ರಾಯಚೂರು

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಡಿ.9
ನಾಡಿನ ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಸಿಗುವಂತಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.
ಇಂದಿನ ದಿನಮಾನಗಳಲ್ಲಿ ಒಕ್ಕಲುತನ ಮಾಡುವ ರೈತರು ಸಂಪೂರ್ಣ ಪರಾವಲಂಬಿಯಾಗಿ ಬೀಜ, ರಸಗೊಬ್ಬರ, ವಿದ್ಯುತ್, ನೀರು, ಸಾಲ ಇವೆಲ್ಲವುಗಳನ್ನು ಹೋರಾಟ ಮಾಡಿ ಪಡೆಯುವ ಪರಿಸ್ಥಿತಿ ಬಂದಿದೆ. ರೈತರು ಚಿಂತಾಕ್ರಾಂತರಾಗಿದ್ದು ಅಲ್ಲದೆ ಕೂಲಿಕಾರರ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳೆ ವಿಮಾ ಹಣ ಸಂಗ್ರಹ: ಕೇಂದ್ರ ಸರ್ಕಾರ 3 ಲಕ್ಷವರೆಗೆ ಶೇ.1ರ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳುತ್ತದೆ. ತಮ್ಮ ಜಮೀನು ಬ್ಯಾಂಕಿನಲ್ಲಿ ಒತ್ತೆಯಿಟ್ಟು ಸಾಲ ಪಡೆಯುವ ರೈತರಿಗೆ 200- 800ರ ವರೆಗೆ ಭಾರ ಹಾಕಲಾಗುತ್ತದೆ ಮತ್ತು 1,500ರಿಂದ 3,500ರ ವರೆಗೆ ಬೆಳೆ ವಿಮೆ ಕಟ್ಟಬೇಕಿದೆ. ಒಂದು ಬ್ಯಾಂಕು ಕನಿಷ್ಠ 20 ಲಕ್ಷ ಬೆಳೆ ವಿಮೆ ಪಡೆಯುತ್ತದೆ. ಅದರಂತೆ ತಾಲೂಕಿನಲ್ಲಿ ಕನಿಷ್ಠ 20ಕ್ಕೂ ಅಧಿಕ ಬ್ಯಾಂಕುಗಳಿದ್ದು, ಈ ಎಲ್ಲ ಬ್ಯಾಂಕುಗಳಿಂದ ಕನಿಷ್ಠ 5- 6 ಕೋಟಿ ಬೆಳೆ ವಿಮಾ ಕಂಪನಿಗಳಿಗೆ ಹಣ ಪಾವತಿಯಾಗುತ್ತದೆ.
ಆದರೆ ಬರಗಾಲ, ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟಕ್ಕೀಡಾದ ಸಮಯದಲ್ಲಿ ಬೆಳೆ ವಿಮೆ ಬರುತ್ತದೆಂಬ ಆಶಾಭಾವನೆ ಹೊಂದುವ ರೈತರಿಗೆ ಸಂಪೂರ್ಣ ನಿರರ್ಥಕವಾಗಿದೆ. ಹೋಬಳಿ ಮಟ್ಟದಲ್ಲಿ ಬೆಳೆ ಕಟಾವು ಮಾಡುವ ವರದಿ ಹಾಗೂ ಕಂದಾಯ ಇಲಾಖೆ ಆಣೆವಾರಿ ಪದ್ಧತಿ ಬಂದು 5 ವರ್ಷ ಬೆಳೆ ಕಟಾವು ವರದಿ ಪರಿಗಣಿಸಿದಾಗ ಬೆಳೆ ವಿಮೆ ಸಿಗುತ್ತದೆ.
ಖರ್ಚು ಹಾಕಿ: ರಾಜ್ಯದಿಂದ ಸಾವಿರಾರು ಕೋಟಿ ರುಪಾಯಿ ಬ್ಯಾಂಕುಗಳ ಮೂಲಕ ರೈತರು ಬೆಳೆವಿಮೆ ಪಾವತಿಸುತ್ತಾರೆ. ಆದರೆ ಹೈ-ಕ ಭಾಗದ ರೈತರಿಗೆ ಯಾವುದೇ ಲಾಭವಾಗಿಲ್ಲ. ಬೆಳೆ ವಿಮೆ ಕಡ್ಡಾಯಗೊಳಿಸದೆ ರೈತರು ಒಪ್ಪಿದರೆ ಮಾತ್ರ ವಿಮೆ ಖರ್ಚು ಹಾಕಬೇಕು. ಕಟ್ಟುಬಾಕಿಯಾದಾಗ ಕನಿಷ್ಠ ಶೇ.25ರಷ್ಟು ಆಕರಣೆ ಆಗುತ್ತದೆ. 3 ವರ್ಷ ಕಟ್ಟು ಬಾಕಿ ಆದಲ್ಲಿ ಸಾಲ ದುಪ್ಪಟ್ಟಾಗಲಿದ್ದು, ಬ್ಯಾಂಕುಗಳು ಸರ್ವಿಸ್ ಚಾರ್ಜ್ ಹಾಕಬಾರದು. ಸಣ್ಣ ರೈತರಿಗೆ 3 ವರ್ಷದವರೆಗೆ ಒಂದೇ ದರದ ಬಡ್ಡಿ ದರ ಆಕರಣೆ ಆಗಬೇಕು. ಬ್ಯಾಂಕುಗಳು ಗ್ರಾಮೀಣ ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.