ಶವಗಳ ಗುರ್ತು ಪತ್ತೆ
ರಾಯಚೂರು: ಆಂಧ್ರದ ಪುಟ್ಟಪರ್ತಿ ಬಳಿ ಶನಿವಾರ ಬೆಂಗಳೂರು- ನಾಂದೇಡ್ ರೈಲಿನ ಎಸಿ ಬೋಗಿಯಲ್ಲಿನ ಅಗ್ನಿ ದುರಂತ ಘಟನೆಯಲ್ಲಿ ಮಡಿದ ರಾಯಚೂರಿನ ಐವರ ಶವಗಳ ಗುರುತು ಗುರುತು ಪತ್ತೆಯಾಗಿದ್ದು, ಸಹಕಾರಿ ಧುರೀಣ ಸುಭಾಷ್ ಪಾಟೀಲ್ ಅವರ ಕಳೇಬರದ ಅಂತ್ಯಕ್ರಿಯೆ ಭಾನುವಾರ ಅವರ ಸ್ವಗ್ರಾಮದಲ್ಲಿ ನಡೆಸಲಾಯಿತು.
ನಗರಕ್ಕೆ ಬೆಂಗಳೂರು- ನಾಂದೇಡ್ ರೈಲಿನ ಎಸಿ ಬೋಗಿ ಬಿ-1ನಲ್ಲಿ ಆಗಮಿಸುತ್ತಿದ್ದ ರಾಜ್ಯ ಸಹಕಾರಿ ಮಂಡಳಿಯ ಮುಖಂಡ ಸುಭಾಷ್ ಪಾಟೀಲ್ ಶಾವಂತಗೇರಾ, ನಗರದ ಕೋಟ್ ತಲ್ಹಾರ್ ಪ್ರದೇಶದ ಡಾ.ಅಸ್ರಾ, ಇಬ್ರಾಹಿಂ ರಾಹಿ, ಇಶಾಂತ್ ಹಾಗೂ ರಾಹುಲ್ ಎಂಬುವವರ ಶವಗಳ ಗುರುತು ಪತ್ತೆಯಾಗಿದೆ. ಈ ಪೈಕಿ ಸುಭಾಷ್ ಪಾಟೀಲ್ ಅವರ ಕಳೇಬರವನ್ನು ಭಾನುವಾರ ಅವರ ಸ್ವಗ್ರಾಮ ದೇವದುರ್ಗ ತಾಲೂಕಿನ ಶಾವಂತಗೇರಾ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇನ್ನುಳಿದ ಮೃತ ವ್ಯಕ್ತಿಗಳ ಕಳೇಬರಗಳು ಇನ್ನೂ ಕುಟುಂಬದವರಿಗೆ ಹಸ್ತಾಂತರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಸೈಕಲ್ ವಿತರಣೆ
ಸಿಂಧನೂರು: ತಾಲೂಕಿನ ಬಂಗಾರಿ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗಳಿಗೆ ಕಾಂಗ್ರೆಸ್ ಮುಖಂಡ ಬಸವರಾಜ ಹಿರೇಗೌಡ್ರು ಸೈಕಲ್ ವಿತರಿಸಿದರು.
ನಂತರ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದರು.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಖಂಡನೆ
ಸಿಂಧನೂರು: ಡಾವಣಗೇರಾ ನಗರದ ಬಿಸಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿರುವ ಘಟನೆಯನ್ನು ತಾಲೂಕ ಗಂಗಾಮತಸ್ಥ ನೌಕರರ ಕ್ಷೇಮಾಭೀವೃದ್ಧಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವೈ.ಎಚ್.ರಕ್ಕಸಗಿ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿ, ಪ್ರಕರಣದ ತನಿಖೆಯನ್ನು ಅನವಶ್ಯಕವಾಗಿ ವಿಳಂಬ ಮಾಡಲಾಗುತ್ತಿದೆ. ಅಪರಾಧ ಎಸಗಿದ ಆರೋಪಿಗಳನ್ನು ಬಾಲಾಪರಾಧಿಗಳು ಎಂದು ದೃಢೀಕರಿಸಿ ರಕ್ಷಿಸಲು ಹುನ್ನಾರ ನಡೆದಿದೆ. ಇಂತಹ ಪ್ರಯತ್ನಗಳು ಮುಂದುವರೆದರೆ ವಿದ್ಯಾರ್ಥಿನಿಗೆ ಅನ್ಯಾಯ ಮಾಡಿದಂತಾಗುತ್ತದೆ. ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವೈ.ಎಚ್. ರಕ್ಕಸಗಿ ಹಾಗೂ ತಾಲೂಕ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಬಿ. ಕುಮಾರಪ್ಪ ಜವಳಗೇರಾ ಒತ್ತಾಯಿಸಿದ್ದಾರೆ.
ಇಂದು ಸಾಹಿತ್ಯ ಸಿಂಚನ
ಸಿಂಧನೂರು: ನಗರದ ಅನಿಕೇತನ ಪಪೂ ಕಾಲೇಜಿನಲ್ಲಿ ಡಿ.30ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಪತ್ರಕರ್ತ ಡಿ.ಎಚ್. ಕಂಬಳಿ ಉದ್ಘಾಟಿಸುವರು. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಬದುಕು ಬರೆಹ ಕುರಿತು ಸಾಹಿತಿ ಚಿದಾನಂದ ಗುರುವಿನ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎಸ್.ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರೇಶಪ್ಪ ಮೈಲಾರ್, ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯ ಮಾಜಿ ಅಧ್ಯಕ್ಷೆ ಕಮಲಾಬಾಯಿ ಬೇವಿನಕಟ್ಟಿ ಭಾಗವಹಿಸುವರು. ನಂತರ ಗೀತನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಂಗೀತ ಕಲಾವಿದರಾದ ವೀರೇಶ ಸಾಲಿಮಠ, ಪರಿಮಳ ದೇಶಪಾಂಡೆ, ಲಕ್ಷ್ಮೀಕಟ್ಟಿ, ಎಚ್.ಭಾರತಿದೇವಿ, ಮಂಜುನಾಥ ಹಾಲಾಪುರ, ವಾಸುದೇವ ಉಪ್ಪಳ, ಚಿದಾನಂದಪ್ಪ ಗೋರೆಬಾಳ, ಬಸವರಾಜ್ ಮೋತಿ, ಈಶಪ್ರಭು, ವೈ.ಬಿ. ಚಳ್ಳಮರದ, ಭಕ್ಷಿದರವೇಶ, ನಾರಾಯಣಪ್ಪ ಮಾಡಶಿರವಾರ, ಬಸವರಾಜ್ ಗಸ್ತಿ, ಹೇಮಾ ಹೆಬ್ಬಾರ್, ಆರೀಫಾ ವಗರನಾಳ ಗೀತ ನಮನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಎನ್ನೆಸ್ಸೆಸ್ ವಿಶೇಷ ಶಿಬಿರಕ್ಕೆ ಚಾಲನೆ
ರಾಯಚೂರು: ನಗರದ ಬಾಲಕರ ಸರ್ಕಾರಿ ವ.ಪೂ.ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು, ಮುನ್ನೂರುವಾಡಿ ಪ್ರದೇಶದ ಸರ್ಕಾರಿ ಪ.ಪೂ. ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಡಿಡಿಪಿಯು ಸಿ.ಟಿ. ಕಲ್ಲಯ್ಯ ಉದ್ಘಾಟಿಸಿ ಮಾತನಾಡಿ, ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ನೆರವಾಗುತ್ತವೆ. ನಾಯಕತ್ವ ಗುಣ, ಹೊಣೆಗಾರಿಕೆಯನ್ನು ಬೆಳೆಸುತ್ತವೆ ಎಂದ ಅವರು, ಶಿಬಿರದಲ್ಲಿ ಬೋಧಿಸುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಯಶಸ್ಸು ಕಾಣುವಂತೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸದಾಶಿವಪ್ಪ ವಹಿಸಿದ್ದರು. ಬಾಲಕರ ಸರ್ಕಾರಿ ಪ.ಪೂ.ಕಾಲೇಜಿನ ನಾಜಿನೀನ್ ಬೇಗಂ, ಅಲ್ಲಾಬಕ್ಷ್, ಅಮರೇಶ್, ಉಪನ್ಯಾಸಕ ರಾಜಾಸಾಬ್ ಅಂಗಡಿ ಮಾತನಾಡಿದರು.
ಪ್ರಾಚಾರ್ಯ ಪ್ರಕಾಶ ಕುಲಕರ್ಣಿ, ಗುರುಸ್ವಾಮಿ ಹಿರೇಮಠ, ಶರಣಪ್ಪ ಸೇರಿದಂತೆ ಅನೇಕರಿದ್ದರು.
ವಾರ್ಡ್ ಮಟ್ಟದ ತಿಳಿವಳಿಕಾ ಸಭೆ ಯಶಸ್ವಿ
ರಾಯಚೂರು: ನಗರದ ಹರಿಜನವಾಡಾ ಪ್ರದೇಶ ವಾರ್ಡ್ ಸಂಖ್ಯೆ 20ರಲ್ಲಿ ಈಚೆಗೆ ವಾರ್ಡ್ ಮಟ್ಟದ ತಿಳಿವಳಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಏಷ್ಯಾ ಅಭಿವೃದ್ಧಿ ಬ್ಯಾಂಕಿನ ನೆರವಿನ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮದ ಸಮುದಾಯ ಅಭಿವೃದ್ಧಿ ವಿಭಾಗದ ಅನುಷ್ಠಾನ ಸಂಸ್ಥೆ ವಿಶ್ವಸೇವಾ ಮಿಷನ್ ವತಿಯಿಂದ ಆಯೋಜಿಸಿದ್ದ ಸಭೆಯನ್ನು ನಗರಸಭೆಯ ಸದಸ್ಯ ಪಿ.ಯಲ್ಲಪ್ಪ ಉದ್ಘಾಟಿಸಿದರು.
ಯೋಜನೆಯ ಯೋಜನಾಧಿಕಾರಿ ದಯಾನಂದಕುಮಾರ್ ಮಾತನಾಡಿ, ವಾರ್ಡ್ ಮಟ್ಟದಲ್ಲಿ ಕುಡಿಯುವ ನೀರಿನ ಮಹತ್ವ ಮತ್ತು ಒಳಚರಂಡಿ ಬಳಕೆಯ ಕುರಿತು ವಿವರಿಸಿದರು. ನಗರಸಭೆ ಸದಸ್ಯೆ ಹೇಮಲತಾ, ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ರಂಗಪ್ಪ ವಕೀಲರು, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಯೋಜನೆಯ ನಿರ್ವಹಣೆ ಸಂಸ್ಥೆಯ ಸಿಬ್ಬಂದಿ ಮತ್ತು ಜನತೆ ಪಾಲ್ಗೊಂಡಿದ್ದರು.
'ಸರ್ಕಾರಗಳ ಸಾಧನೆ ಜನತೆಗೆ ತಿಳಿಸಿ'
ಮುದಗಲ್: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪರ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರ್ಖಾನ್ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಅನ್ನಭಾಗ್ಯ, ಶಾದಿಭಾಗ್ಯ, ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಮತ್ತಿತರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಜನರಿಗೆ ಮನವರಿಕೆ ಮಾಡಿ: ಅದೇ ರೀತಿ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು, ಲೋಕಪಾಲ ಮಸೂದೆ ಜಾರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಜನರ ಮನಮುಟ್ಟುವಂತೆ ಕಾರ್ಯಕರ್ತರು ತಿಳಿಸಬೇಕು ಎಂದರು. ಮುಖಂಡರ ಮಹಾಂತೇಶ ಪಾಟೀಲ್ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಗಳ ಸಾಧನೆಗಳನ್ನು ಜನರಿಗೆ ಹೇಳುವ ಮೂಲಕ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಬೇಕು. ಕಾರ್ಯಕರ್ತರು ಧೃತಿಗೆಡದೆ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಂ.ಡಿ. ರಫಿ, ಪಪಂ ಮಾಜಿ ಉಪಾಧ್ಯಕ್ಷ ಮೈಬೂಬಸಾಬ್, ಷರೀಫ್ ವಕೀಲ್, ದಾವೂದಸಾಬ್, ಪಪಂ ಸದಸ್ಯ ಮಾಸೂಮ್ ಷರೀಫ್, ಶಿವರಾಜ ತಳವಾರ, ರಾಮಣ್ಣ, ರಾಮನಗೌಡ ವ್ಯಾಕರನಾಳ, ಗ್ಯಾನನಗೌಡ, ನಂದಪ್ಪ ಹೊಳ್ಯಾಚಿ, ಡಾ. ಬಸವರಾಜ ಹೊರಪೇಟೆ, ಸೈಯ್ಯದ ಹಾಸೀಂ ಖಾದ್ರಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

