ರಾಯಚೂರು

ಮಡೆಮಡಸ್ನಾನ, ಪಂಕ್ತಿಬೇಧಕ್ಕೆ ವಿರೋಧ: ಇಂದು ಪ್ರತಿಭಟನೆ

Published On :

ರಾಯಚೂರು: ರಾಜ್ಯ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಜಾರಿ ನಿಟ್ಟಿನಲ್ಲಿ ಕೂಡಲೇ ಚರ್ಚೆಗೆ ಮುಂದಾಗಬೇಕು ಎಂದಿರುವ ಸಿಪಿಎಂ ಪಕ್ಷವು ರಾಜ್ಯದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿಗಳಾದ ಪಂಕ್ತಿಬೇಧ ಮತ್ತು ಮಡೆಮಡ ಸ್ನಾನದಂಥ ಆಚರಣೆ ವಿರೋಧಿಸಿ ಪಕ್ಷದಿಂದ ಡಿ.8 ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಈ ಕುರಿತು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್, ಮೌಢ್ಯಬಿತ್ತುವ ಕಾರ್ಯವನ್ನು ತಡೆಯುವ ನಿಟ್ಟಿನಲ್ಲಿ ಮೂಢನಂಬಿಕೆಯ ಪ್ರತಿಬಂಧಕ ಕಾಯಿದೆ ನೆರವಾಗಲಿದೆ. ಈ ಬಗ್ಗೆ ಚರ್ಚೆ ನಂತರ ಜಾರಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗಳಿಗೆ ಜನಸಂಖ್ಯಾಧರಿತ ಅನುದಾನ ಬಿಡುಗಡೆಯ ನಿಟ್ಟಿನಲ್ಲಿ ಶಾಸನ ಜಾರಿಗೆ ತಂದಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕೇಂದ್ರ ಸರ್ಕಾರ ರಾಜ್ಯದ ಮಾದರಿಯಲ್ಲಿಯೇ ಶಾಸನ ಜಾರಿಗೆ ಮುಂದಾಗಲು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದುವರೆಗೆ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ ಅನುದಾನದ ದುರ್ಬಳಕೆಯೇ ಹೆಚ್ಚಾಗಿದ್ದು, ನೂತನ ಶಾಸನದಿಂದ ಅಕ್ರಮಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಶೇ.22.75 ಹಾಗೂ ಶೇ.18ರ ಅನುದಾನದ ಬಿಡುಗಡೆ ಮತ್ತು ಬಳಕೆಯಲ್ಲಿ ವಿವಿಧೆಡೆ ಅನೇಕ ಬಾರಿ ಅಕ್ರಮಗಳು ನಡೆದಿರುವುದು ಬಯಲಿಗೆ ಬಂದಿದ್ದು, ಅವುಗಳ ಬಗ್ಗೆ ತನಿಖೆಯೂ ಜಾರಿಯಲ್ಲಿದೆ. ಆದರೆ ಯೋಜನೆಯ ಮೂಲ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗಿದೆ.
ಮಡೆಮಡ ಸ್ನಾನಕ್ಕೆ ಸಂಬಂಧಿಸಿ ಪೇಜಾವರ ಶ್ರೀಗಳು ನೀಡಿರುವ ನೈವೇದ್ಯದ ಮೇಲೆ ಹೊರಳಾಡಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಟ್ಟಾರೆಯಾಗಿ ಎಂಜಲೆಲೆ ಮೇಲೆ ಹೊರಳಾಡುವುದು ಅಮಾನವೀಯವಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂಥ ಆಚರಣೆ ಇದಾಗಿದೆ. ಒಟ್ಟು ಆಚರಣೆಯನ್ನೇ ಸಂಪೂರ್ಣ ನಿಷೇಧಿಸುವ ಅವಶ್ಯಕತೆಯಿದೆ. ರಾಜ್ಯಾದ್ಯಂತ ಡಿ.8 ರಂದು ಸಿಪಿಎಂ ಪಕ್ಷದಿಂದ ಹೋರಾಟ ಆಯೋಜಿಸಲಾಗಿದೆ. ಸರ್ಕಾರವನ್ನು ಇಂಥ ಅನಿಷ್ಟ ಆಚರಣೆಗಳ ನಿಷೇಧಕ್ಕೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಪಕ್ಷದ ಪ್ರಮುಖರಾದ ಮಲ್ಲಯ್ಯ ಜಾಲಹಳ್ಳಿ, ಕೆ.ಜಿ. ವೀರೇಶ್, ಡಿ.ಎಸ್. ಶರಣ ಬಸವ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.