ರಾಯಚೂರು

ಕಾಲುವೆಗಳಿಗೆ ಸಮರ್ಪಕ ನೀರಿಗೆ ಆಗ್ರಹ

Published On :

ರಾಯಚೂರು: ತುಂಗಭದ್ರಾ ಮತ್ತು ನಾರಾಯಣಪುರ ಬಲದಂಡೆ ಕಾಲುವೆಗಳ ಮೂಲಕ ರೈತರ ಬೆಳೆಗಳಿಗೆ ಸಮರ್ಪಕ ನೀರೊದಗಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘದ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.
ಈ ಕುರಿತು ಬುಧವಾರ ಮಾನವಿ ಪಟ್ಟಣಕ್ಕೆ ಆಗಮಿಸಿದ್ದ ಸಿಎಂರನ್ನು ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮತ್ತಿತರರು ಭೇಟಿ ಮಾಡಿ ಮನವಿ ಸಲ್ಲಿಸಿ, ತುಂಗಭದ್ರಾ ಎಡದಂಡೆ ಕಾಲುವೆಯ ಸಿರವಾರ ವಿಭಾಗದ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರ ಬೆಳೆಗಳಿಗೆ ಸದ್ಯ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ದೂರಿದರು.
ಸಮರ್ಪಕವಾಗಿ ಜಾರಿಯಾಗುತ್ತಿಲ್ಲ: ಎಡದಂಡೆ ಕಾಲುವೆಯ ನಿರ್ವಹಣೆ ಮಾಡುವ ಸಿರವಾರ ವಿಭಾಗದ ಕಚೇರಿಗೆ ಕೂಡಲೇ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ನೇಮಿಸಬೇಕು. ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಎರಡನೇ ಹಂಗಾಮಿಗೆ ಸಂಬಂಧಿಸಿ ಕೈಗೊಂಡ ನಿರ್ಣಯವನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಬದಲಿಗೆ ನಿರ್ಧಾರ ಮಾರ್ಪಾಟು ಮಾಡುವ ಮೂಲಕ ರೈತರಿಗೆ ನೀರಿಲ್ಲದಂತೆ ಮಾಡಿದ್ದಾರೆಂದು ದೂರಿದರು.
ರೈತರು ಸಂಕಷ್ಟಕ್ಕೆ: ಎಡದಂಡೆ ಕಾಲುವೆಯ ಕಟ್ಟಕಡೆಯ ಭಾಗದಲ್ಲಿ ರೈತರು ನೀರಿಗಾಗಿ ಪರದಾಡುವಂತಾಗಿದೆ. ಕೂಡಲೇ ರೈತರಿಗೆ ಸಮರ್ಪಕ ನೀರೊದಗಿಸಲು ಸೂಚನೆ ನೀಡುವಂತೆ ಒತ್ತಾಯಿಸಿದ ಸಂಘದ ಕಾರ್ಯಕರ್ತರು, ನಾರಾಯಣಪುರ ಬಲದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ರೈತರು ಶೇಂಗಾ ಬಿತ್ತನೆ ಕೈಗೊಂಡಿದ್ದು, ಮಾ.30ರ ವೇಳೆಗೆ ಶೇಂಗಾ ಬೆಳೆ ರೈತರಿಗೆ ಲಭ್ಯವಾಗಲಿದೆ. ಆದರೆ ಮಾ.10ಕ್ಕೆ ಕಾಲುವೆಯಲ್ಲಿ ನೀರು ನಿಲುಗಡೆಯಾಗುವ ಸೂಚನೆ ನೀಡಿದ್ದು, ಅದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆರೋಪಿಸಿದರು.
ಆಧುನೀಕರಣ ಕಾರ್ಯಕ್ಕೆ: ಕಾರಣ ನಾರಾಯಣಪುರ ಬಲದಂಡೆ ಕಾಲುವೆಯಡಿಯ ರೈತರಿಗೆ ಮಾ.30ರವರೆಗೆ ನೀರು ಹರಿಸಬೇಕು. ಕಾಲುವೆಯ ಸಮಗ್ರ ಆಧುನೀಕರಣ ಕಾರ್ಯಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಲುವೆಯನ್ನು 157ಕಿಮೀ ವರೆಗೆ ವಿಸ್ತರಿಸಬೇಕು. ಈ ಕಾಲುವೆಯಡಿ ನೀರಿನ ಪೂರೈಕೆಯಲ್ಲಿ ವಾರಾಬಂದಿ ವ್ಯವಸ್ಥೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಮೂಲ ಯೋಜನೆಯಂತೆಯೇ 14.43 ಟಿಎಂಸಿ ನೀರು ಬಳಕೆಗೆ ಹಾಗೂ ಮಾನವಿ ತಾಲೂಕಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ರೈತರು, ರೈತರ ವಿದ್ಯುತ್ ನೀರೆತ್ತುವ ಮೋಟಾರ್‌ಗಳಿಗೆ ಕೇವಲ 2ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಅದರಿಂದ ಬೆಳೆ ಹಾನಿಯ ಭೀತಿ ಎದುರಾಗಿದೆ. ಕೂಡಲೇ ಸಮರ್ಪಕ ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿದರು.
ನಾನಾ ರೀತಿಯಲ್ಲಿ ರೈತರ ಶೋಷಣೆ: ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ವೇಳೆ ರೈತರಿಗೆ ವರ್ತಕರು ವಂಚಿಸುತ್ತಿದ್ದು, ಸ್ಯಾಂಪಲ್ ಪಡೆಯುವ ನೆಪದಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಸಂಗ್ರಹಿಸಲಾಗುತ್ತಿದೆ. ತೂಕದಲ್ಲಿ ಮತ್ತು ದರ ನಿಗದಿಯಲ್ಲಿಯೂ ವಂಚಿಸಲಾಗುತ್ತಿದೆ. ನಾನಾ ರೀತಿಯಲ್ಲಿ ರೈತರ ಶೋಷಣೆ ನಡೆಯುತ್ತಿದ್ದು, ಕೂಡಲೇ ಸರ್ಕಾರ ಎಪಿಎಂಸಿ ಮಾರುಕಟ್ಟೆಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ಬಾಲಾಜಿ ಜೀನೂರು ಕ್ಯಾಂಪ್, ದೊಡ್ಡಬಸನಗೌಡ, ನರಸಿಂಗರಾವ್ ಕುಲಕರ್ಣಿ, ವೆಂಕಟರಾವ್ ಜೀನೂರು, ಬಸವರಾಜ ಮಾಲಿಪಾಟೀಲ್, ನರಸಪ್ಪ ಯಾದವ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.