ರಾಯಚೂರು

ಇಂದು ಪಶು ವೈದ್ಯರ ವಿಚಾರ ಸಂಕಿರಣ

Published On :

ಕನ್ನಡಪ್ರಭ ವಾರ್ತೆ     ಗುಲ್ಬರ್ಗ     ಡಿ.13
ಕರ್ನಾಟಕ ಪಶು ವೈದ್ಯರ ಸಂಘವು ಪ್ರತಿ 2 ವರ್ಷಕ್ಕೊಮ್ಮೆ ನಡೆಸುವ ತಾಂತ್ರಿಕ ಸಮ್ಮೇಳನವನ್ನು ಈ ಬಾರಿ ನಗರದ ಪಂಡಿತ ರಂಗ ಮಂದಿರದಲ್ಲಿ ಡಿ.14, 15ರಂದು ನಡೆಸಲು ನಿರ್ಧರಿಸಿದೆ.
ಪಶು ಸಂಗೋಪನಾ ಸಚಿವ ಟಿಬಿ ಜಯಚಂದ್ರ ಡಿ.14ರಂದು ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಉಸ್ತುವಾರಿ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಭಾರತೀಯ ಅನುಸಂಧಾನ ಸಂಸ್ಥೆ ಸಹಾಯದ ಮಹಾ ನಿಬಂಧಕ ಡಾ. ಸುರೇಶ ಹೊನ್ನಪ್ಪಗೋಳ್, ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ಬೀದರ್ ಪಶುವೈದ್ಯ ವಿವಿ ಕುಲಪತಿ ಡಾ. ರೇಣುಕಾ ಪ್ರಸಾದ್ ಸೇರಿದಂತೆ ಅನೇಕ ಹಿರಿಯರು ತಾಂತ್ರಿಕ ಸಮ್ಮೇಳನದ ಉದ್ಘಾಟನೆಯ ವೇದಿಕೆಯಲ್ಲಿರುವರು.
ಗ್ರಾಮೀಣಾಭಿವೃದ್ಧಿಯಲ್ಲಿ ಪಶುವೈದ್ಯರ ಪಾತ್ರ ವಿಷಯವಾಗಿ ಡಾ. ಚಾಂದ್ ನಿಂಬಕರ್, ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಹರಿಯಾಣ ಸರ್ಕಾರದ ಯಶೋಗಾಥೆ ವಿಚಾರವಾಗಿ ಡಾ. ರವೀಂದ್ರ ಶರ್ಮಾ, ಕ್ಲಿನಿಕಲ್ ಫಾರ್ಮಾಕೋಲಜಿ ಬಗ್ಗೆ ಶಿವಮೊಗ್ಗದ ಡಾ. ಪ್ರಕಾಶ ನಾಡುರ್, ಪಶುಸಂಗೋಪನೆ ವೈದ್ಯಕೀಯ ವಿಚಾರಗಳ ಬಗ್ಗೆ ಡಾ. ವಿಜಯ ಕುಮಾರ್ ಉಪನ್ಯಾಸ ನೀಡಲಿದ್ದಾರೆ.
10 ವೈದ್ಯರಿಗೆ ಪುರಸ್ಕಾರ
ಶರಣ ಸಿರಸಗಿ ಪಶುವೈದ್ಯ ಡಾ. ಪ್ರಲ್ಙಾದ ಬುದೂರ್, ಮೈಸೂರಿನ ಡಾ. ಅರುಣ, ಕೊಪ್ಪಳದ ಡಾ. ತಿಪ್ಪಣ್ಣ, ಶಿವಮೊಗ್ಗದ ಡಾ. ವೀರಣ್ಣ ಕೆಸಿ, ಬಳ್ಳಾರಿಯ ಟಿ.ಶಶಿಧರ್, ಉತ್ತರ ಕನ್ನಡ ಶಿರಸಿಯ ಜಿವಿ ಹೆಗಡೆ, ತುಮಕೂರಿನ ಡಾ. ಟಿವಿ ಕಾಂತರಾಜು, ಬೆಂಗಳೂರಿನ ಡಾ. ಟಿ.ಗುರುಲಿಂಗಯ್ಯ, ಲಸಿಕೆ ಸಂಸ್ಥೆಯ ವಿಜ್ಞಾನಿ ಡಾ. ಎಂಡಿ ವೆಂಕಟೇಶ, ಡಾ. ಕೆಪಿ ರಮೇಶ ಇವರಿಗೆ ಸಮ್ಮೇಳನದ ಸಮಾರೋಪ(ಡಿ.15)ದಲ್ಲಿ ಶ್ರೇಷ್ಠ ಪಶು ವೈದ್ಯ ಸೇವಕರು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೆ, ಅತಿ ಹೆಚ್ಚು ಅಂಕ ಪಡೆದ ಪಶುವೈದ್ಯರ ಮಕ್ಕಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವೂ ನಡೆಯಲಿದೆ.
ಜೊತೆಗೆ 'ಕನ್ನಡಪ್ರಭ' ಅಂಕಣಕಾರ ಎ.ಆರ್. ಮಣಿಕಾಂತ್ ಅವರ ಲೇಖನದಿಂದ ಪ್ರೇರಿತರಾಗಿ ಸಂಘದವರು ಬರೋಡಾದಲ್ಲಿರುವ ಅಂಗವಿಕಲ ನೃತ್ಯಪಟು ಕಮಲೇಷ ಪಟೇಲ್ ಅವರನ್ನು ಆಹ್ವಾನಿಸಿ ವಿಶೇಷ ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
ಎರಡು ದಿನಗಳ ತಾಂತ್ರಿಕಗೋಷ್ಠಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ 1,200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ರೆಡ್ಡಿ, ಶಿವಶರಣಪ್ಪ ಯಲಗೋಡ್, ಡಾ. ನಾನಾಗೌಡ ಹಳ್ಳಿ ಹೇಳಿದ್ದಾರೆ.
 


ಪ್ರಮುಖ ಬೇಡಿಕೆಗಳು...
1. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ವೈದ್ಯರಿಗೆ ಇರುವಂತೆ ವಿಶೇಷ ಭತ್ಯೆಯನ್ನು 1 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಬೇಕು.
2. ಮಾನವ ವೈದ್ಯರಿಗೆ ಇರುವಂತೆ 6, 13 ವರ್ಷದ ಜೊತೆಗೇ 20ನೇ ವರ್ಷದ ಕಾಲಮಿತಿ ಬಡ್ತಿ ಸವಲತ್ತು ನೀಡಬೇಕು.
3. ಇಲಾಖೆಯಲ್ಲಿ ಖಾಲಿ ಬಿದ್ದಿರುವ 700ಕ್ಕೂ ಹೆಚ್ಚು ಪಶುವೈದ್ಯರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು
4. ಹಾಸನ, ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳನ್ನು ಭಾರತೀಯ ಪಶುವೈದ್ಯ ಪರಿಷತ್ತಿನಲ್ಲಿ ನೋಂದಣಿಯಾಗುವಂತೆ ಕ್ರಮ ಜರುಗಿಸಬೇಕು.
5. ಪಶು ವೈದ್ಯರನ್ನು ಇಲಾಖೇತರ ಕಾರ್ಯಕ್ರಮಗಳಿಗೆ ಬಳಸುವುದನ್ನು ಕೈಬಿಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.