ್ಮಾಣ ಕಾಮಗಾರಿ ಮಾಡಲಾಗಿದೆ. ಆದರೆ ಕೂಲಿಕಾರರಿಗೆ ಕೂಲಿ ಹಣ ನೀಡಿಲ್ಲ.  ಹೊನ್ನಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಿಂದ ಮುದೇಕೇರ ಹೊಲದವರೆಗೆ ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಅರ್ಧದಷ್ಟು ಹಣ ಪಾವತಿಸಲಾಗಿದೆ. 2012-13 ಮತ್ತು 2013-14ನೇ ಸಾಲಿನಲ್ಲಿ ಕೈಗೊಂಡ ವಿವಿಧ ಕೆಲಸಗಳ ಸಾಮಗ್ರಿ ವೆಚ್ಚ ಪಾವತಿಸಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವೆಂದು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಕೆ.ಬಿ. ನಿಲೋಗಲ್‌ರಿಗೆ ದೂರಿದರು.
ಪರಿಶೀಲಿಸಿ ಕ್ರಮ: ಕೂಲಿಕಾರರ ಮನವಿ ಆಲಿಸಿದ ಸಹಾಯಕ ನಿರ್ದೇಶಕ ಕೆ.ಬಿ. ನಿಲೋಗಲ್, ಹೊನ್ನಳ್ಳಿ ಗ್ರಾಪಂ ವ್ಯಾಪ್ತಿಯ ಹೊಸ ಕೆರೆ ಅಭಿವೃದ್ಧಿ ಕಾಮಗಾರಿ, ಬದು ನಿರ್ಮಾಣ ಕಾಮಗಾರಿ, ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಸಾಮಗ್ರಿ ವೆಚ್ಚ ಸೇರಿದಂತೆ ಕೂಲಿಕಾರರಿಗೆ ನೀಡಬೇಕಾದ ಕೂಲಿ ಹಣದ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಇನ್ನೆರಡು ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಇದಕ್ಕೆ ಸಮ್ಮತಿಸಿದ ಕೂಲಿಕಾರರು ಧರಣಿ ಹಿಂಪಡೆದರು.
   ಲಿಂಗಸ್ಗೂರು ಪಿಎಸ್‌ಐ ಸಿದ್ಧರಾಮಯ್ಯ, ನೊಂಗ್ರಾಕೂಸ್ ಸಂಘಟನೆ ಮಾಣಿಕ್ ಇಂಗ್ಳೆ, ಮಲ್ಲೇಶ ಮ್ಯಾಗೇರಿ, ಹನುಮಂತ ಕಟ್ಟಿಮನಿ, ಅಮರಗುಂಡಪ್ಪ, ವೀರನಗೌಡ, ಕೂಲಿಕಾರರಾದ ಬಸಮ್ಮ, ದ್ಯಾವಮ್ಮ, ಅಯ್ಯಮ್ಮ, ನಾಗಮ್ಮ, ಹೊಳಿಯಮ್ಮ, ನರಸಮ್ಮ ಚಲವಾದಿ, ದೇವಮ್ಮ, ನೀಲಮ್ಮ, ಬಸಮ್ಮ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.