ರೈತರ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ
ಮಸ್ಕಿ: ರಾಯಚೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕಿಳಿದಿದ್ದ ಕರ್ನಾಟಕ ರೈತ ಸಂಘದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ದಲಿತ ಸಾಹಿತಿ ಸಿ.ದಾನಪ್ಪ ಖಂಡಿಸಿದ್ದಾರೆ. ಇದು ಅಮಾನವೀಯ ಘಟನೆ. ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಸರ್ಕಾರ ಕೂಡಾ ರೈತರ ವಿಷಯದಲ್ಲಿ ಭಿನ್ನವಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಕೂಡಲೇ ಲಾಠಿ ಪ್ರಹಾರಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಮರಳು; ಜಿಪಿಎಸ್ ಕಡ್ಡಾಯ: ಡಿಸಿ
ರಾಯಚೂರು: ಜಿಲ್ಲೆಯಲ್ಲಿ ಮರಳು ಸಾಗಿಸುವ ವಾಹನಗಳು, ಹೊರ ಜಿಲ್ಲೆಯ ವಾಹನಗಳಿಗೆ ಸರ್ಕಾರದ ಆದೇಶದಂತೆ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮೆ ಟೆಲಿಮೆಟಿಕ್ಸ್ ಸರ್ವಿಸಸ್ ಸಂಸ್ಥೆಗೆ ಅಳವಡಿಕೆ ಕಾರ್ಯವಹಿಸಲಾಗಿದೆ. ಆದ್ದರಿಂದ ಮರುಳು ಸಾಗಾಣಿಕೆ ವಾಹನಗಳ ಮಾಲಿಕರು ತಮ್ಮ ವಾಹನಗಳಿಗೆ ಡಿ.16 ರೊಳಗೆ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಮಾಡಿಕೊಳ್ಳುವಂತೆ ಹಾಗೂ ಅಳವಡಿಕೆ ನಂತರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪರಿವೀಕ್ಷಣೆಗೆ ಹಾಜರುಪಡಿಸಿ ನೋಂದಾಯಿಸಲು ಸೂಚಿಸಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ವಾಹನಗಳಿಗೆ ಮರಳನ್ನು ಪೂರೈಸುವುದಿಲ್ಲ. ಅನಧಿಕೃತ ಮರಳು ಸಾಗಾಣಿಕೆ ವಾಹನಗಳ ಮೇಲೆ ಜಿಲ್ಲಾ ಮರಳು ಗಣಿಗಾರಿಕೆ ಸಮಿತಿಯ ಆದಿಕಾರಿಗಳು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಮತ್ತು ದಂಡ ವಿಧಿಸಲು ಅಧಿಕಾರ ಹೊಂದಿರುತ್ತಾರೆಂದು ಅವರು ಎಚ್ಚರಿಸಿದ್ದಾರೆ.
ವರದಿ ಮಂಡನೆಗೆ ಆಗ್ರಹ
ದೇವದುರ್ಗ: ನ್ಯಾ.ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿ ನಿಟ್ಟಿನಲ್ಲಿ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿಯೇ ಬೆಳಗಾವಿಯ ಅಧಿವೇಶನದಲ್ಲಿ ವರದಿ ಮಂಡಿಸುವಂತೆ ದಲಿತ ಮುಖಂಡ ಹನುಮಂತ ಕಾಕರಗಲ್ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ದಸಂಸ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ರಾಯಚೂರುನಿಂದ ಬೆಳಗಾವಿಗೆ ಬೈಕ್ ರ್ಯಾಲಿ ಬೆಂಬಲಿಸಿ ಡಿ.5ರಂದು ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಜಿಲ್ಲಾ ದಸಂಸ ಸಮಿತಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದು ತಿಳಿಸಿದರು.
ಈ ವೇಳೆ ಶಿವಪ್ಪ ಪಲಕನಮರಡಿ ಅವರನ್ನು ತಾಲೂಕು ಸಂಚಾಲಕರಾಗಿ ನೇಮಿಸಲಾಯಿತು. ನಾಗರಾಜ ಜಂಬಲದಿನ್ನಿ, ಲಕ್ಷ್ಮಣ ದೊಂಡಂಬಳಿ, ಮರೆಪ್ಪ ಸುಂಕೇಶ್ವರಹಾಳ, ಜಂಬಣ್ಣ ಪೂಜಾರಿ ಅವರುಗಳು ತಾಲೂಕು ಸಂಘಟನಾ ಸಂಚಾಲಕರಾಗಿ ನೇಮಕಗೊಂಡರು.
ಬಸವರಾಜ ಯರಮಸಾಳ, ರಾಮಸ್ವಾಮಿ, ಧನಂಜಯ ಶಿವಂಗಿ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಸಂಚಾಲಕ ಹನುಮಂತ ಗಾಣಧಾಳ, ಶಿವರಾಜ ವಂದಲಿ, ಸಂಗಯ್ಯ ರಾಮದುರ್ಗ, ಹನುಮಂತ ಗಬ್ಬೂರು, ಸೇರಿ ಅನೇಕರಿದ್ದರು.
ರ್ಯಾಲಿಗೆ ಮಾದಿಗ ನೌಕರರ ಬೆಂಬಲ
ದೇವದುರ್ಗ: ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸಿ ಹಮ್ಮಿಕೊಂಡಿರುವ ಬೆಳಗಾವಿ ಸುವರ್ಣ ಸೌಧವರೆಗಿನ ಬೈಕ್ ರ್ಯಾಲಿಗೆ ಬೆಂಬಲಿಸುವುದಾಗಿ ಮಾದಿಗ ಜನಾಂಗದ ಸರ್ಕಾರಿ ನೌಕರರ ಸಂಘ ತಿಳಿಸಿದೆ.
ಈ ಕುರಿತು ಸಂಘದ ಮುಖಂಡ ಪ್ರಕಾಶ ಹೊನ್ನಟಗಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾದಿಗ ಜನಾಂಗದವರ ಒಳಮೀಸಲಾತಿಗೆ ಪೂರಕವಾಗಿ ವರದಿ ನೀಡಿರುವ ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಮಾದಿಗ ದಂಡೋರಾದಿಂದ ಆಯೋಜಿಸಿರುವ ಬೈಕ್ ರ್ಯಾಲಿಯನ್ನು ಬೆಂಬಲಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ರಾಜ್ಯದ 1 ಕೋಟಿ ಜನರ ಸಂವಿಧಾನಾತ್ಮಕ ಬೇಡಿಕೆಯನ್ನು ಸರ್ಕಾರ ಸರ್ವಾನುಮತದಿಂದ ಅಂಗೀಕರಿಸಬೇಕು. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಿ ಸಮ್ಮತಿ ಸೂಚಿಸಬೇಕೆಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಮಾದಿಗ ಸಂಘಟನೆಗಳು ಹಮ್ಮಿಕೊಂಡ ಹೋರಾಟಕ್ಕೆ ಸರ್ಕಾರಿ ಮಾದಿಗ ನೌಕರರ ಸಂಘವು ಬೆಂಬಲ ಸೂಚಿಸಿದೆ ಎಂದು ತಿಳಿಸಿದರು. ಈ ಸಂದರ್ಭ ಶಿಕ್ಷಕ ಶಿವರಾಜ ಜಾಲಹಳ್ಳಿ, ಶಿವಣ್ಣ, ಮುಖಂಡ ಶಿವಪ್ಪ ಬಲ್ಲಿದವ್, ಭೀಮರಾಯ ಭಂಡಾರಿ ಸೇರಿ ಅನೇಕರಿದ್ದರು.
ನಾಳೆ ಕಟ್ಟಡ
ಶಂಕುಸ್ಥಾಪನೆ
ರಾಯಚೂರು: ಗ್ರಾಮೀಣ ಉದ್ಯೋಗ ತರಬೇತಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಎಸ್ಬಿಎಚ್ ವತಿಯಿಂದ ಡಿ.4 ರಂದು ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8ಕ್ಕೆ ನಗರದ ಆಶಾಪೂರ ರಸ್ತೆಯ ನವೋದಯ ಶಾಲೆಯ ಹತ್ತಿರ ಶಂಕುಸ್ಥಾಪನೆ ಸಮಾರಂಭ ನಡೆಯಲಿದ್ದು, ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ಡಾ.ವಿ.ಸುರೇಶ ಬಾಬು, ಜಿಪಂ ಸಿಇಒ ಡಾ. ಮುದ್ದುಮೋಹನ್, ಬ್ಯಾಂಕಿನ ಕೇಂದ್ರ ಕಚೇರಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್.ಕೆ.ನಿಗಮ್ ಭಾಗಹಿಸಲಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
ಅರ್ಜಿ ಅವಧಿ
ವಿಸ್ತರಣೆ
ಸಿಂಧನೂರು: ತಾಲೂಕಿನ ಬಳಗಾನೂರಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಗ್ರಾಮದಲ್ಲಿ ಒಂದು ದಿನದ ವಾಹನ ಕಲಿಕಾ ಚಾಲನಾ ಪರವಾನಗಿ ಶಿಬಿರದ ಅರ್ಜಿ ಪಡೆಯುವ ದಿನಾಂಕವನ್ನು ಡಿ.4ರವರೆಗೆ ವಿಸ್ತರಿಸಲಾಗಿದೆ ಎಂದು ವಿಎಸ್ಎಸ್ಎನ್ ಅಧ್ಯಕ್ಷ ರಾಘವೇಂದ್ರರಾವ್, ಮಾಜಿ ಅಧ್ಯಕ್ಷ ಡಾ. ಜಾಗೀರದಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೃಷ್ಣಾ ಪಿ.ಜಿ ಮೊ. 99452-48185, ಹನುಮೇಶ ಕಮ್ಮಾರ ಮೊ. 99806-51524ಗೆ ಸಂಪರ್ಕಿಸಿ.
ಚಿನ್ನಾಭರಣ ಲೂಟಿ
ರಾಯಚೂರು: ಮಾನವಿ ತಾಲೂಕಿನ ರಾಮನಾಥ ಕ್ಯಾಂಪಿನಲ್ಲಿ ಸೋಮವಾರ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 9 ತೊಲೆ ಚಿನ್ನಾಭರಣ ದೋಚಿದ್ದಾರೆ. ಕ್ಯಾಂಪಿನ ನಿವಾಸಿ ಸಾಂಬಶಿವರಾವ್ ಎಂಬುವವರಿಗೆ ಸೇರಿದ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ 9 ತೊಲೆ ಚಿನ್ನಾಭರಣ ದೋಚಿದ್ದು, ಈ ವೇಳೆ ಅಕ್ಕಪಕ್ಕದ ಮನೆಗಳಿಗೂ ದಾಳಿಗೆ ಹೊಂಚು ಹಾಕಿದ್ದರೆನ್ನಲಾಗಿದೆ. ಆದರೆ ಮನೆಯಲ್ಲಿದ್ದವರು ಕೂಗಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ಸೇರಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕ್ಯಾಂಪಿನ ಎಲ್ಲ ನಿವಾಸಿಗಳು ದರೋಡೆಕೋರರನ್ನು ಹಿಡಿಯಲು ಮುಂದಾದಾಗ ಪರಾರಿಯಾಗಿದ್ದಾರೆ. ದರೋಡೆಕೋರರು ಕನ್ನಡ, ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ಮನೆಯವರು ತಿಳಿಸಿದ್ದಾರೆ. ಮಾನವಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

