'ಸಂಶೋಧಕರಿಂದ ಜಕಣಾಚಾರ್ಯರಿಗೆ ಅವಹೇಳನ'
ರಾಯಚೂರು: ಅಮರಶಿಲ್ಪಿ ಜಕಣಾಚಾರ್ಯರ ಬಗ್ಗೆ ಗೊಂದಲ ಹುಟ್ಟಿಸುವ ಕೆಲಸ ಕೆಲ ಸಂಶೋಧಕರು ಮಾಡುತ್ತಿದ್ದಾರೆ. ಜಕಣಾಚಾರ್ಯ ಎನ್ನುವುದು ಕೇವಲ ಕಾಲ್ಪನಿಕ ಎಂದು ಹೇಳುವ ಮೂಲಕ ಅವಹೇಳನ ಮಾಡಲಾಗಿದೆ. ಇದನ್ನು ಖಂಡಿಸಿ ಜ.10ರಂದು ವಿಶ್ವಕರ್ಮ ಸಮಾಜದಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದು ಹೈ.ಕ. ವಿಶ್ವಕರ್ಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೀರೇಂದ್ರ ಇನಾಂದಾರ್ ಹೇಳಿದರು.
ಮಾಹಿತಿ ಸಂಗ್ರಹಿಸಿಲ್ಲ: ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದ್ಭುತ ಶಿಲ್ಪಕಲೆಯನ್ನು ನಾಡಿಗೆ ನೀಡಿದ ಜಕಣಾಚಾರ್ಯರ ಬಗ್ಗೆ ಅನಗತ್ಯ ಗೊಂದಲ ಎಬ್ಬಿಸಲಾಗಿದೆ. 11ನೇ ಶತಮಾನದಲ್ಲಿ ಜಕಣಾಚಾರ್ಯರು ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನಿಸಿದ್ದು, ಸಂಶೋಧಕರು ಪೂರ್ಣ ಪ್ರಮಾಣದ ಮಾಹಿತಿ ಸಂಗ್ರಹಿಸಿದೇ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಟೀಕಿಸಿದರು.
ಬೇಲೂರು, ಹಳೇಬೀಡು, ತಿರುಪತಿ, ಶ್ರವಣಬೆಳಗೊಳ ಸೇರಿದಂತೆ ವಿವಿಧೆಡೆ ಜಕಣಾಚಾರ್ಯರು ಕೆತ್ತಿದ ಶಿಲ್ಪಕಲೆಯಿದೆ. ವಿಶ್ವಮಟ್ಟದಲ್ಲಿ ದೇಶದ ಹೆಸರು ಖ್ಯಾತಿ ಗಳಿಸಲು ಕಾರಣರಾದವರ ಬಗ್ಗೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ಅಪಮಾನ ಮಾಡುವ ಕಾರ್ಯ ಸಂಶೋಧಕರು ಮಾಡಿದ್ದಾರೆಂದು ಆರೋಪಿಸಿದರು.
ಜಕಣಾಚಾರ್ಯರು ಹಣಕ್ಕಾಗಿ, ಹೆಸರಿಗಾಗಿ ಶಿಲ್ಪಕಲೆ ತಯಾರಿಸಿರಲಿಲ್ಲ. ಅವರು ನಿರ್ಮಿಸಿದ ಯಾವುದೇ ದೇವಸ್ಥಾನದಲ್ಲಿ ತಮ್ಮ ಹೆಸರು ಇರಬೇಕೆಂದು ಬಯಸಿದವರಲ್ಲ. ಸಂಶೋಧಕರು ಜಕಣಾಚಾರ್ಯ ಎಂಬ ವ್ಯಕ್ತಿಯೇ ಇರಲಿಲ್ಲ. ಅದು ಕೇವಲ ಕಾಲ್ಪನಿಕ ಎಂದು ಹೇಳಿಕೆ ನೀಡುವ ಮೂಲಕ ಅನಗತ್ಯ ತೊಂದರೆಯುಂಟು ಮಾಡಿದ್ದಾರೆಂದು ದೂರಿದರು.
ಗುಣಗಾನ ಸುಳ್ಳೇ?: ಹಂಪಿಯಲ್ಲಿರುವ ಶಿಲ್ಪಕಲೆಗಳ ಮೇಲೂ ಯಾರು ಅವುಗಳನ್ನು ಕೆತ್ತಿದ್ದಾರೆಂಬುದು ದಾಖಲಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವುಗಳನ್ನು ಕೆತ್ತಿದವರಾರೂ ಇಲ್ಲ ಎಂದು ಹೇಳಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಜಕಣಾಚಾರ್ಯರ ಗುಣಗಾನ ಮಾಡಿದ್ದಾರೆ. ರಾಜ್ಯ ಸರ್ಕಾರ ಶಿಲ್ಪಕಲಾ ಕ್ಷೇತ್ರದಲ್ಲಿನ ಸಾಧಕರಿಗೆ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ನೀಡುತ್ತಿದೆ. ಅದೆಲ್ಲ ಕಾಲ್ಪನಿಕವೇ ಎಂದು ಅವರು ಸವಾಲು ಹಾಕಿದರು.
ಗೊಂದಲ ಸರಿಯಲ್ಲ: ಜಕಣಾಚಾರ್ಯರ ಬಗ್ಗೆ ಮಕ್ಕಳಿಗೆ ಪಾಠ ಬೋಧಿಸಲಾಗುತ್ತಿದೆ. ಅಂದರೆ ಸರ್ಕಾರ ಮಕ್ಕಳಿಗೆ ಕಾಲ್ಪನಿಕ ಕಥೆ ಬೋಧಿಸುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಜಕಣಾಚಾರ್ಯರ ಕುರಿತು ಐತಿಹಾಸಿಕ ಹಿನ್ನೆಲೆಯಿದೆ. ಸಂಶೋಧನೆಯ ಹೆಸರಿನಲ್ಲಿ ಜನತೆಗೆ ಗೊಂದಲ ಸೃಷ್ಟಿಸುವ ಕಾರ್ಯ ತಜ್ಞರು ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಜಕಣಾಚಾರ್ಯರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡುತ್ತಿರುವ ಸಂಶೋಧಕರ ವರ್ತನೆ ಖಂಡಿಸಿ ಜ.10ರಂದು ನಗರದಲ್ಲಿ ವಿಶ್ವಕರ್ಮ ಸಮಾಜದಿಂದ ಪ್ರತಿಭಟನಾ ರ್ಯಾಲಿ ಆಯೋಜಿಸಿದ್ದು, ಜಿಲ್ಲೆಯ ಎಲ್ಲೆಡೆಯಿಂದ ವಿಶ್ವಕರ್ಮ ಸಮಾಜದವರು ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಮಾರುತಿ ಬಡಿಗೇರ್, ಕಾರ್ಯಾಧ್ಯಕ್ಷ ಶ್ರೀನಿವಾಸ್ ಬಡಿಗೇರ್, ಖಜಾಂಚಿ ಗಿರೀಶ್ ಆಚಾರ್ಯ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

