ರಾಯಚೂರು

ಅಕ್ರಮ ಮರಳು ಮಾರ್ಗ

Published On :

ಕ.ಪ್ರ.ವಾರ್ತೆ, ದೇವದುರ್ಗ, ಡಿ.6
ನದಿಯಿಂದ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಡಳಿತ ಕಳೆದ ಕೆಲ ದಿನಗಳಿಂದ ಸತತ ದಾಳಿ, ಪರಿಶೀಲನೆ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ತಾಲೂಕಿನ ಕೋಣಚಪಳಿ ಗ್ರಾಮದ ಬಳಿ ಮರಳು ಸಾಗಣೆಗೆ ಅನುಕೂಲವಾಗಿಸಲು ಕೃಷ್ಣಾ ನದಿಗೆ ಅಕ್ರಮವಾಗಿ ಸೇತುವೆ ನಿರ್ಮಿಸಿದ್ದು ಪತ್ತೆಯಾಗಿದೆ. ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಸೇತುವೆ ತೆರವಿಗೆ ಸೂಚಿಸಿದ್ದಾರೆ.
ಕೋಣಚಪಳಿ ಗ್ರಾಮದ ಬಳಿಯ ಕೃಷ್ಣಾನದಿ ತೀರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಕೃಷ್ಣಾ ನದಿಯಲ್ಲಿ ಮರಳು ಸಾಗಣೆ ಮಾಡಲು ನದಿಗೆ ಅಡ್ಡಲಾಗಿ ಅಕ್ರಮವಾಗಿ ನಿರ್ಮಿಸಿರುವ ಮಣ್ಣಿನ ಸೇತುವೆಯನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಅಧಿಕಾರಿಗಳೇ ಅಕ್ರಮ ಮರಳು ಸಾಗಣೆಗೆ ಪೂರಕವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆ.
ಕೇವಲ ಕಂದಾಯ ಇಲಾಖೆಯಿಂದ ಇಂತಹ ದೊಡ್ಡ ಪ್ರಮಾಣದ ಮರಳು ಮಾಫಿಯಾ ತಡೆಯಲು ಕಷ್ಟ. ತಾಲೂಕಿನಲ್ಲಿ ನದಿ ತೀರದ ಹಳ್ಳಿಗಳಾದ ಬುಂಕಲದೊಡ್ಡಿ, ಚಿಂಚೋಡಿ, ಹೇರುಂಡಿ ಸೇರಿ ಅನೇಕ ಕಡೆಗಳಲ್ಲಿ ಅಕ್ರಮ ಮರಳು ಮಾರಾಟದ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಕೋಣಚಪಳಿ ಗ್ರಾಮದ ಹತ್ತಿರ ಕೃಷ್ಣಾ ನದಿಯಲ್ಲಿ ಅಡ್ಡಲಾಗಿ ನಿರ್ಮಿಸಿದ ರಸ್ತೆಯ ಬಗ್ಗೆ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಪರವಾನಗಿ ಪಡೆಯಲಾಗಿತ್ತು. ಆದರೆ, ಪರವಾನಗಿ ಬೇರೆಯ ಕಾರ್ಯಕ್ಕೆ ಪಡೆದು ನದಿಗೆ ಅಡ್ಡಲಾಗಿ ಸೇತುವೆ ಮಾದರಿಯ ರಸ್ತೆ ನಿರ್ಮಿಸಲಾಗಿದೆ. ನದಿಗೆ ಅಡ್ಡಲಾಗಿ ಯಾವುದೇ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡು ಕೂಡಲೇ ಸೇತುವೆ ತೆರವಿಗೆ ಸೂಚಿಸಿದರು.
ನೋಟಿಸ್:  ಮರಳು ಸಾಗಣೆಗೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ನದಿಯಿಂದ ಮರಳು ತೆಗೆದು ಸಂಗ್ರಹ ಮಾಡುವ ಸಂಬಂಧ ನದಿ ಪಕ್ಕದಲ್ಲಿ ರಸ್ತೆ ಅನುಕೂಲ ಮಾಡಿಕೊಡಬಹುದು. ಆದರೆ, ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ ಮಾಡಲು ಪರವಾನಿಗೆ ನೀಡಲು ಸಾಧ್ಯವಿಲ್ಲ. ಆದರೆ, ಈ ಅಕ್ರಮ ಸೇತುವೆ ಮಾದರಿಯ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಲೋಕೋಪಯೋಗಿ, ಕೃಷ್ಣಾಭಾಗ್ಯ ಜಲ ನಿಗಮ ಸೇರಿ ಇನ್ನುಳಿದ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ತಾಲೂಕಿನಲ್ಲಿ ಟೆಂಡರ್ ಪಡೆದು ಮರಳು ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ವಾಹನಗಳಿಗೆ ಹೆಚ್ಚಿನ ಪ್ರಮಾಣದ ಮರಳು ತುಂಬಿದಲ್ಲಿ ರಸ್ತೆಗಳು ಹಾಳಾಗುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಸಡ್ಡೆ ತೋರಿದರೆ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ತಾಲೂಕಿನ ಹೂವಿನಹೆಡ್ಗಿ ಬ್ರಿಜ್, ತಿಂಥಿಣಿ ಬ್ರಿಜ್ ಮತ್ತು ಗೂಗಲ್ ಬ್ರಿಜ್‌ಗಳ ಮೂಲಕ ಬೇರೆ ತಾಲೂಕುಗಳಿಗೆ ಮರಳು ಸಾಗಣೆ ಮಾಡುವ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ತಪಾಸಣೆಗೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸುವಂತೆ ಸೂಚಿಸುವುದಾಗಿ ಅವರು ಹೇಳಿದರು.
ಈ ಸಂದರ್ಭ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಭೀಮರಡ್ಡಿ, ಕಂದಾಯ ನಿರೀಕ್ಷಕ ಬೂದೆಪ್ಪ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.