ರಾಯಚೂರು

ಕಾಲುವೆಗೆ ನೀರಿಗೆ ಆಗ್ರಹ: ರೈತರಿಂದ ಕಚೇರಿಗೆ ಮುತ್ತಿಗೆ

Published On :

ದೇವದುರ್ಗ: ನಾರಾಯಣಪುರ ಬಲದಂಡೆಯ ವಿತರಣಾ ಕಾಲುವೆ 17ಕ್ಕೆ ನೀರು ಹರಿಸಲು ಒತ್ತಾಯಿಸಿ ಮಂಗಳವಾರ ಗಬ್ಬೂರು ಹೋಬಳಿ ವ್ಯಾಪ್ತಿಯ ರೈತರು ತಾಲೂಕಿನ ಚಿಕ್ಕಹೊನ್ನಕುಣಿಯಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.
ಚಿಕ್ಕಹೊನ್ನಕುಣಿಯಲ್ಲಿರುವ ನೀರಾವರಿ ಇಲಾಖೆಯ ವಿಭಾಗ ಸಂಖ್ಯೆ 6ರ ಕಚೇರಿಗೆ ರೈತರು ಮುತ್ತಿಗೆ ಹಾಕಿ ವಿತರಣಾ ಕಾಲುವೆ 17ಕ್ಕೆ ಸಮರ್ಪಕ ನೀರು ಹರಿಸಬೇಕು. ಕಳೆದ 22 ದಿನಗಳಿಂದ ಈ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದ ರೈತರು ಬೆಳೆದ ಬೆಳೆಗೆ ನೀರಿನ ಅಭಾವವಾಗಿ ಹಾನಿಯುಂಟಾಗಿದೆ ಎಂದು ಆರೋಪಿಸಿದರು.
ಆಕ್ರೋಶ: ನೀರಾವರಿ ಇಲಾಖೆಯ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ನಾರಾಯಣಪುರ ಬಲದಂಡೆ ವಿತರಣಾ ಕಾಲುವೆ 17ರ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಎಕರೆ ಭೂಮಿ ನೀರಾವರಿಯಾಗಿದೆ. ತಾಲೂಕಿನ ಸುಂಕೇಶ್ವರಹಾಲ, ಜಿನ್ನಾಪೂರ, ಹದ್ದಿನಾಳ, ಬೂದಿನಾಳ, ಕಾಕರಗಲ್, ರಾಮದುರ್ಗ, ಶಿವಂಗಿ, ಗೋವಿಂದಪಲ್ಲಿ, ಹೊನ್ನಟಗಿ, ಕೊಳ್ಳೂರು, ಹಂಚಿನಾಳ ಸೇರಿ ಸುಮಾರು 20 ಹಳ್ಳಿಗಳ ಕೃಷಿ ಪ್ರದೇಶಕ್ಕೆ ನೀರಿಲ್ಲವಾಗಿದೆ ಎಂದು ದೂರಿದರು.
ಸಲಹಾ ಸಮಿತಿ: ಈಚೆಗೆ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.10ರವರೆಗೆ ನೀರು ಹರಿಸಲು ಸೂಚಿಸಿದ್ದರೂ, ಡಿಸೆಂಬರ್‌ನಲ್ಲಿ ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳಿಸಿದ್ದು ಸರಿಯಲ್ಲ. ಪ್ರತಿ ತಿಂಗಳು 1ರಿಂದ 5ನೇ ತಾರೀಕಿನವರೆಗೆ ಕಾಲುವೆಯಲ್ಲಿ ನೀರಿನ ಹರಿವು ಸ್ಥಗಿತಗೊಳಿಸುವ ಚಿಂತನೆ ನೀರಾವರಿ ಇಲಾಖೆ ನಡೆಸಿದೆ ಎಂದು ಗೊತ್ತಾಗಿದ್ದು, ಇದರಿಂದ ರೈತರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರವೇ ರೈತರಿಗೆ ಸಮರ್ಪಕ ನೀರೊದಗಿಸದಿದ್ದರೆ ರಸ್ತಾ ರೋಕೋ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಬಣ್ಣ ಸಾಹುಕಾರ ಕೂಡ್ಲಿಗಿ, ದೇವೇಂದ್ರಪ್ಪ ಗೌಡ ಹಂಚಿನಾಳ, ಶರಣಪ್ಪ ಗೌಡ ಸುಂಕೇಶ್ವರಹಾಳ, ಪ್ರಕಾರ ಪಾಟೀಲ್, ಶೇಖರಪ್ಪ ಗೌಡ ಸೇರಿ ಅನೇಕ ರೈತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.