ದೇವದಾಸಿ ಮಹಿಳೆಯರ ಬೇಡಿಕೆ ಈಡೇರಿಸಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.12
ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಸೀಲ್ದಾರ ಜಿ.ಎಸ್. ಮಹಾಜನ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗುರುಭವನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ದೇವದಾಸಿ ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕೃಷಿಯಲ್ಲಿ ಕೂಲಿಯನ್ನು ನಂಬಿ ಬದುಕುತ್ತಿರುವ ಮಹಿಳೆಯರಿಗೆ ಅವರ ಜೀವನಕ್ಕೆ ಆಧಾರ ಒದಗಿಸಲಿರುವ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಬೇಡಿಕೆಗಳು: ದೇವದಾಸಿ ಮಹಿಲೆಯರಿಗೆ ಕನಿಷ್ಟ ತಲಾ 2 ಎಕರೆ ಕೃಷಿ ಯೋಗ್ಯ ಜಮೀನು ಒದಗಿಸಿ ಪ್ರತ್ಯೇಕ ದೇವದಾಸಿ ಮಹಿಳೆಯರ ಭೂಮಿ ಯೋಜನೆ ಆರಂಭಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಸ್ಪರ್ಧೆ ಇಲ್ಲದೆ ನೇರ ಪ್ರವೇಶವಿರುವ ಹಾಸ್ಟೆಲ್, ವಸತಿ ಶಾಲೆ ಸೌಲಭ್ಯ ಉನ್ನತ ಶಿಕ್ಷಣದವರೆಗೆ ನೀಡಬೇಕು. ಕುಟುಂಬದ ಕಲ್ಯಾಣ ನಿಧಿ ಸ್ಥಾಪಿಸಿ ಅವರ ಮಕ್ಕಳಿಗೆ ಆದ್ಯತೆ ಮೇರೆಗೆ ಉದ್ಯೋಗ ಒದಗಿಸಲು ಮೀಸಲಾತಿ ಜಾರಿಗೊಳಿಸಬೇಕು. ದೇವದಾಸಿ ಮಹಿಳೆಯರ ಮದುವೆಗೆ ಪ್ರೋತ್ಸಾಹಿಸಲು ಒಂದು ಲಕ್ಷ ರು. ಪ್ರೋತ್ಸಾಹ ಧನ ಪ್ರಕಟಿಸಿ ಶೇ. 50ರಷ್ಟು ಹೆಣ್ಣು ಮಕ್ಕಳ ಮದುವೆಗೆ ಸೂಕ್ತ ಪ್ರೋತ್ಸಾಹ ಕ್ರಮ ಕೈಗೊಳ್ಳಬೇಕು.
ವೇತನ ಹೆಚ್ಚಿಸಿ: ಸರ್ವೆಯಿಂದ ಹೊರಗುಳಿದ ದೇವದಾಸಿ ಮಹಿಳೆಯರನ್ನು ಗುರುತಿಸಲು ಮತ್ತೊಮ್ಮೆ ಸರ್ವೆ ಕಾರ್ಯ ಪ್ರಾರಂಭಿಸಿ ನ್ಯಾಯ ಒದಗಿಸಬೇಕು. ವಯಸ್ಸಿನ ಪ್ರಮಾಣ ಪತ್ರ ಒದಗಿಸಿದರೂ ಕೆಲವು ದೇವದಾಸಿ ಮಹಿಳೆಯರಿಗೆ ಸಹಾಯಧನ ಒದಗಿಸಬೇಕು. ದೇವದಾಸಿ ಮಹಿಳೆಯರ ಮಧ್ಯೆ ಕೆಲಸ ಮಾಡುವ ಸ್ವಯಂ ಸೇವಕಿಯರಿಗೆ ನೀಡುವ ವೇತನ ರು. 3 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಿಂದ ಆಗುವ ಕಿರುಕುಳ ತಡೆಗಟ್ಟಬೇಕು. ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ ರು. 1500ಗೆ ಹೆಚ್ಚಿಸಿ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. ದೇವದಾಸಿ ಮಹಿಳೆಯರಿಗೆ ಹಾಗೂ ದಲಿತರಿಗೆ ನೀಡಿದ ಎಲ್ಲ ರೀತಿ ಸಾಲ ಮನ್ನಾ ಮಾಡಬೇಕು.
ಆದಾಯದ ಉತ್ಪನ್ನ: ರೇಷನ್ ವ್ಯವಸ್ಥೆಯಲ್ಲಿ ನಗದು ವರ್ಗಾವಣೆ ಜಾರಿಗೆ ತರಬಾರದು. ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಯೋಜನಾ ಕಚೇರಿ ತಾಲೂಕು ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಬೇಕು. ಆದಾಯದ ಉತ್ಪನ್ನಗಳ ಚಟುವಟಿಕೆಗಳಲ್ಲಿ ಸಹಾಯ ಧನ ಹೆಚ್ಚಳ 25 ಸಾವಿರದಷ್ಟು ಕೊಡಬೇಕು. ಸರಕಾರದ ಎಲ್ಲ ಸೌಲಭ್ಯ ಸ್ವಯಂ ಸೇವಕರಿಗೆ ಮತ್ತು ಸಿಬ್ಬಂದಿಗೆ ಸಿಗಬೇಕು. ಶಾದಿ ಭಾಗ್ಯ ಯೋಜನೆ ಸೌಕರ್ಯ ದೇವದಾಸಿ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ದೊರಕಿಸುವಂತೆ ಮಾಡಬೇಕು. ದೇವದಾಸಿ ಮಹಿಳೆಯರಿಗೆ ನಿವೇಶನ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಗೌರವಾಧ್ಯಕ್ಷ ಪರಶುರಾಮ ಹಲ್ಕಾವಟಗಿ, ತಾಲೂಕಾಧ್ಯಕ್ಷೆ ಸರೋಜಾ ಮೆದಕಿನಾಳ, ಜಿಲ್ಲಾ ಕಾರ್ಯದರ್ಶಿ ಹುಲಿಗೆಮ್ಮ ಮುದಗಲ್, ಮುಖಂಡರಾದ ಪರಶುರಾಮ ಗೊರೇಬಾಳ, ಮುತ್ತಮ್ಮ ಮುದಗಲ್, ಹುಲಿಗೆಮ್ಮ ಕುಣಿಕೆಲ್ಲೂರ, ಗುಂಡಮ್ಮ ಗುರುಗುಂಟಾ, ಎಸ್. ರಂಗನಾಥ, ಪ್ರಶಾಂತ, ಕೆ.ಎಸ್. ಸರಸ್ವತಿ, ಹನುಮಂತ, ಗುರುಪಾದಪ್ಪ ನಾಯಿಕೊಡಿ, ಜಿ. ರಮೇಶ, ನರಸಿಂಹಪ್ಪ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

