ರಾಯಚೂರು

50 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ

Published On :

ಕ.ಪ್ರ.ವಾರ್ತೆ, ಲಿಂಗಸ್ಗೂರು ಆ.25
ರಾಜ್ಯ ಸರ್ಕಾರ ತನ್ನ 5 ವರ್ಷದ ಅವಧಿಯೊಳಗೆ ಕೃಷ್ಣಾ, ಕಾವೇರಿ, ಗೋಧಾವರಿ ಸೇರಿದಂತೆ ವಿವಿಧ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಜಾರಿಯಾಗದೇ ಉಳಿದ ಹಾಗೂ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ ರು. 50 ಸಾವಿರ ಕೋಟಿ ಖರ್ಚು ಮಾಡಲು ಸರ್ಕಾರ ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತಾಲೂಕಿನ ಮಸ್ಕಿ ಪಟ್ಟಣದಲ್ಲಿ ಹಳ್ಳಕ್ಕೆ ನಿರ್ಮಿಸಿದ ನೂತನ ಸೇತುವೆ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಭಾನುವಾರ ನೆರವೇರಿಸಿದರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಸ್ತುತ ವರ್ಷ ಸರ್ಕಾರ ನೀರಾವರಿಗಾಗಿ 9813 ಕೋಟಿ ಇಡಲಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಕೇವಲ ಒಂದು ಗಂಟೆಯಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.
ಹಸಿವು ಮುಕ್ತ ರಾಜ್ಯ: ಅನ್ನಭಾಗ್ಯ ಯೋಜನೆಯಡಿ 98.36 ಲಕ್ಷ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ. ಮುಂಬರುವ ದಿನಗಳಲ್ಲಿ ಬಡವರ ಹಿತದೃಷ್ಟಿಯಿಂದ ಅಕ್ಕಿ, ಜೋಳ, ಗೋಧಿ 1 ರೂ.ಗೆ 1 ಕೆಜಿ.ಯಂತೆ ಆಹಾರಧಾನ್ಯ ಪೂರೈಸುವ ಚಿಂತನೆ ನಡೆಸಲಾಗಿದ್ದು, ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದು, ಕ್ಷೀರಭಾಗ್ಯ ಯೋಜನೆಯಡಿ 39 ಲಕ್ಷ ಅಂಗನವಾಡಿ ಮಕ್ಕಳು ಹಾಗೂ 65 ಲಕ್ಷ ಶಾಲಾ ಮಕ್ಕಳು ಸೇರಿದಂತೆ ಒಟ್ಟು 1.4 ಕೋಟಿ ಮಕ್ಕಳು ಒಳಪಡಲಿದ್ದಾರೆಂದು ತಿಳಿಸಿದರು.
ರಾಯಚೂರು ಜಿಲ್ಲೆಯ ನಂದವಾಡಗಿ ಏತನೀರಾವರಿ ಯೋಜನೆ ಈಗಾಗಲೆ ಟೆಂಡರ್ಕ್‌ರೆಯಲು ಸಿದ್ಧತೆ ನಡೆಸಿದ್ದು, ಯೋಜನೆ ಜಾರಿಗೆ ಅನುದಾನ ಬಿಡುಗಡೆ ಮಾಡಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ. ಶ್ರೀರಂಗ ಪಟ್ಟಣ-ಬೀದರ ರಾಜ್ಯ ಹೆದ್ದಾರಿಯ ಸಿಂಧನೂರು-ಲಿಂಗಸ್ಗೂರು ಮಾರ್ಗದ ರಸ್ತೆ ದುರಸ್ತಿಗೆ ಟೆಂಡರ್ಪ್ರ್‌ಕ್ರೀಯೆ ನಡೆದಿದ್ದು, ಗುತ್ತಿಗೆದಾರರು ಮುಂದೆ ಬಾರದಿದ್ದರೆ ಸರ್ಕಾರದಿಂದ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಪರಿಶೀಲನೆ ನಂತರ ಕ್ರಮ: ಮಸ್ಕಿ ಪಟ್ಟಣವನ್ನು ನೂತನ ತಾಲೂಕು ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾತನಾಡಿ, ಸರ್ಕಾರದ ಮುಂದೆ ಈಗ ನಾಲ್ಕು ವರದಿಗಳು ಇದ್ದು, ಅವುಗಳ ಕೂಲಂಕುಶ ಪರಿಶೀಲನೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈಗಾಗಲೆ ಹೈ.ಕ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸಂಪುಟ ಉಪಸಮಿತಿ ರಚಿಸಿ ಎಚ್.ಕೆ.ಪಾಟೀಲರ ಅಧ್ಯಕ್ಷತೆಯಲ್ಲಿ ಎಲ್ಲರ ಸಲಹೆ ಮತ್ತು ಅಹವಾಲುಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಒಪ್ಪಿಗೆ ಬಂದ ತಕ್ಷಣ ಈ ಭಾಗದ ಅಭಿವೃದ್ಧಿಗೆ ವಿವಿಧ ಯೋಜನೆಗಳ ಜಾರಿಗೆ ಗಮನ ಹರಿಸಲಾಗುವುದು. ಪ್ರಮುಖವಾಗಿ ಶಿಕ್ಷಣ ಮತ್ತು ಉದ್ಯೋಗಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಶಿವರಾಮೇಗೌಡ, ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಮಸ್ಕಿ ಶಾಸಕ ಪ್ರತಾಪಗೌಡ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾನ್ವಿ ಶಾಸಕ ಹಂಪಯ್ಯ ನಾಯಕ, ಶಾಸಕ ಬಿ.ಎಂ.ನಾಗರಾಜ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ಬಸವರಾಜ ಪಾಟೀಲ ಇಟಗಿ, ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಮುಖಂಡರಾದ ಡಿ.ಎಸ್.ಹೂಲಗೇರಿ, ಹೆಚ್.ಬಿ.ಮುರಾರಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.