ರಾಯಚೂರು

ಕಿರುಕುಳಕ್ಕೆ ಜೇವರ್ಗಿ ಫೈರ್ಮನ್ ಶಿವಾನಂದ ಬಲಿ?

Published On :

ಕ.ಪ್ರ.ವಾರ್ತೆ   ಗುಲ್ಬರ್ಗ   ಆ.20
ಕಳೆದ ಮೂರು ದಿನಗಳ ಹಿಂದಷ್ಟೆ (ಆ. 17ರ ಶನಿವಾರ ಸಂಜೆ ಹೊತ್ತು) ಜೇವರ್ಗಿ ಅಗ್ನಿ ಶಾಮಕ ಠಾಣೆಯಲ್ಲಿ ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಫೈರ್ಮನ್ ಶಿವಾನಂದ ಲೋಣಿ (30) ಮಂಗಳವಾರ ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ದುರಂತ ಘಟನೆ ನಗರದಲ್ಲಿ ಕೆಲಹೊತ್ತು ಆಸ್ಪತ್ರೆ ಪರಿಸರ, ಆರ್ಟಿಓ ಕ್ರಾಸ್ ಹಾಗೂ ಸೇಡಂ ರಸ್ತೆಯಲ್ಲಿ ಉದ್ವಿಗ್ನ ವಾತಾವರಣ ಹುಟ್ಟು ಹಾಕಿತ್ತು.
ಶಿವಾನಂದ ಲೋಣಿ ಈತ ಸಾವನ್ನಪ್ಪಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಆತನ ಬಂಧುಗಳು, ಗೆಳೆಯರು ಆಸ್ಪತ್ರೆ ಮುಂದೆ ಸೇರುವ ಮೂಲಕ ಧರಣಿ ನಡೆಸಿದರು. ಜೊತೆಗೇ ಶಿವಾನಂದನ ತಾಯಿ ಸರಸ್ವತಿಯವರು ರಸ್ತೆಯಲ್ಲಿ ಬಿದ್ದು ರೋದಿಸುತ್ತಿದ್ದ ನೋಟ ದಾರಿಹೋಕರನ್ನೆಲ್ಲ ಸೆಳೆದಿತ್ತು. ಒಂದು ಗಂಟೆಗೂ ಅಧಿಕ ಹೊತ್ತು ರಸ್ತೆಯಲ್ಲೇ ಶಿವಾನಂದ ತಾಯಿ ಸರಸ್ವತಿ ಗೋಳಾಡುತ್ತಿದ್ದ ಕಾರಣ ಆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪೊಲೀಸರು ಪ್ರಕರಣ ದಾಖಲಿಸಿಲ್ಲ, ಅದಕ್ಕೆ ಶವ ಪ್ರಕರಣ ದಾಖಲಿಸಿದ ನಂತರವೇ ಹಸ್ತಾಂತರಿಸಲಾಗುತ್ತದೆ ಎಂದು ಆಸ್ಪತ್ರೆಯವರ ಹೇಳಿಕೆ ಬಂಧುಗಳನ್ನು ಕೆರಳಿಸಿತ್ತು. ಇಂತಹ ದುಃಖದ ಸಂದರ್ಭದಲ್ಲಿ ಪೊಲೀಸರು, ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿಗಳು ಅತ್ತ ಸುಲಿಯದ ಸಂಗತಿ ಅಲ್ಲಿದ್ದವರನ್ನು ಕೆರಳಿಸಿತ್ತು.
ಘಟನೆ ಹಿನ್ನೆಲೆ: ಆ. 17ರ ಶನಿವಾರ ಸಂಜೆ ಹೊತ್ತು ಶಿವಾನಂದ ಲೋಣಿ ಜೇವಗಿ ಅಗ್ನಿಶಾಮಕ ಠಾಣೆಯಲ್ಲೇ ವಿಷ ಕುಡಿದಿದ್ದ. ಠಾಣೆಯಲ್ಲಿನ ಎಲ್ಲ ಸಿಬ್ಬಂದಿಗಳ ಸಮ್ಮುಖದಲ್ಲೇ ತಾನು ವಿಷ ಸೇವನೆ ಮಾಡಿ ಸಾಯುವುದಾಗಿ ಹೇಳಿದ ಶಿವಾನಂದ ದ್ವಿಚಕ್ರವಾಹನದಲ್ಲಿ ತೇರಳಿ ವಿಷ ಖರೀದಿಸಿ ಠಾಣೆಗೆ ಬಂದು ನಂತರ ವಿಷ ಸೇವನೆ ಮಾಡಿದ್ದ.
ನಂತರ ಆತನನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗದಲ್ಲಿರುವ ವಾತ್ಸಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಾನಂದ ಮಂಗಳವಾರ ಸಾವನ್ನಪ್ಪಿದ್ದ.  
ಸಹೋದ್ಯೋಗಿಗಳ ವೈಮನಸ್ಯ: ಜೇವರ್ಗಿ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಗಳಿಲ್ಲದೆ ವರ್ಷಛಿಡ ಕಳೆದಿದೆ. ಇಲ್ಲಿ ಠಾಣಾಧಿಕಾರಿ, ಎಎಸ್ಐ ಹುದ್ದೆಗಳು ಖಾಲಿ ಬಿದ್ದಿವೆ. ಠಾಣಾದಿಕಾರಿ ಹುದ್ದೆ ಖಾಲಿ ಹಲವು ತಿಂಗಳುಗಳು ಕಳೆದಿವೆ. ಆದರೂ ಇಲ್ಲಿನ ಠಾಣೆಗೆ ಖಾಯಂ ಠಾಣಾಧಿಕಾರಿ ಇಲ್ಲದೆ ಇರುವುದರಿಂದ ಠಾಣೆಯಲ್ಲಿ ಆಗ್ನಿ ಶಾಮಕ ಸಿಬ್ಬಂದಿಗಳ ಒಳಗೆ ಕೆಲಸದ ವಿಷಯ (ಆಂತರಿಕ ಶಿಸ್ತಿನ ವಿಚಾರ) ದಲ್ಲಿ ಆಗಾಗ್ಗೆ ಒಳ ಜನಗಳಗಳು ನಡೆಯುತ್ತಲೇ ಇದ್ದವು ಎನ್ನಲಾಗಿದೆ.
ಸಹೋದ್ಯೋಗಿಗಳ ನಡುವಿನ ಇಂತಹ ಒಳಜಗಳಗಳೇ ಶಿವಾನಂದ ಲೋಣಿಯನ್ನು ಬಲಿ ಪಡೆಯಲು ಪ್ರಮುಖ ಕಾರಣಗಳು ಎಂದು ಇದೀಗ ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಅಗ್ನಿಶಾಮಕ ಠಾಣೆಯಲ್ಲಿರುವ ಹೆಸರು ಹೇಳಲು ಬಯಸದ ಅನೇಕ ಸಿಬ್ಬಂದಿಗಳೂ ಸಹ ಇದನ್ನು ಸಮ್ಮತಿಸುತ್ತಿದ್ದಾರೆ.  
ಜೊತೆ ಕೆಲಸಗಾರರ ಕಿರಿಕಿರಿ: ಮಗ ಶಿವಾನಂದ ಈಚೆಗೆ ಮನೆಗೆ ಬಂದಾಗೆಲ್ಲ ಜೊತೆಗಾರ ಕೆಲಸಗಾರರ ಕಿರಿಕಿರಿ ಹೆಚ್ಚಿರುವ ಬಗ್ಗೆ ನೊಂದ ಮನದಿಂದಲೇ ಹೇಳುತ್ತಿದ್ದ.  ಇದರಿಂದಾಗಿಯೇ ವಿಷ ಸೇವಿಸುವಷ್ಟು ಮನಸ್ಸು ಕಲ್ಲು ಮಾಡಿಕೊಂಡಿದ್ದಾನೆ. ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಶಿವಾನಂದನ ತಾಯಿ ಸರಸ್ವತಿ ಲೋಣಿ ಆಗ್ರಹಿಸಿದ್ದಾರೆ.
ಶಿವಾನಂದನ ಸಹೋದರ ಈರಣ್ಣ ಅವರೂ ಸಹ ತಮ್ಮನ ಪ್ರತಿಯಾಗಿ ಆತ ಕೆಲಸ ಮಾಡುತ್ತಿದ್ದ ಜೇವರ್ಗಿ ಠಾಣೆಯಲ್ಲಿರುವ ಸಹೋದ್ಯೋಗಿಗಳು ಇಲ್ಲ ಸಲ್ಲದ ವಿಚಾರಗಳನ್ನು ಹಿರಿಯ ಅಧಿಕಾರಿಗಳ ವಿರುದ್ಧ ಕಿವಿ ಊದಿದ್ದರು ಎಂದು ದೂರಿದ್ದು, ಈ ಬೆಳವಣಿಗೆಯೂ ಸೂಕ್ಷ್ಮ ಮನದ ಶಿವಾನಂದನಿಗೆ ತುಂಬ ಕೆಟ್ಟದ್ದೆನಿಸಿದೆ. ಇವೆಲ್ಲವುಗಳಿಂದ ಆತ ಸಾವನ್ನಪ್ಪಿದ್ದಾನೆ ಎಂದು ದೂರಿದ್ದು, ಕಿರಿಕಿರಿ ಕೊಡುತ್ತಿದ್ದವರು ಯಾರು ಯಾಕೆ ಹೀಗೆ ಮಾಡಿದರು ಎಂಬುದನ್ನೆಲ್ಲ ತನಿಕೆ ಮಾಡಿ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.