ಕುಸಿದ ಕಟ್ಟಡದಡಿ ಇನ್ನೊಂದು ಶವ
ಬೆಂಗಳೂರು: ಬೆಂಗಳೂರಿನ ಸೋಮೇಶ್ವರ ನಗರದಲ್ಲಿ ಸೋಮವಾರ ಸಂಭವಿಸಿದ್ದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಮಂಗಳವಾರ ಸಂಜೆ ಪತ್ತೆಯಾಗಿರುವ ಮೃತದೇಹವನ್ನು ರಾಯಚೂರು ಜಿಲ್ಲೆ ಮಾನ್ವಿಯ ಕಂಬಳ ಹೊಸೂರಿನ ನಾಗಮ್ಮ (45) ಎಂದು ಗುರುತಿಸಲಾಗಿದೆ.
ಬಿಹಾರದ ನೈಪಾಲ್ ಪಾಸ್ವಾನ್ (60) ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿತ್ತು. ಮಂಗಳವಾರ ಬೆಳಗ್ಗೆ ನಿರಂಜನ್ ಮೊಹಂತೋ (22) ಮೃತದೇಹನ್ನು ಹೊರ ತೆಗೆಯಲಾಗಿತ್ತು. ನಾಗಮ್ಮ ಅವರ ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ, ಮುಖ ತೋರಿಸುವಂತೆ ಸಂಬಂಧಿಕರು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಉದ್ರಿಕ್ತ ವಾತಾವಾರಣ ನಿರ್ಮಾಣ ಆಯಿತಾದರೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಪೊಲೀಸ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕೆಲಸ ಮುಗಿದಿದ್ದು, ಕಟ್ಟಡ ನೆಲಸಮ ಮಾಡುವುದು ಬಿಬಿಎಂಪಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಡಿಸಿಪಿ ರೇವಣ್ಣ ತಿಳಿಸಿದ್ದಾರೆ.
ಗಂಟೆಯಲ್ಲಿ ದೇಹ ಮೇಲೆತ್ತಿದರು: ಕಾರ್ಯಾಚರಣೆ ಆರಂಭಿಸಿದ ಒಂದು ಗಂಟೆಯಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ನಿರಂಜನ್ ಮೃತದೇಬವನ್ನು ಸಿಬ್ಬಂದಿ ಹೊರತೆಗೆದರು. ಮೊದಲು ಆ ದೇಹ ನಾಗಮ್ಮ ಅವರದ್ದಾಗಿರಬಹುದು ಎಂದು ಶಂಕಿಸಲಾಗಿತ್ತು. ಅಲ್ಲಿದ್ದ ಕೂಲಿಕಾರ್ಮಿಕರು ಮೃತದೇಹವನ್ನು ಗುರುತಿಸಿದರು.
ಊರಿಂದ ಬಂದರು: ಕಟ್ಟಡದ ಅವಶೇಷಗಳ ಅಡಿಯಲ್ಲಿ ನಾಗಮ್ಮ ಸಿಕ್ಕಿಕೊಂಡಿದ್ದಾರೆಂಬ ಸುದ್ದಿ ತಿಳಿದ ಆಕೆಯ ತಾಯಿ, ಸಂಬಂಧಿಕರು ರಾತ್ರಿಯೇ ರೈಲಿನಲ್ಲಿ ಹೊರಟು ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದರು. ಘಟನೆ ನಡೆದ ಸ್ಥಳದಲ್ಲಿ ನಾಗಮ್ಮನಿಗಾಗಿ ಅವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ನಾಗಮ್ಮ ಶವವಾಗಿ ಸಿಕ್ಕಾಗ ಅವರ ರೋದನ ಮುಗಿಲು ಮುಟ್ಟಿತ್ತು.
ರಾತ್ರಿ ಕೇಳೋರಿಲ್ಲ: ಕಟ್ಟಡ ಕುಸಿತದ ವೇಳೆ ಅಪಾಯದಿಂದ ಪಾರಾಗಿದ್ದ ಕಾರ್ಮಿಕರ ಸ್ಥಿತಿ ಸೋಮವಾರ ರಾತ್ರಿ ಶೋಚನೀಯವಾಗಿತ್ತು. ಕಾರ್ಯಾಚರಣೆ ವೇಳೆ ಪೊಲೀಸರು ಓಡಿಸಿದರು. ಆದರೆ, ಹೇಗೋ ಮಾಡಿ ಮನೆಯೊಂದರ ಮೇಲೆ ರಾತ್ರಿ ಆಶ್ರಯ ಪಡೆದೆವು ಎಂದು ಕಾರ್ಮಿಕರು ತಿಳಿಸಿದರು.
ಈ ಬಗ್ಗೆ ಮಾತನಾಡಿದ ರಾಯಚೂರಿನ ಪ್ರಭು, ಹಿರಿಯಳು ಎಂಬ ಕಾರಣಕ್ಕೆ ನಮ್ಮಲ್ಲಿದ್ದ ಹಣವನ್ನು ನಾಗಮ್ಮಳ ಕೈಗೆ ಕೊಟ್ಟಿದ್ದೆವು. ಬಟ್ಟೆಬರೆ ಸಹ ಅವಶೇಷಗಳಡಿ ಇದೆ. ಪೊಲೀಸರು ನಮ್ಮನ್ನು ಹತ್ತಿರಕ್ಕೆ ಸುಳಿಯಲು ಬಿಡುತ್ತಿಲ್ಲ. ಮುಂಜಾನೆ ಬೇಗ ಎದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಕೊರೆದಿದ್ದ ರಂಧ್ರದೊಳಗಿನಿಂದ ಒಳಹೋಗಿ ಸಿಕ್ಕಷ್ಟು ಬಟ್ಟೆ, ಹಣ ತೆಗೆದುಕೊಂಡು ಬಂದಿದ್ದೇವೆ. ಘಟನೆ ನಡೆದಾಗಿನಿಂದ ತುತ್ತು ಅನ್ನಕ್ಕೂ ಯಾರೂ ಸಹಾಯ ಮಾಡಿಲ್ಲ. ಅಲ್ಲಿ ಇಲ್ಲಿ ಬೇಡಿ ತಿನ್ನುವ ಪರಿಸ್ಥಿತಿ ಬಂದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

