ವಜ್ಜಲ್ ಸದಸ್ಯತ್ವ ಅನರ್ಹಕ್ಕೆ ಆಗ್ರಹ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಡಿ.17
ಬೆಳಗಾವಿ ಅಧಿವೇಶನದಲ್ಲಿ ಹಕ್ಕುಚ್ಯುತಿ ಆಗುವ ರೀತಿಯ ಪದ ಬಳಕೆ ಮಾಡಿದ ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲರ ಸದಸ್ಯತ್ವ ಅನರ್ಹಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲರು ಹಕ್ಕುಚ್ಯುತಿ ಆಗುವ ರೀತಿ ಪದಬಳಕೆ ಮಾಡಿದ್ದು, ಸದಸ್ಯತ್ವದಿಂದ ಅನರ್ಹಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೀಸಲಾತಿಗಾಗಿ ಕಳೆದ 15 ವರ್ಷಗಳ ಕಾಲ ಹೋರಾಟ ನಡೆಸುತ್ತಾ ಬರಲಾಗಿದೆ. ವರದಿ ಸರ್ಕಾರಕ್ಕೆ ಒಪ್ಪಿಸಿದ್ದು, ವರದಿ ಜಾರಿಗೊಳಿಸದಂತೆ ಬಂಜಾರು, ವಡ್ಡರ್ ಜನಾಂಗದ ಕೆಲ ರಾಜಕೀಯ ಪುಂಡರು ಒತ್ತಾಯಿಸುತ್ತಿದ್ದಾರೆ. ಹಂಚಿ ತಿನ್ನುವುದೇ ನ್ಯಾಯ ಎಂದು ನಾವು ಹೇಳಿದರೆ ವಂಚಿಸಿ ಕಬಳಿಸಿ ತಿನ್ನುವುದೇ ನ್ಯಾಯವೆಂದು ಅವರು ಹೇಳುತ್ತಿದ್ದಾರೆ.
ರಾಜಿನಾಮೆಗೆ ಒತ್ತಾಯ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೌನತಾಳಿದ್ದು, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು, ಹೊಲೆಯ ಸಂಬಂಧಿತ ಶೇ. 5ರಷ್ಟು ಹಾಗೂ ಇನ್ನುಳಿದ ಜಾತಿಗನುಗುಣವಾಗಿ ಜನಸಂಖ್ಯೆ ಆಧಾರವಾಗಿ ಹಂಚಿಕೆ ಮಾಡಿದ ಸದಾಶಿವ ಆಯೋಗ ವರದಿ ಸರಿಯಿಲ್ಲ ಎಂದು ವಿರೋಧಿ ಸಮುದಾಯಗಳು ಹೇಳುತ್ತಿವೆ. ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ ಶಾಸಕ ವಜ್ಜಲರು ಅಸ್ಪೃಶ್ಯರ ಹಕ್ಕುಗಳಿಗಾಗಿ ನ್ಯಾ. ಸದಾಶಿವ ಆಯೋಗ ವರದಿಗೆ ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ. ಕೂಡಲೇ ಶಾಸಕ ಮಾನಪ್ಪ ವಜ್ಜಲರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಹಲಿಗೇಶ ಕಡೇಮನಿ, ಅಂಬಣ್ಣ ಬೆನಕನಾಳ, ದುರುಗಪ್ಪ ಡಬ್ಬೇರಮಡು, ಹುಲಗಪ್ಪ ಕುಣಿಕಲ್ಲೂರ, ನಾಗಪ್ಪ ನೀರಲಕೇರಿ, ಯಮನಪ್ಪ ಈಚನಾಳ, ಮರಿಯಪ್ಪ ಬೆನಕನಾಳ, ಹುಸೇನಪ್ಪ ಯರಡೋಣ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

