ಸೆ.1 ರಂದು ಕಾರ್ಮಿಕರ ಸಮಾವೇಶ, ವಿಜಯೋತ್ಸವ
ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದ 498 ಜನ ಕಾರ್ಮಿಕರ ಸೇವೆ ಕಾಯಂ ನಿಟ್ಟಿನಲ್ಲಿ ಯಶಸ್ವಿ ಯಾಗಿರುವ ಟಿಯುಸಿಐ ಸಂಘಟನೆಯು ಸೆ.1ರಂದು ವಿಜಯೋತ್ಸವ ಆಚರಿಸಲಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಮೇದಾರ್ ತಿಳಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಯುಸಿಐ ಸಂಘಟನೆಯ ನಿರಂತರ ಹೋರಾಟದ ಫಲವಾಗಿ ಕಳೆದ 11 ವರ್ಷಗಳಿಂದ ಹಂಗಾಮಿಯಾಗಿ ದುಡಿಯುತ್ತಿದ್ದ 498ಜನ ಕಾರ್ಮಿಕರ ಸೇವೆ ಕಾಯಂಗೊಳಿಸಲಾಗಿದೆ. ರಾಜೀ ರಹಿತ ಹೋರಾಟದಿಂದಾಗಿ ಕಾರ್ಮಿಕರ ಬದುಕಿನಲ್ಲಿ ಭದ್ರತೆ ಮೂಡಿದೆ ಎಂದು ತಿಳಿಸಿದರು.
ಕಾರ್ಮಿಕರ ಸೇವೆ ಕಾಯಂ ಹಿನ್ನೆಲೆಯಲ್ಲಿ ಸೆ.1ರಂದು ಲಿಂಗಸ್ಗೂರು ತಾಲೂಕಿನ ಹಟ್ಟಿಯ ಧಾರವಾಲ್ ಸ್ಟೇಡಿಯಂನಲ್ಲಿ ಬೆಳಿಗ್ಗೆ 11ಕ್ಕೆ ಬೃಹತ್ ವಿಜಯೋತ್ಸವ ಮತ್ತು ಜಿಲ್ಲಾ ಕಾರ್ಮಿಕರ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಾವೇಶವನ್ನು ನವದೆಹಲಿಯ ಸಂಜಯ್ ಸಿಂಘ್ವಿ ಉದ್ಘಾಟಿಸಲಿದ್ದು, ಕರ್ನಾಟಕ ರೈತಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್, ಹೈಕೋರ್ಟ್ ವಕೀಲರಾದ ಅರುಣ ಕುಮಾರ್ ಅಮರಗುಂಡಪ್ಪ, ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಅತಿಥಿಗಳಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ, ವಕೀಲರಾದ ಮೋಹನ್ ಹಿಪ್ಪರಗಿ, ಡಾ. ಎಂ.ಎಲ್. ಪಾಟೀಲ್, ಸೂಗಯ್ಯಸ್ವಾಮಿ ಹಿರೇಮಠ, ಸಿ. ದಾನಪ್ಪ ನಿಲೋಗಲ್ ಸೇರಿ ಅನೇಕ ಕಾರ್ಮಿಕ ನಾಯಕರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸಂಘಟಿತ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಕಡಿಮೆ ವೇತನದಂಥ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಅದರಿಂದಾಗಿ ಕಾರ್ಮಿಕರ ಬದುಕು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಂಡು ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಶೋಷಣೆಗೆ ತಡೆ ಹಾಕುವ ಅವಶ್ಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉದ್ಯಮಗಳ ಕಾರ್ಮಿಕರು ಸೆ.1ರಂದು ಆಯೋಜಿಸಿರುವ ಜಿಲ್ಲಾಮಟ್ಟದ ಕಾರ್ಮಿಕರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಮರೇಶ್, ಮಲ್ಲೇಶ್, ಶಿವಕುಮಾರ್ ಮಠ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

