ರಾಯಚೂರಿಂದ ಬೆಳಗಾವಿ ಸುವರ್ಣಸೌಧಕ್ಕೆ...
ಕನ್ನಡಪ್ರಭ ವಾರ್ತೆ , ರಾಯಚೂರು , ಡಿ.2
ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಅಂಗಿಕಾರಕ್ಕೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಜಿಲ್ಲಾ ಮಾದಿಗ ದಂಡೋರಾ ವತಿಯಿಂದ ಸೋಮವಾರ ರಾಯಚೂರಿನಿಂದ ಬೆಳಗಾವಿ ಸುವರ್ಣಸೌಧವರೆಗಿನ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದ ಸಂಘಟನೆ ಮುಖಂಡರು, ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ಮಹಿಷಿ ರಥ ಜೊತೆಗೆ ಬೈಕ್ ರ್ಯಾಲಿ ಆರಂಭಕ್ಕೆ ಚಾಲನೆ ನೀಡಲಾಯಿತು.
ಆಕ್ರೋಶ: ಸಕಲ ಜಾತಿಗಳ ಸೇವೆಗಾಗಿ ಮೀಸಲಾದ ಅಸ್ಪೃಶ್ಯರು ಇಂದಿಗೂ ಮಲ ಬಳೆಯುವ, ಕೆರ ಹೊಲೆಯುವ, ಕಸ ಗುಡಿಸುವ ಕೃತ್ಯದಲ್ಲಿ ತೊಡಗಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಇಂತಹ ಅಮಾನವೀಯ ನಿರಾಕರಣೆಯಿಂದ ತಾತ್ಕಾಲಿಕ ನೆಮ್ಮದಿ ಹೊಂದಲು ಸಂವಿಧಾನ ಬದ್ಧವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ. 18ರಷ್ಟು ಜನಸಂಖ್ಯೆ ಹೊಂದಿದ ಅಸ್ಪೃಶ್ಯ ಸಮುದಾಯಗಳಾದ ಮಾದಿಗ, ಛಲವಾದಿ ಸಂಬಂಧಿಸಿದ ಜಾತಿಗಳಾದ ಸಮಗಾರ, ಮೆಹತಾರ, ಸುಡುಗಾಡು ಸಿದ್ಧರು, ಮೋಚಿ, ಡಕ್ಕಲಿಗ, ಶಿಳ್ಳೇಕ್ಯಾತ, ಹೊಲೆಯ, ಬೇಗಾರ, ಹೊಲೆಯದಾಸ, ಚೆನ್ನದಾಸರಂತಹ 101 ಉಪಜಾತಿಗಳಿಗೆ ಕೇವಲ ಶೇ. 18ರಷ್ಟು ಮೀಸಲಾತಿ ಕಲ್ಪಿಸಿ, ಕಿತ್ತಾಡುವ ಪೈಪೋಟಿಗೆ ಹಚ್ಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೌಲತ್ತುಗಳ ಅಸಮಾನ ಹಂಚಿಕೆಯ ವಿರುದ್ಧ 17 ವರ್ಷಗಳಿಂದ ರಾಜ್ಯಾದ್ಯಂತ ಪರಿಶಿಷ್ಟರು ನಡೆಸಿರುವ ಸ್ವಾಭಿಮಾನಿ ಹೋರಾಟದ ಫಲ ನೀಡಿತು. 2004ರಲ್ಲಿ ಅಂದಿನ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಆಡಳಿತಾವಧಿಯಲ್ಲಿ ನೇಮಕವಾದ ಏಕಸದಸ್ಯ ಆಯೋಗ 2007ರವರೆಗೆ ಯಾವುದೇ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಳ್ಳದೇ ನಿಷ್ಕ್ರಿಯೆಗೊಂಡಿತ್ತು. 2009ರಲ್ಲಿ ನೇಮಕಗೊಂಡ ಜಸ್ಟಿಸ್ ಏ.ಜೆ. ಸದಾಶಿವ ಅವರು ಮೂರು ವರ್ಷಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ ಕೈಗೊಂಡ ಅಧ್ಯಯನದ 200 ಪುಟಗಳ ವರದಿಯನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಸಲ್ಲಿಸಿದರು.
ಹೋರಾಟ: ಆಯೋಗವು 6.8 ವರ್ಷ ಕಾಲ ಕಾರ್ಯ ನಿರ್ವಹಿಸಿ, ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿ ವರದಿ ಅಂಗೀಕರಿಸಿ ಒಂದು ಕೋಟಿ ಜನಸಂಖ್ಯೆ ಹೊಂದಿದ ಮಾದಿಗ-ಛಲವಾದಿ ಜನಾಂಗದ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಪೃಶ್ಯ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯದಂತೆ ಎಚ್ಚರಿಸಲು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಪೊಲೀಸರ ಮೂಲಕ ಪೈಶಾಚಿಕ ದಾಳಿ ನಡೆಸಿ, ಅಶ್ರುವಾಯು ಸಿಡಿಸಿ, 150 ಜನರನ್ನು ಬಂಧಿಸಿ, ಕೇಸು ದಾಖಲಿಸಿ 300ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ಬಿಜೆಪಿ ಸರ್ಕಾರ ಬಹುಸಂಖ್ಯಾತ ಪರಿಶಿಷ್ಟರ ಭರವಸೆ ಭಗ್ನಗೊಳಿಸಿ ಅಧಿಕಾರ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕೈದು ತಿಂಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಘೋಷಿಸಿ, ಸಂವಿಧಾನ ಭಾಗ್ಯದ ಬಗ್ಗೆ ಚಿಂತಿಸದಿರುವುದು ವಿಷಾದನೀಯ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯಾವಾರು ಮೀಸಲಾತಿ ಜಾರಿಗೊಳಿಸಲು ಸರ್ವ ಪಕ್ಷಗಳ ಬೆಂಬಲದೊಂದಿಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲು ಒತ್ತಾಯಿಸಿ ಸಾವಿರಾರು ಜನರು ತೆರಳಿ ಸುವರ್ಣಸೌಧದ ಮುಂದೆ ಡಿ.3 ಹಾಗೂ 4 ರಂದು ಅಹೋರಾತ್ರಿ ಧರಣಿ ಹಾಗೂ ಡಿ.5 ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಣಯಿಸಲಾಗಿದೆ.
ಬೈಕ್ ರ್ಯಾಲಿ: ರಾಯಚೂರು ಜಿಲ್ಲೆಯಿಂದ ಡಿ.2 ರಂದು ದ್ವಿಚಕ್ರ ವಾಹನಗಳ ಮೂಲಕ ಸದಾಶಿವ ವರದಿ ಜಾರಿಗೊಳಿಸಲು ಸಾವಿರ ಕಿಮೀ ಬೈಕ್ ರ್ಯಾಲಿ ಮೂಲಕ ಬೆಳಗಾವಿಗೆ ತೆರಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹೇಮಂತ ಅಸ್ಕಿಹಾಳ, ವಿಭಾಗೀಯ ಕಾರ್ಯದರ್ಶಿ ಅಂಬಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಬಿ. ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಅಮರೇಶ, ಮುಖಂಡರಾದ ತಿಮ್ಮಪ್ಪ ಆಲ್ಕೂರ, ಬಿ. ನರಸಪ್ಪ ದಂಡೋರ, ತಾಯಪ್ಪ, ರಾಜೇಂದ್ರ ಜಲ್ದಾರ, ರಾಚಪ್ಪ, ಈರಣ್ಣ, ಅನಿಲ್, ಜನಾರ್ಧನ, ಸುರೇಶ ಅಸ್ಕಿಹಾಳ ಇನ್ನಿತರರು ಇದ್ದರು.
ಬೈಕ್ ರ್ಯಾಲಿಗೆ ನೌಕರರ ಸಂಘದ ಬೆಂಬಲ
ದೇವದುರ್ಗ: ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸಿ ಹಮ್ಮಿಕೊಂಡಿರುವ ಬೆಳಗಾವಿ ಸುವರ್ಣ ಸೌಧವರೆಗಿನ ಬೈಕ್ ರ್ಯಾಲಿಗೆ ಬೆಂಬಲಿಸುವುದಾಗಿ ಮಾದಿಗ ಜನಾಂಗದ ಸರ್ಕಾರಿ ನೌಕರರ ಸಂಘ ತಿಳಿಸಿದೆ.
ಈ ಕುರಿತು ಸಂಘದ ಮುಖಂಡ ಪ್ರಕಾಶ ಹೊನ್ನಟಗಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾದಿಗ ಜನಾಂಗದವರ ಒಳಮೀಸಲಾತಿಗೆ ಪೂರಕವಾಗಿ ವರದಿ ನೀಡಿರುವ ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಮಾದಿಗ ದಂಡೋರಾದಿಂದ ಆಯೋಜಿಸಿರುವ ಬೈಕ್ ರ್ಯಾಲಿಯನ್ನು ಬೆಂಬಲಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ರಾಜ್ಯದ 1 ಕೋಟಿ ಜನರ ಸಂವಿಧಾನಾತ್ಮಕ ಬೇಡಿಕೆಯನ್ನು ಸರ್ಕಾರ ಸರ್ವಾನುಮತದಿಂದ ಅಂಗೀಕರಿಸಬೇಕು. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಿ ಸಮ್ಮತಿ ಸೂಚಿಸಬೇಕೆಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ಮಾದಿಗ ಸಂಘಟನೆಗಳು ಹಮ್ಮಿಕೊಂಡ ಹೋರಾಟಕ್ಕೆ ಸರ್ಕಾರಿ ಮಾದಿಗ ನೌಕರರ ಸಂಘವು ಬೆಂಬಲ ಸೂಚಿಸಿದೆ ಎಂದು ತಿಳಿಸಿದರು.
ಈ ಸಂದರ್ಭ ಶಿಕ್ಷಕ ಶಿವರಾಜ ಜಾಲಹಳ್ಳಿ, ಶಿವಣ್ಣ, ಮುಖಂಡ ಶಿವಪ್ಪ ಬಲ್ಲಿದವ್, ಭೀಮರಾಯ ಭಂಡಾರಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

