ರಾಯಚೂರು

ಶಿಕ್ಷಕರ ಕೊರತೆ; ವಿದ್ಯಾರ್ಥಿಗಳಿಂದ ರಸ್ತೆತಡೆ

Published On :

ಕನ್ನಡಪ್ರಭ ವಾರ್ತೆ ,  ಸಿಂಧನೂರು ,  ಆ.7
ತಾಲೂಕಿನ ತುರ್ವಿಹಾಳ ಬಳಿ ಇರುವ ಮೊರಾರ್ಜಿ ದೇಸಾಯಿ ಮಾದರಿಯ ವಸತಿ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ಪ್ರತಿಭಟಿಸಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬುಧವಾರ ರಸ್ತೆತಡೆ ಚಳವಳಿ ನಡೆಸಿದರು.
ಶಾಲೆ ಪ್ರಾರಂಭವಾಗಿ 2 ತಿಂಗಳು ಗತಿಸಿದರೂ ಪ್ರಾಚಾರ್ಯ ಹಿರೇಮಠ ಮತ್ತು ಗಣಿತ ಶಿಕ್ಷಕರನ್ನು ಹೊರತುಪಡಿಸಿದರೆ ಇತರ ಯಾವ ವಿಷಯ ಬೋಧಕರೂ ಇಲ್ಲ. ಮೂರು ತಿಂಗಳಿಂದ ಅಕ್ಕಿ ಪೂರೈಕೆಯಿಲ್ಲ. ಪ್ರಥಮ ದರ್ಜೆ ಸಹಾಯಕರಿಲ್ಲ. ನರ್ಸ್, ಕಂಪ್ಯೂಟರ್, ಇಂಗ್ಲಿಷ್, ಹಿಂದಿ, ವಿಜ್ಞಾನ ಸಾಮಾನ್ಯ ಅಭ್ಯಾಸದ ಶಿಕ್ಷಕರು ವರ್ಗಾವಣೆಯಾಗಿ ಒಂದುವರೆ ತಿಂಗಳಾಗಿದೆ. ಒಟ್ಟು 10 ಹುದ್ದೆಗಳು ಖಾಲಿ ಇದ್ದು ಪ್ರಸಕ್ತ ವರ್ಷದ ಶೈಕ್ಷಣಿಕ ಪ್ರಗತಿ ಶೂನ್ಯ ಎಂದು ಪಾಲಕ ಕರೇಗೌಡ ನೋವಿನಿಂದ ಹೇಳಿದರು.
ಅಶುದ್ಧ ನೀರಿನ ಸೇವನೆ: ಪಠ್ಯಪುಸ್ತಕಗಳ ಹಣ ಪಾವತಿಸದೇ ಇರುವುದರಿಂದ 6 ಮತ್ತು 9ನೇ ತರಗತಿಯ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಿರುವುದಿಲ್ಲ. ಕ್ರಿಮಿನಾಶಕ ಸಿಂಪರಣೆಯಿಂದ ಹರಿದು ಬರುವ ನೀರನ್ನೇ ಮಕ್ಕಳು ಕುಡಿಯುತ್ತಿರುವುದರಿಂದ ಮಕ್ಕಳ ಆರೋಗ್ಯದ ಸ್ಥಿತಿಯೇನು ಎಂದು ಶಂಕ್ರಪ್ಪ ಎನ್ನುವ ಪಾಲಕ ಪ್ರಶ್ನಿಸಿದರು.
ರಸ್ತೆತಡೆ: ಅರ್ಧಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಸಿಂಧನೂರು-ಕುಷ್ಟಗಿ ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು. ಬೆಳಗಿನಿಂದ ಮಧ್ಯಾಹ್ನ 2 ಗಂಟೆವರೆಗೆ ಉಪವಾಸವಿದ್ದು, ಚಳವಳಿ ಮಾಡಿದ ವಿದ್ಯಾರ್ಥಿಗಳು ಜಿಲ್ಲಾ ಕಲ್ಯಾಣಾಧಿಕಾರಿ ಬರುವವರೆಗೆ ಊಟ ಮಾಡುವುದಿಲ್ಲವೆಂದು ಹಟ ಹಿಡಿದರು. ಮೂರ್ನಾಲ್ಕು ದಿನದಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದು ಮನಮೊಲಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆ ಬಸಮ್ಮ ಕುಂಟೋಜಿ ಮಕ್ಕಳಿಗೆ ಊಟ ಮಾಡಿಸಿದರು.
ಶೌಚಾಲಯ, ಪಾಠೋಪಕರಣ, ಕ್ರೀಡಾ ಸಾಮಗ್ರಿ, ಕಂಟಿಂಗ್ ಮಡಿಸುವುದು ಸೇರಿದಂತೆ ಮೂಲ ಅವಶ್ಯಕತೆಗಳನ್ನು ಈಡೇರಿಸುವವರೆಗೆ ತಮ್ಮ ಚಳವಳಿ ಹಿಂತೆಗೆದುಕೊಳ್ಳವುದಿಲ್ಲ ಎಂದು ವಿದ್ಯಾರ್ಥಿಗಳಾದ ತಿಪ್ಪಣ್ಣ, ಶಂಕ್ರಗೌಡ, ಲಕ್ಷ್ಮೀ, ಕಾಮಾಕ್ಷಿ, ಅಮರೇಶ, ನಿಂಗಪ್ಪ, ಹರಿಶ್ಚಂದ್ರ ಮತ್ತಿತರರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.