ರಾಯಚೂರು

ರಾಯರ ಆರಾಧನಾ ಮಹೋತ್ಸವಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ, ರಾಯಚೂರು, ಆ.19
ವರುಣನ ಸಿಂಚನ, ತಾಳವಾದ್ಯ ಮೇಳಗಳ ನಿನಾದ, ವೇದಮಂತ್ರಗಳ ಘೋಷ. ಎಲ್ಲೆಲ್ಲೂ ಸಂಭ್ರಮದ ವಾತಾವರಣದ ಮಧ್ಯೆ ಶ್ರೀರಾಘವೇಂದ್ರತೀರ್ಥರ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳಿಗೆ ಮಂತ್ರಾಲಯದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮಂತ್ರಾಲಯದಲ್ಲಿ ಸೋಮವಾರ ಸಂಜೆ ನಡೆದ ಸಪ್ತರಾತ್ರೋತ್ಸವ ಸಂಭ್ರಮಾಚರಣೆಯ ವಿಧಿವಿಧಾನಗಳಲ್ಲಿ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥರು ಮೊದಲಿಗೆ ಗಜಪೂಜೆ, ಗೋವು ಪೂಜೆ ನೆರವೇರಿಸಿದರು.
ನಂತರ ಧ್ವಜಾರೋಹಣ ನೆರವೇರಿಸಿ ಲಕ್ಷ್ಮಿಪೂಜೆ, ಧಾನ್ಯ ಪೂಜೆ ನೆರವೇರಿಸಿದರು. ಶ್ರೀಗಳು ಧ್ವಜಾರೋಹಣ ನೆರವೇರಿಸುತ್ತಿದ್ದಂತೆಯೇ ವರುಣನ ಸಿಂಚನ ಆರಂಭಗೊಂಡು ಧೋ ಎನ್ನುವಂತೆ ಮಳೆ ಸುರಿಯುವ ಮೂಲಕ ಆರಾಧನಾ ಮಹೋತ್ಸವಕ್ಕೆ ಮೆರುಗು ತಂದಿತು.
ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಭಕ್ತರು ಶ್ರೀಗಳು ಸಾಗಿದಲ್ಲೆಲ್ಲ ಅವರೊಂದಿಗೆ ತೆರಳಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಉದ್ಘಾಟನೆ:  ಇದಕ್ಕೂ ಮೊದಲು ಶ್ರೀಮಠದಿಂದ ನಿರ್ಮಿಸಿದ ಭೂರಮಣ ಕಲ್ಯಾಣ ಮಂಟಪ ಹಾಗೂ ದುರ್ಗಾರಮಣ ಕಲ್ಯಾಣ ಮಂಟಪವನ್ನು ಶ್ರೀಗಳಾದ ಶ್ರೀಸುಯತೀಂದ್ರತೀರ್ಥರು ಉದ್ಘಾಟಿಸಿದರು. ಆನಂತರ ಅವರು ಸಿಆರ್‌ಒ ಕಚೇರಿ ಮುಂಭಾಗದಲ್ಲಿ ನಿರ್ಮಿಸಿದ ಮಹಾದ್ವಾರ ಸಮರ್ಪಿಸಿದರು. ನಂತರ ನವೀಕೃತ ಸಿಆರ್‌ಒ ಕಚೇರಿ ಉದ್ಘಾಟಿಸಿದರು. ಈ ಸಂದರ್ಭ ಶ್ರೀಮಠದ ಕಿರಿಯಶ್ರೀಗಳಾದ ಶ್ರೀಸುಬುಧೇಂದ್ರ ತೀರ್ಥರು ಉಪಸ್ಥಿತರಿದ್ದರು.
ಶ್ರೀಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ದ್ವಾರಪಾಲಕ ಆನಂದರಾವ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ವ್ಯವಸ್ಥಾಪಕ ಶ್ರೀಪತಿ, ಮಾಧವಶೆಟ್ಟಿ ಸೇರಿದಂತೆ ಶ್ರೀಮಠದ ಸಿಬ್ಬಂದಿ ಮತ್ತು ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಸಂಭ್ರಮ:  ಮಂತ್ರಾಲಯದಲ್ಲಿ ಆ.19 ರಿಂದ 25 ರವರೆಗೆ ನಡೆಯಲಿರುವ ಶ್ರೀರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತಿತರೆಡೆಯಿಂದ ಈಗಾಗಲೇ ಸಾವಿರಾರು ಸಂಖ್ಯೆಯ ಭಕ್ತರು ಧಾವಿಸಿದ್ದಾರೆ. ಶ್ರೀಕ್ಷೇತ್ರದಲ್ಲಿ ಬಹುತೇಕ ಎಲ್ಲ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿದೆ. ಅದೇ ರೀತಿ ಶ್ರೀಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆರಾಧನೆಗೆ ಆಗಮಿಸುವ ಭಕ್ತರಿಗೆ ಎಲ್ಲ ಸೌಕರ್ಯ ಒದಗಿಸಲು ಶ್ರೀಮಠ ಸಜ್ಜಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.