ಆರ್ಟಿಪಿಎಸ್ಗೆ ಶೀಘ್ರ ಬಿಎಚ್ಇಎಲ್
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8ನೇ ಘಟಕದ ಬೂದಿ ನಿರ್ವಹಣೆ ಯಂತ್ರದಲ್ಲಿನ ಕುಸಿತದ ಬಗ್ಗೆ ತನಿಖೆಗೆ ಶೀಘ್ರವೇ ಬಿಎಚ್ಇಎಲ್ ತಜ್ಞರ ತಂಡವು ಆರ್ಟಿಪಿಎಸ್ಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಆರ್ಟಿಪಿಎಸ್ನ 8ನೇ ಘಟಕದ ಬೂದಿ ನಿರ್ವಹಣೆ ಯಂತ್ರ ಕುಸಿತದಿಂದ ಅವಘಡ ಸಂಭವಿಸಿತ್ತು. ಆ ಹಿನ್ನೆಲೆಯಲ್ಲಿ 8ನೇ ಘಟಕವು ಶನಿವಾರ ತಡರಾತ್ರಿಯಿಂದಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದು, ದುರಸ್ತಿ ಕಾರ್ಯ ಕೈಗೊಳ್ಳಲು ಬಿಎಚ್ಇಎಲ್ ತಂಡದ ಆಗಮನಕ್ಕೆ ಕಾಯಲಾಗುತ್ತಿದೆ.
ಈಗಾಗಲೇ ಕೆಪಿಸಿಯ ತಾಂತ್ರಿಕ ನಿರ್ದೇಶಕ ನಾರಾಯಣಪ್ರಸಾದ್ ಆರ್ಟಿಪಿಎಸ್ ಗೆ ಧಾವಿಸಿದ್ದು, ವಸ್ತುಸ್ಥಿತಿ ಪರಿಶೀಲಿಸಿದ್ದಾರೆ. ಆದರೆ ಅವರು ಯಂತ್ರದ ಕುಸಿತಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದು, ಇನ್ನುಳಿದಂತೆ ದುರಸ್ತಿ ಮತ್ತಿತರೆ ವಿಚಾರಗಳನ್ನು ಬಿಎಚ್ಇಎಲ್ ತಜ್ಞರಿಗೆ ಹೊಣೆ ವಹಿಸುವ ನಿರ್ಧಾರ ಕೆಪಿಸಿ ಕೈಗೊಂಡಿದೆ. ಈ ತಂಡ ಬರುವವರೆಗೂ ಯಂತ್ರದ ದೋಷ ಪತ್ತೆ ಅಸಾಧ್ಯ ಎಂದು ಮೂಲಗಳು ತಿಳಿಸಿವೆ. ಕೆಪಿಸಿ ಎಂಡಿ ಕಾಂಬ್ಳೆ ಮಂಗಳವಾರ ಆರ್ಟಿಪಿಎಸ್ಗೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಗೊಂದಲ ಸೃಷ್ಟಿಸಿದ ಯಂತ್ರ ಕುಸಿತ: 8ನೇ ಘಟಕದ ನಿರ್ಮಾಣ ಕಾಮಗಾರಿಯನ್ನು ಬಿಎಚ್ಇಎಲ್ ಕೈಗೊಂಡಿತ್ತು. ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ವಿಚಾರವೇ ಕೆಪಿಸಿ ಮತ್ತು ಬಿಎಚ್ಇಎಲ್ ಮಧ್ಯೆ ಗೊಂದಲಕ್ಕೆ ದಾರಿ ಮಾಡಿದೆ.
ಈ ಮಧ್ಯೆ ಆರ್ಟಿಪಿಎಸ್ನ 8ನೇ ಘಟಕ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದು, ಉಳಿದ ಏಳು ಘಟಕಗಳೂ ಸಹ ವಿವಿಧ ಕಾರಣಗಳಿಂದ ಪೂರ್ಣ ಸಾಮರ್ಥ್ಯ 210 ಮೆ.ವ್ಯಾನಷ್ಟು ವಿದ್ಯುತ್ ಉತ್ಪಾದಿಸುತ್ತಿಲ್ಲ ಎಂಬುದು ಮತ್ತೊಂದು ಸಮಸ್ಯೆ. ಪ್ರಸಕ್ತ ಬೇಸಿಗೆಯಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಕಚ್ಚಿದೆ. ಅದರಿಂದ ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆ ವಿದ್ಯುತ್ಗೆ ರಾಜ್ಯ ನಿರ್ಭರವಾಗುವುದು ಅನಿವಾರ್ಯ. ಆದರೆ ಬೇಸಿಗೆಯ ಆರಂಭದಲ್ಲಿಯೇ ಉತ್ಪಾದನೆ ಸ್ಥಗಿತಗೊಳಿಸಿರುವ 8ನೇ ಘಟಕ ದುರಸ್ತಿಗೊಂಡು ಪುನಾ ವಿದ್ಯುತ್ ಉತ್ಪಾದನೆಗೆ ತೊಡಗಲು ನಾಲ್ಕೈದು ತಿಂಗಳಾದರೂ ಬೇಕು.
2 ಮಾರ್ಗಗಳ ಬಳಕೆಗೆ ಚಿಂತನೆ
ಆರ್ಟಿಪಿಎಸ್ 8ನೇ ಘಟಕದ ಎಲೆಕ್ಟ್ರೋ ಸ್ಟ್ಯಾಟಿಕ್ ಪ್ರೆಸಿಪಿಟೇಟರ್(ಇಎಸ್ಪಿ) ಯಂತ್ರದ ನಾಲ್ಕು ಮಾರ್ಗಗಳ ಪೈಕಿ ಎರಡು ಮಾರ್ಗಗಳನ್ನು ಬಳಕೆ ಮಾಡಿ ವಿದ್ಯುತ್ ಉತ್ಪಾದಿಸುವ ಸಾಧ್ಯಾಸಾಧ್ಯತೆಯ ಬಗ್ಗೆ ಕೆಪಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಒಟ್ಟು 4 ಮಾರ್ಗಗಳಲ್ಲಿ ಬೂದಿ ಸಾಗಣೆಯಾಗುತ್ತಿತ್ತು. ಈ ನಾಲ್ಕು ಮಾರ್ಗಗಳ ಪೈಕಿ ಭಾನುವಾರದ ಅವಘಡದ ನಂತರದಲ್ಲಿ ಎರಡು ಮಾರ್ಗಗಳು ನಾಶವಾಗಿರುವುದು ಪತ್ತೆಯಾಗಿದ್ದು, ಇನ್ನುಳಿದ ಮಾರ್ಗಗಳನ್ನು ಬಳಕೆ ಮಾಡಿ ಪೂರ್ಣ ಸಾಮರ್ಥ್ಯದ ಶೇ. 60ರಷ್ಟಾದರೂ ವಿದ್ಯುತ್ ಉತ್ಪಾದಿಸುವಂತಾಗಲು ಒಂದೆರಡು ತಿಂಗಳಲ್ಲಿ ಘಟಕವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜಿಸಿದ್ದಾರೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ 8ನೇ ಘಟಕ ಪುನಃ ಕಾರ್ಯಾರಂಭ ಅನಿರ್ದಿಷ್ಟ ಕಾಲಕ್ಕೆ ಮುಂದೂಡಿಕೆಯ ಮಾತು ಕೇಳಿ ಬಂದಿತ್ತು. ಆದರೆ ಕೆಪಿಸಿ ತಾಂತ್ರಿಕ ವಿಭಾಗದ ಅಧಿಕಾರಿಗಳ ಪರಿಶೀಲನೆ ವೇಳೆ 8ನೇ ಘಟಕದ ಬೂದಿ ನಿರ್ವಹಣೆಯ ಎರಡು ಮಾರ್ಗಗಳು ಸುಸ್ಥಿತಿಯಲ್ಲಿದ್ದು ಅವುಗಳ ಆಧಾರದಲ್ಲಿಯೇ ವಿದ್ಯುತ್ ಉತ್ಪಾದನೆಗೆ ತಾತ್ಕಾಲಿಕವಾಗಿ ತೊಡಗಿಸುವುದು ಸಾಧ್ಯ ಎಂಬ ಅಭಿಪ್ರಾಯವನ್ನು ತಂತ್ರಜ್ಞರು ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

