ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ
ರಾಯಚೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರೋಧಿಸಿ ಫೆ.20, 21ರಂದು ರಾಷ್ಟ್ರಾದ್ಯಂತ ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಮುಷ್ಕರ ನಡೆಸಲಾಗುತ್ತದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆಯೇರಿಕೆ ನೀತಿಯಿಂದಾಗಿ ಕಾರ್ಮಿಕರು ಸಂಕಷ್ಟದಲ್ಲಿ ಬದುಕುವಂತಾಗಿದೆ. ಸರ್ಕಾರಗಳು ಬೆಲೆಯೇರಿಕೆ ನಿಯಂತ್ರಿಸದೇ ಅದಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತಿವೆ ಎಂದು ದೂರಿದರು.
ಆತಂಕಕಾರಿ ವಿಚಾರ: ರಾಜ್ಯ ಸರ್ಕಾರವು ತನ್ನ ಬಜೆಟ್ನಲ್ಲಿ ಹೇಳಿದಂತೆ ರಾಜ್ಯದಲ್ಲಿ ಕೋಟ್ಯಂತರ ಜನ ಪಡಿತರ ಆಹಾರ ವಿತರಣೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಅಂಥವರ ಖಾತೆಗೆ ಸಬ್ಸಿಡಿ ಹಣ ಜಮಾ ಮಾಡುವ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ತರುವ ಮೂಲಕ ಮುಂದಿನ ದಿನಗಳಲ್ಲಿ ಅಂಥ ಎಲ್ಲ ಬಡವರನ್ನು ಮುಕ್ತ ಮಾರುಕಟ್ಟೆಗೆ ನೂಕುವ ಕಾರ್ಯ ಸರ್ಕಾರ ಮಾಡಲು ಯೋಜಿಸಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದಲ್ಲಿ ಕೇವಲ ಕೆಲ ಅಂಶಗಳನ್ನು ಮಾತ್ರ ಪ್ರಕಟಿಸಲಾಗಿದೆ. ಆತಂಕಕಾರಿ ವಿಚಾರಗಳನ್ನು ಸಿಎಂ ಶೆಟ್ಟರ್ ಹೊರಹಾಕಿಲ್ಲ ಎಂದು ದೂರಿದರು.
ಆರ್ಥಿಕ ಹೊರೆ: ತೈಲ ಬೆಲೆ ಹೆಚ್ಚಳದಿಂದ ಕಾರ್ಮಿಕ ವರ್ಗಕ್ಕೆ ಆರ್ಥಿಕ ಹೊರೆ ಹೆಚ್ಚಿದೆ. ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳ ಕಂಡಿದ್ದು, ಕಾರ್ಮಿಕರು ಬದುಕು ನಡೆಸುವುದು ಕಷ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ ಕನಿಷ್ಟ 10 ಸಾವಿರ ವೇತನ ನೀಡಬೇಕೆಂದು ಮುಷ್ಕರದ ಮೂಲಕ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಕಾಯಂ ಸ್ವರೂಪದ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕರ ನೇಮಿಸುವುದನ್ನು ಕೈಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಗುತ್ತಿಗೆ ಕಾರ್ಮಿಕರನ್ನೇ ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ವಿಧಾನಸೌಧ ಸೇರಿದಂತೆ ರಾಜ್ಯದ ಬಹುತೇಕ ಕಡೆ ಗುತ್ತಿಗೆ ನೌಕರರೇ ಹೆಚ್ಚಾದ್ದಾರೆಂದು ಆರೋಪಿಸಿದರು.
ಆಗ್ರಹ: ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಸೌಲಭ್ಯದಿಂದ ಕಾರ್ಮಿಕರಿಗೆ ಪ್ರಯೋಜನವಾಗದು. ಬದಲಿಗೆ ಪ್ರತಿ ತಿಂಗಳು ಕನಿಷ್ಟ ಸೌಲತ್ತು ದೊರೆಯುವ ಭರವಸೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಸರ್ಕಾರದ ಉದ್ದೇಶಿತ ಸ್ವಾವಲಂಬನಾ ಪಿಂಚಣಿ ಯೋಜನೆ ಕೈಬಿಡುವಂತೆ ಹೋರಾಟದ ವೇಳೆ ಆಗ್ರಹಿಸುವುದಾಗಿ ತಿಳಿಸಿದರು.
ಲಾಭಾಂಶ: ಕೇಂದ್ರ ಸರ್ಕಾರ ಸ್ವಾಮ್ಯದ 247 ಸಂಸ್ಥೆಗಳಿಂದ ಪ್ರತಿ ವರ್ಷ 4 ಲಕ್ಷ ಕೋಟಿ ತೆರಿಗೆ ಮತ್ತು ಲಾಭಾಂಶ ದೊರೆಯುತ್ತದೆ. ಅಂಥ ಸಂಸ್ಥೆಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಆಸಕ್ತಿವಹಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಪಾಲುದಾರರ ಸಂಸ್ಥೆಗಳನ್ನು ಹಾಳುಗೆಡವಲು ಮುಂದಾಗಿದೆ ಎಂದು ದೂರಿದರು.
ಈ ಎಲ್ಲ ಅಂಶಗಳನ್ನು ಮುಂದಿರಿಸಿಕೊಂಡು ಫೆ.20 ಹಾಗೂ 21ರಂದು ರಾಷ್ಟ್ರವ್ಯಾಪಿ ಹೋರಾಟಕ್ಕೆ ನಿರ್ಧರಿಸಲಾಗಿದೆ. ಎಲ್ಲ ಕಾರ್ಮಿಕ ಸಂಘಟನೆಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲಿವೆ ಎಂದು ಎಚ್ಚರಿಸಿದರು. ಶೇಕ್ಷಾಖಾದ್ರಿ, ವೀರಭದ್ರ ವಕೀಲರು, ಪ್ರವೀಣ, ಎಚ್.ಪದ್ಮಾ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

