ಹಾರುಬೂದಿ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಕ.ಪ್ರ. ವಾರ್ತೆ, ರಾಯಚೂರು, ಡಿ.30
ಕೃಷಿ ಕ್ಷೇತ್ರದಲ್ಲಿ ಹಾರುಬೂದಿಯ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಲಿದ್ದು, ಅದರಿಂದ ರೈತರಿಗೆ ಉತ್ತಮ ಇಳುವರಿ ಲಭ್ಯವಾಗಲಿದೆ ಎಂದು ನವದೆಹಲಿಯ ಹಾರುಬೂದಿ ಮಿಷನ್ನ ಸಲಹೆಗಾರ ಡಾ.ಸಿ.ವಿ. ಪಾಟೀಲ್ ಸಲಹೆ ನೀಡಿದರು.
ಅವರು ನಗರದ ರಾಯಚೂರು ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಾರುಬೂದಿ ಬಳಕೆ ತಂತ್ರಜ್ಞಾನ ಹಾಗೂ ಪರಿಸರ ಸಂರಕ್ಷಣ ಕೇಂದ್ರ ಶಕ್ತಿನಗರ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕೃಷಿ ವಿವಿ ಹಾಗೂ ಕೃಷಿ ಇಲಾಖೆಯಿಂದ ನಡೆದ ಕೃಷಿಯಲ್ಲಿ ಹಾರುಬೂದಿ ಬಳಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಭೂ ಮೇಲ್ಪದರಕ್ಕೆ ನೆರವು: ಹಾರುಬೂದಿಯಲ್ಲಿ ಶೇ.70ರಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯವಿದೆ. ಅದರಿಂದ ಬೆಳೆಗಳಿಗೆ ತೇವಾಂಶ ದೊರೆಯುತ್ತದೆ. ಸಮಸ್ಯಾತ್ಮಕ ಜಮೀನುಗಳಲ್ಲಿ ಹಾರುಬೂದಿ ಬಳಕೆಯಿಂದ ಭೂಮಿಯ ಮೇಲ್ಪದರವು ಮೆದುವಾಗಿ ಬೆಳೆ ಬೆಳೆಯಲು ನೆರವಾಗುತ್ತದೆ ಎಂದು ತಿಳಿಸಿದರು.
ಸವಳು ಜಮೀನಿನಲ್ಲಿ ಹಾರೂಬೂದಿಯ ಮಿಶ್ರಣದಿಂದ ಸವಳಿನ ಪ್ರಮಾಣ ಕಡಿಮೆಯಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಹಾರುಬೂದಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಕೃಷಿ ಭೂಮಿಯಲ್ಲಿ ಜಿಪ್ಸಂ ನ ಪ್ರಮಾಣ ಕಡಿಮೆಯಿದ್ದಲ್ಲಿ ಅಂಥ ಜಮೀನಿನಲ್ಲಿ ಇದನ್ನು ಬಳಸಿದರೆ ಹೆಚ್ಚು ಸಹಾಯಕಾರಿ ಎಂದು ಹೇಳಿದರು.
ಸಾಮರ್ಥ್ಯ: ಇದ್ದಿಲು ಸೇರಿದಂತೆ ಇತರೆ ವಸ್ತುಗಳು ಸುಟ್ಟ ನಂತರ ಶೇ.30ರಷ್ಟು ಬೂದಿ ಲಭ್ಯವಾಗುತ್ತಿದೆ. ಇದನ್ನು ರೈತರು ನೀರಾವರಿ ಹಾಗೂ ಒಣ ಬೇಸಾಯದಲ್ಲೂ ಬಳಕೆ ಮಾಡಬಹುದಾಗಿದೆ. ಹಾರುಬೂದಿಯ ಬಳಕೆಯಿಂದ ಭೂಮಿಯಲ್ಲಿ ಶೇ.10ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರಿನ ಸಂಗ್ರಹಣಾ ಸಾಮರ್ಥ್ಯ ಕಾಣಬಹುದಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಬತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಬೆಳೆಗೆ ನೀರಿನ ಕೊರತೆಯ ಸಮಸ್ಯೆ ನೀಗಿಸಲು ಹಾರುಬೂದಿಯನ್ನು ರೈತರು ಬಳಸಬಹುದು. ಅದರಿಂದ 20ದಿನಗಳವರೆಗೆ ಕಾಲುವೆಯಿಂದ ನೀರು ದೊರೆಯದಿದ್ದರೂ ಬೆಳೆಗೆ ಯಾವುದೇ ನಷ್ಟಲಾಗದು ಎಂದು ಹೇಳಿದರು.
ಎಣ್ಣೆ ಅಂಶ ಏರಿಕೆ: ಹಾರುಬೂದಿಯ ಬಳಕೆಯಿಂದ ಶೇಂಗಾ ಬೆಳೆಯಲ್ಲಿ ಕಾಳಿನ ಗುಣಮಟ್ಟ ವೃದ್ಧಿಯಾಗುತ್ತದೆ. ಹಾಗೆಯೇ ಕಾಳಿನಲ್ಲಿ ಶೇ.1 ರಿಂದ 2ರಷ್ಟು ಎಣ್ಣೆಯ ಅಂಶವೂ ಏರಿಕೆ ಕಾಣಬಹುದು. ಇನ್ನುಳಿದ ಬೆಳೆಗಳಿಗೆ ಬಳಸಿದಲ್ಲಿ ಇಳುವರಿ ಪ್ರಮಾಣ ಏರಿಕೆಯಾಗುವುದು ಖಚಿತ ಎಂದು ತಿಳಿಸಿದರು.
ಸಮಾರಂಭವನ್ನು ಹೆಚ್ಚುವರಿ ಡಿಸಿ ಎಂ. ತಿಮ್ಮಪ್ಪ ಉದ್ಘಾಟಿಸಿ, ಕೃಷಿಯಲ್ಲಿ ಹಾರುಬೂದಿ ಬಳಕೆ ಮೂಲಕ ವಿವಿಧ ದೇಶಗಳಲ್ಲಿ ರೈತರು ಉತ್ತಮ ಫಲಿತಾಂಶ ಕಂಡಿದ್ದಾರೆ. ರೈತರು ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋಗದೇ ಹಾರುಬೂದಿ ಬಳಕೆಗೆ ಮುಂದಾಗುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಕಾರ್ಯಕ್ರಮ ಸಂಯೋಜಕ ಡಾ.ಸೋಮಶೇಖರ, ಕಾರ್ಯನಿರ್ವಹಾಕ ಅಧಿಕಾರಿ ಶರಣಬಸಪ್ಪ ಪಟ್ಟೇದ್, ಸಹಾಯಕ ಕೃಷಿ ನಿರ್ದೇಶಕ ಡಾ.ಆರ್.ಜಿ. ಸಂದೀಪ್, ತರಬೇತುದಾರ ಬಾಲಚಂದ್ರ ಜಾಬಿಶೆಟ್ಟಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

