ರಾಯಚೂರು

ಅಸ್ವಚ್ಛತೆ: ತೆರಿಗೆ ಪಾವತಿಸೆವು!

Published On :

ರಾಯಚೂರು: ತರಕಾರಿ ಮಾರುಕಟ್ಟೆಯಲ್ಲಿನ ಮಳಿಗೆಗಳ ಬಾಡಿಗೆಯನ್ನು ವರ್ತಕರ ಬೇಡಿಕೆಯಂತೆಯೇ ನಿಗದಿಗೊಳಿಸಿದ ನಗರಸಭೆಯ ಕ್ರಮವನ್ನು ಸ್ವಾಗತಿಸಿರುವ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವು, ತರಕಾರಿ ಮಾರುಕಟ್ಟೆಯಲ್ಲಿ ಕಳೆದ 20 ದಿನಗಳಿಂದ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ನಗರಸಭೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಸ್ವಚ್ಛತೆಗೆ ನೀಡಲಾಗುವ ತೆರಿಗೆ ಪಾವತಿಸದಿರಲು ನಿರ್ಧರಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಮಹಾವೀರ್, ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಕಳೆದ 20 ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗಿಲ್ಲ. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ದೂರಿದರು.
20 ದಿನಗಳಿಂದ ತ್ಯಾಜ್ಯ ವಿಲೇವಾರಿಯಿಲ್ಲ: ಕಲುಷಿತ ಪರಿಸರದಲ್ಲಿಯೇ ವರ್ತಕರು, ರೈತರು ವಹಿವಾಟು ನಡೆಸುವಂತಾಗಿದೆ. ತ್ಯಾಜ್ಯ ವಿಲೇವಾರಿಯ ಹೊಣೆ ಹೊತ್ತ ಗುತ್ತಿಗೆದಾರರು ಆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ನಗರಸಭೆಯ ಆರೋಗ್ಯಾಧಿಕಾರಿಗಳೂ ಈ ನಿಟ್ಟಿನಲ್ಲಿ ಗಮನಹರಿಸುತ್ತಿಲ್ಲ. ಪರಸ್ಪರರು ಹೊಣೆಗಾರಿಕೆ ಮರೆತು ವರ್ತಿಸುತ್ತಿದ್ದಾರೆಂದು ಆರೋಪಿಸಿದರು.
ಈ ಬಗ್ಗೆ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಆರೋಗ್ಯಾಧಿಕಾರಿಗಳ ಅಮಾನತಿಗೆ ಒತ್ತಾಯಿಸಲಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಆರೋಗ್ಯಾಧಿಕಾರಿಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ವಿರುದ್ಧ ನಗರಸಭೆಗೆ ದೂರಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತೆರಿಗೆ ಪಾವತಿಸದಿರಲು ನಿರ್ಧಾರ: ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ವಚ್ಛತೆಯ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ನಗರಸಭೆಗೆ ಸ್ವಚ್ಛತೆಗೆಂದು ನೀಡುತ್ತಿದ್ದ ಸುಮಾರು 4 ಸಾವಿರ ತೆರಿಗೆ ಪಾವತಿಸದಿರಲು ಸಂಘ ನಿರ್ಧರಿಸಿದೆ ಎಂದು ಹೇಳಿದ ಅವರು, ಮಳಿಗೆಗಳಿಗೆ ಸಾವಿರಾರು ರು. ಬಾಡಿಗೆ ಹೆಚ್ಚಳ ಮಾಡಿದ್ದಕ್ಕೆ ವಿರೋಧಿಸಿ ಕಳೆದ 10 ತಿಂಗಳಿಂದ ಬಾಡಿಗೆ ಪಾವತಿಸಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಬಾಡಿಗೆ ಕಡಿತಗೊಳಿಸಿದ್ದರಿಂದ ಶೀಘ್ರದಲ್ಲಿಯೇ ಎಲ್ಲ ವರ್ತಕರು ಮಳಿಗೆಗಳ ಬಾಡಿಗೆ ಸಲ್ಲಿಸಲಿದ್ದಾರೆಂದು ತಿಳಿಸಿದರು.
ನೋಟಿಸ್ ಹಿಂದಕ್ಕೆ: ನಗರಸಭೆ ಈ ಹಿಂದೆ ತರಕಾರಿ ಮಾರುಕಟ್ಟೆ ವರ್ತಕರಿಗೆ ಮಳಿಗೆಗಳ ತೆರವಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ನ್ಯಾಯಾಲಯದಲ್ಲಿ ಆ ಬಗ್ಗೆ ಪ್ರಶ್ನಿಸಿದ ನಂತರ ನ್ಯಾಯಾಲಯದ ಸೂಚನೆ ಮೇರೆಗೆ ನೋಟಿಸ್ ಇತ್ತೀಚೆಗೆ ಮರಳಿ ಪಡೆದಿದೆ ಎಂದು ತಿಳಿಸಿದರು.
 ಸಂಘದ ಪ್ರಮುಖರಾದ ಮೊಹಮ್ಮದ್ ಶಾಲಂ, ಅಂಜಿನೇಯ್ಯ, ವೀರೇಶ್, ತಿಮ್ಮಾರೆಡ್ಡಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.