ರಾಯಚೂರು

ಸಾಕಪ್ಪಾ ಸಾಕು ಬೆಂಗಳೂರು ಸಾವಾಸ...

Published On :

ಬೆಂಗಳೂರು: ಕೆಂಗೇರಿ ಉಪನಗರದ ಬಳಿ ಬಂಡೇಮಠಕ್ಕೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರನ್ನು ಬಲಿತೆಗೆದುಕೊಂಡ ಘಟನೆ ಇನ್ನೂ ಹಸಿಯಾಗಿರುವಾಗಲೇ ಅಂತಹುದೇ ಮತ್ತೊಂದು ದುರಂತ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ. ದೇವಸ್ಥಾನಕ್ಕೆ ಸೇರಿದ ಕೆರೆ ಇದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕುಸಿದಿದೆ. ಜಯನಗರ 1ನೇ ಹಂತ ಸೋಮೇಶ್ವರ ನಗರದ 9ನೇ ತಿರುವಿನಲ್ಲಿ ಬೆಳಗ್ಗೆ 9.05 ರ ವೇಳೆಗೆ ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಅಪಾರ್ಟ್ಮೆಂಟ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದು, ಅವರೂ ಮೃತಪ್ಟಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತರನ್ನು ರಾಯಚೂರು ಮಾನ್ವಿಯ ಕಂಬಳ ಹೊಸೂರಿನ ನಾಗಮ್ಮ (45), ಬಿಹಾರದ ನಿರಂಜನ್ ಮೊಹಂತೋ(22) ಎಂದು ಶಂಕಿಸಲಾಗಿದೆ.  ಗಾಯಗೊಂಡಿರುವ 14 ಕ್ಕೂ ಅಧಿಕ ಮಂದಿಗೆ ನಿಮ್ಹಾನ್ಸ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾಲ್ಕುಮಾರ್(18), ಲೋಬೋ, ಟಫೀಕ್, ಮಣಿ, ಅಮುಲ್ ಬರ್ಮನ್, ಅಜಯ್, ಲಕ್ಷ್ಮಣ್ ಪಾಸ್ವಾನ್(45), ಸುಶಾಂತ್ ಬರ್ಮನ್(18), ಗೋವಿಗೋ ಪಾಸ್ವಾನ್(18), ಗೋಪಾಲ್ ಪಾಸ್ವಾನ್(19), ಮೋಹನ್ ಮೆಹ್ತಾ(20), ಮನೋಜ್, ಪ್ರದೀಪ್, ಸಂಜಯ್(17) ಗಾಯಾಳುಗಳು. ಇವರಿಗೆ ಕೈಕಾಲು, ತಲೆಗೆ ಗಾಯಗಳಾಗಿವೆ.
ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿರುವ ಕಾರ್ಮಿಕರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ನಿಮ್ಹಾನ್ಸ್ನ ವೈದ್ಯಕೀಯ ಅಧಿಕ್ಷಕ ಡಾ.ವಿ.ಎಲ್.ಸತೀಶ್ ತಿಳಿಸಿದ್ದಾರೆ.
ಕಟ್ಟಡದಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಎಲ್ಲರೂ ಹೊರಗೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.
ತಿಂಡಿ ತಿನ್ನುತ್ತಿದ್ದರು: ಬೆಳಗ್ಗೆ ಕಾರ್ಮಿಕರೆಲ್ಲ ಎಂದಿನಂತೆ ಕೆಲಸಕ್ಕೆ ಸಿದ್ಧತೆ ನಡೆಸಿದ್ದರು. ಕೆಲವರು ಕೆಲಸ ಆರಂಭಿಸಿದ್ದರು.ಇನ್ನೂ ಕೆಲವರು ತಿಂಡಿ ತಿನ್ನುತ್ತಿದ್ದರು. ಹಲವರು ಮುಖ ತೊಳೆದು, ಸ್ನಾನ ಮಾಡಿ ಕೆಲಸಕ್ಕೆ ಸಜ್ಜಾಗುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಕೇಳಿಸಿತು. ಏನಾಗುತ್ತಿದೆ ಎಂದು ನೋಡುವುದರೊಳಗೆ ಕಟ್ಟಡ ಕುಸಿದಿದೆ. ಮೊದಲು ಹಾಗೂ 2ನೇ ಮಹಡಿಯಲ್ಲಿದ್ದವರು ಜಿಗಿದು ಪರಾರಿಯಾದರು.
ಆದರೆ, ಕಟ್ಟಡದ 1 ಮತ್ತು 2ನೇ ಅಂತಸ್ತುಗಳು ನೆಲಮಹಡಿಗೆ ಕುಸಿದಿರುವುದರಿಂದ ಅಲ್ಲಿದ್ದವರು ಮೇಲೆ ಬರಲು ಸಾಧ್ಯವಾಗದೆ ಅವಶೇಷಗಳ ಅಡಿ ಸಿಲುಕಿದ್ದಾರೆ. ಸ್ಥಳೀಯ ನಿವಾಸಿ ಉಸ್ಮಾನ್ ಎಂಬುವವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದರು.ಸುಮಾರು ಒಂದೂವರೆ ವರ್ಷದ ಹಿಂದೆ ಆಂಜನಪ್ಪ ಅವರಿಂದ ಸುಮಾರು 16 ಸಾವಿರ ಚದರ ಅಡಿ ಜಾಗ ಖರೀದಿಸಿದ ಸಲೀಂಬಾಯಿ ಕಳೆದ ಒಂಭತ್ತು ತಿಂಗಳಿಂದ ಕಟ್ಟಡ ಕಾಮಗಾರಿ ಆರಂಭಿಸಿದ್ದರು. ಆದರೆ, ಜಾಗ ಇನ್ನೂ ಆಂಜನಪ್ಪ ಅವರ ಹೆಸರಿನಲ್ಲೇ ಇತ್ತು. ಈ ನಡುವೆ 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಒಪ್ಪಿಗೆಯೂ ಸಿಕ್ಕಿತ್ತು.
ಪರದಾಟ:  ಸುಮಾರು 9.20ಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಬಂದಿದ್ದು, ಕರೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದವರನ್ನು ಮೇಲೆತ್ತಲು ಹರಸಾಹಸ ಮಾಡಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಐಜಿಪಿ ಕೆ.ಎಲ್. ಸುಧೀರ್, ಕುಸಿದಿರುವ ಕಟ್ಟಡದ ಪಕ್ಕದಲ್ಲಿ ಮನೆಗಳು, ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ಇರುವ ಕಾರಣ ಅಲ್ಲಿಗೆ ವಾಹನಗಳು ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ಜೆಸಿಬಿಯಿಂದ ಮೂಲಕ ಜಾಗ ಮಾಡಿಕೊಂಡು  ನಂತರ ರಂದ್ರ ಕೊರೆಯುತ್ತಾ ಹೋಗಿ ರಾತ್ರಿ ವೇಳೆಗೆ ನೆಲಮಹಡಿಯಲ್ಲಿದ್ದ ಮೃತದೇಹಗಳನ್ನು ಮೇಲೆತ್ತಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.