ರಾಯಚೂರು

ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ

Published On :

ಕ.ಪ್ರ.ವಾರ್ತೆ    ಲಿಂಗಸ್ಗೂರು    ಡಿ.8
ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಬೇಜವಬ್ದಾರಿತನ ತೋರುತ್ತಿದ್ದಾರೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಈಚನಾಳ ಗ್ರಾಮದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳ ಜನಸ್ಪಂದನ ಸಭೆಯಲ್ಲಿ ಸರ್ಕಾರದ ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಹಲವಾರು ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಸಾರ್ವಜನಿಕರು ಆರೋಪಗಳ ಸುರಿಮಳೆಗೈದರು.
ಕಾಟಾಚಾರದ ಸಭೆ ಏತಕ್ಕೆ?: ಸಂಧ್ಯಾಸುರಕ್ಷಾ, ವೃದ್ಧಾಪ್ಯ, ಅಂಗವಿಕಲ ವೇತನ, ಅನ್ನಭಾಗ್ಯ, ಭಾಗ್ಯಲಕ್ಷ್ಮೀ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಇಂತಹ ಕಾಟಾಚಾರದ ಸಭೆ ನಡೆಸುವುದರಲ್ಲಿ ಯಾವ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ದೊರಕಬೇಕೆನ್ನುವ ಸದುದ್ದೇಶದಿಂದ ಜನಸ್ಪಂದನ ಸಭೆ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿದರೆ, ಸಾಧ್ಯವಿರುವ ಅರ್ಜಿ ಪರಿಶೀಲಿಸಿ ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುವುದು. ತಮ್ಮ ವ್ಯಾಪ್ತಿಗೆ ಬಾರದ ಅರ್ಜಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಲ್ಲಿ ಗಮನ ಹರಿಸಲಾಗುವುದು.
ಮಂಗಳಮುಖಿಯರಿಗೆ ಹೊಸ ಯೋಜನೆಗಳು ಜಾರಿಯಾಗಿದ್ದು, 40 ವರ್ಷ ವಯಸ್ಸು ಮೀರಿದ ಅವಿವಾಹಿತ ಹೆಣ್ಣು ಮಕ್ಕಳಿಗೆ ಮನಸ್ವಿನಿ ಯೋಜನೆಯಡಿ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಮಂಗಳಮುಖಿಯರಿಗೆ ಮಾಸಾಶನ ನೀಡಲಾಗುವುದು. ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ಉಪ ತಹಸೀಲ್ದಾರ್ ಖಾಜಾ ಹುಸೇನ್ ತಿಳಿಸಿದರು.
ಅಧಿಕಾರಿಳಿಂದ ಮಾಹಿತಿ: ನಂತರ ಜೆಸ್ಕಾಂ, ಸಿಡಿಪಿಒ, ಸಮಾಜ ಕಲ್ಯಾಣ, ಲೋಕೋಪಯೋಗಿ, ಕಂದಾಯ, ಆರೋಗ್ಯ, ರೇಷ್ಮೆ, ಶಿಕ್ಷಣ, ಅಬಕಾರಿ, ಸಾರಿಗೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಗಳ ವ್ಯಾಪ್ತಿಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
5 ಎಕರೆ ಭೂಮಿಗಿಂತ ಕಡಿಮೆ ಇರುವ ಒಣಬೇಸಾಯ ಸಣ್ಣ ರೈತರಿಗೆ ಬೆಳೆ ಪರಿಹಾರ ಚೆಕ್ಗಳು ಬಂದಿಲ್ಲ. ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಈಚನಾಳ ತಾಂಡದ ರೈತ ಗಂಗಪ್ಪ ರಾಠೋಡ್ ಒತ್ತಾಯಿಸಿದರು.
ಅದೇ ರೀತಿ ವೈದ್ಯರ ಕೊರತೆ, ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಕುರಿತ ದೂರಿಗೆ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ ಮಾತನಾಡಿ, ಇದು ತಾಲೂಕಿನ ಸಮಸ್ಯೆಯಲ್ಲ. ರಾಜ್ಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ವಿವಿಧ ಸಿಬ್ಬಂದಿಗಳ ಕೊರತೆ ಇದೆ. ಹೈ-ಕ.ಕ್ಕೆ 371(ಜೆ) ಕಲಂ ಜಾರಿಯಾದ ಪ್ರಯುಕ್ತ ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ವಿವರಿಸಿದರು.
ಸಭೆಗೆ ಜಲಾನಯನ, ಪಿಎಲ್ಡಿ ಬ್ಯಾಂಕ್, ಪಶು ಸಂಗೋಪನೆ, ಎಪಿಎಂಸಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಭೆಯಲ್ಲಿ ಬೆರಳೆಣಿಕೆ ಅಧಿಕಾರಿಗಳ ಹಾಜರಿದ್ದ ಪ್ರಯುಕ್ತ ಸಾರ್ವಜನಿಕರ ಆಕ್ರೋಶದ ಮಧ್ಯೆ ಜನಸಂಪರ್ಕ ಸಭೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.