ರಾಯಚೂರು

ಸಾಧನೆಗೆ ಮಾನಸಿಕ ಸದೃಢತೆ ಅವಶ್ಯ

Published On :

ಕ.ಪ್ರ. ವಾರ್ತೆ ರಾಯಚೂರು  ಡಿ.23
ವ್ಯಕ್ತಿಯು ಬದುಕಿನಲ್ಲಿ ಉನ್ನತವಾದದ್ದನ್ನು ಸಾಧಿಸಲು ನಿರ್ದಿಷ್ಟ ಗುರಿ ಹಾಗೂ ಮಾನಸಿಕ ಛಲ ಹೊಂದುವುದು ಅವಶ್ಯ. ಆಗ ಮಾತ್ರ ಎಂಥ ಅಂಗವೈಕಲ್ಯವಿದ್ದರೂ ಗುರಿ ಸಾಧನೆ ಕಷ್ಟವಾಗಲಾರದು ಎಂದು ಡಿಡಿಪಿಐ ರಾಮಾಂಜನೇಯ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 14-17 ವರ್ಷದವರೊಳಗಿನ ವಿಕಲಚೇತನ ಬಾಲಕ, ಬಾಲಕಿಯರ ಮೇಲಾಟಗಳಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಗುರಿ ಸಾಧನೆಗೆ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಛಲ ಮುಖ್ಯ. ಅಂಗವಿಕಲರು ತಮ್ಮಲ್ಲಿನ ನ್ಯೂನತೆಯ ಕುರಿತು ಕೀಳರಿಮೆ ಹೊಂದುವುದು ಬೇಡ ಎಂದ ಅವರು, ಕ್ರೀಡೆಯಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಮಾನತೆ ಇರಲಿ: ಪ್ರತಿಯೊಬ್ಬರಲ್ಲಿಯೂ ಒಂದಿಲ್ಲೊಂದು ರೀತಿಯ ಪ್ರತಿಭೆಯಿರುತ್ತದೆ. ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಿರಬೇಕಷ್ಟೇ. ಅದರಲ್ಲೂ ಅಂಗವಿಕಲರು ಅಂಥ ಸಾಮರ್ಥ್ಯ ಹೊಂದಿದ್ದು, ಸಾಧನೆಗೆ ಮೇಲಾಟಗಳು ವೇದಿಕೆಯನ್ನು ಕಲ್ಪಿಸುತ್ತವೆ. ಎಲ್ಲರೂ ಸಮಾನರು ಎಂಬ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಕರೆ ನೀಡಿದರು.
ಅಪಾರ ಜ್ಞಾನ, ಕೌಶಲ್ಯ, ಸ್ಪರ್ಧಾ ಮನೋಭಾವವನ್ನು ಅಂಗವಿಕಲರಲ್ಲಿಯೂ ಕಾಣಬಹುದಾಗಿದೆ. ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸ್ಪರ್ಧೆಗಳು ಅಂಥ ಮಕ್ಕಳ ಸಾಮರ್ಥ್ಯ ಪ್ರದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವಂತೆ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸಬೇಕಿದೆ ಎಂದರು.
ಮಾನಸಿಕ ದೃಢತೆ ಮುಖ್ಯ: ಅಂಗವಿಕಲರಾದ ಹೆಲನ್ ಕಿಲರ್, ಲೂಯಿ ಬ್ರೈಲ್ ಸೇರಿದಂತೆ ನೂರಾರು ವಿಕಲಚೇತನ ವ್ಯಕ್ತಿಗಳು ಕ್ರೀಡೆಯಲ್ಲಿ ಹತ್ತು ಹಲವು ಸಾಧನೆ ಮಾಡಿದ್ದಾರೆ. ಸಾಧನೆಗೆ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ದೃಢತೆ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ವಿಕಲಚೇತನರು ಸಾಧಕರನ್ನು ತಮ್ಮ ಬದುಕಿನಲ್ಲಿ ಆದರ್ಶವಾಗಿಟ್ಟುಕೊಂಡು ಸಾಧನೆ ಮೆರೆಯುವಂತೆ ಮನವಿ ಮಾಡಿದರು.
ಈ ವೇಳೆ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಮಾಣ ವಚನ ಬೋಧಿಸಲಾಯಿತು. ಜಿಲ್ಲಾ  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಆರ್.ಎಸ್. ಕಣಬರಗಿ, ಚಂದ್ರಶೇಖರ ಭಂಡಾರಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕರಿ ವೀರನಗೌಡ, ಹನುಮಂತಪ್ಪ ಗವಾಯಿ, ಚಂದ್ರಶೇಖರ ದೊಡ್ಡಮನಿ, ತಿಮ್ಮಣ್ಣ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕ್ರೀಡಾಳುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

26ರಂದು ದಿನಾಚರಣೆ
ರಾಯಚೂರು: ನಗರದಲ್ಲಿ ಡಿ.26ರಂದು ವಿಶ್ವ ವಿಕಲಚೇತನರ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.26ರಂದು ಬೆಳಗ್ಗೆ 9ಕ್ಕೆ ವಿಶ್ವ ವಿಕಲಚೇತನರ ದಿನಾಚರಣೆ ಆಯೋಜಿಸಿದ್ದು, ಇದರಂಗವಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.