ಕೃಷಿ ಕೂಲಿಕಾರರಿಗೆ ಬಜೆಟ್ನಲ್ಲಿ ಆದ್ಯತೆಗೆ ಆಗ್ರಹ
ರಾಯಚೂರು: ರಾಜ್ಯದ ಕೃಷಿ ಕೂಲಿಕಾರರಿಗೆ 2013-14ನೇ ಸಾಲಿನ ಬಜೆಟ್ ನಲ್ಲಿ ನ್ಯಾಯ ಸಮ್ಮತ ಪಾಲು ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಕೇರಳ, ತಮಿಳುನಾಡು ಮಾದರಿಯಲ್ಲಿ ಕೃಷಿ ಕೂಲಿಕಾರರಿಗೆ ಕನಿಷ್ಟ ವೇತನ ಅಲ್ಲದೇ ಭವಿಷ್ಯನಿಧಿ, ವೃದ್ಧಾಪ್ಯ ವೇತನ ಮತ್ತಿತರೆ ಸೌಲಭ್ಯಗಳನ್ನು ಬಜೆಟ್ನಲ್ಲಿ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಮತ್ತಿತರ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕೂಲಿಕಾರರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಅದರ ನಿರ್ವಹಣೆಗೆ ಅಗತ್ಯ ಅನುದಾನ ಬಜೆಟ್ನಲ್ಲಿ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲ ಗ್ರಾಪಂ ಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಯಂತ್ರಗಳ ಮೂಲಕ ಕಾಮಗಾರಿ ನಿರ್ವಹಿಸದೇ ಕೂಲಿಕಾರರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಯಂತ್ರಗಳ ಮೂಲಕ ಕಾಮಗಾರಿ ಕೈಗೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಅನುದಾನ: ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರರಿಗೆ ಬಾಕಿಯಿರುವ ಕೂಲಿ ಹಣವನ್ನು ಕೂಡಲೇ ಪಾವತಿಸಲು ಹಾಗೂ ಕೆಲಸ ನೀಡದ ದಿನಗಳ ನಿರುದ್ಯೋಗ ಭತ್ಯೆಯ ಅಗತ್ಯ ಅನುದಾನ ಒದಗಿಸಬೇಕು. ಈ ಯೋಜನೆ ಅಡಿ 250 ದಿನಗಳ ಕೆಲಸ ಹಾಗೂ ರು. 300 ಕೂಲಿ ನಿಗದಿಪಡಿಸಿ ಅಗತ್ಯ ಹಣ ಒದಗಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸಿದರು.
ಕೃಷಿ ಕೂಲಿಕಾರರಿಗೆ ಹೈನುಗಾರಿಕೆ, ಕುರಿ, ಕೋಳಿ,ಹಂದಿ ಸಾಕಾಣಿಕೆಗೆ ಶೇ.1ರ ಬಡ್ಡಿ ದರದಲ್ಲಿ ಸಾಲ ನೀಡಿಕೆ ಯೋಜನೆ ಬಜೆಟ್ನಲ್ಲಿ ಪ್ರಕಟಿಸಬೇಕು. ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಸೂಚನೆ: ಎಲ್ಲ ಕೃಷಿಕೂಲಿಕಾರರ ಕುಟುಂಬಗಳಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಿಸಬೇಕು. ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಯುನಿಟ್ ಪದ್ಧತಿ ಕೈಬಿಡಬೇಕು.ಕೃಷಿ ಕೂಲಿಕಾರರು ಬಗರ್ ಹುಕುಂ ಅಡಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸುವಂತೆ ಸರ್ಕಾರ ಸೂಚಿಸಲು ಮನವಿ ಮಾಡಿದರು.
ಸರ್ಕಾರಿ ಜಾಗೆಯಲ್ಲಿ ವಾಸವಾಗಿರುವ ಕೂಲಿಕಾರರಿಗೆ ನಿವೇಶನದ ಹಕ್ಕುಪತ್ರ ನೀಡಬೇಕು. 60ವರ್ಷ ವಯಸ್ಸು ದಾಟಿದ ಕೃಷಿ ಕೂಲಿಕಾರರಿಗೆ ಮಾಸಿಕ ವೃದ್ಧಾಪ್ಯ ವೇತನ ರು. 1000 ಹೆಚ್ಚಿಸಬೇಕು. ಸ್ಥಗಿತಗೊಂಡಿರುವ ವಿವಿಧ ಮಾಶಾಸನಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ನನೆಗುದಿಗೆ ಬಿದ್ದಿರುವ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಬಜೆಟ್ ನಲ್ಲಿಯೇ ಅಗತ್ಯ ಅನುದಾನ ನಿಗದಿ ಮಾಡಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ರಾಜ್ಯದ ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಪ್ರಕಟಿಸಬೇಕು. ಸರ್ಕಾರವೇ ಕೃಷಿ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಬೇಕು. ಕೃಷಿ ಕೂಲಿಕಾರರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ದೊರೆಯುವಂತೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಧರಣಿಯಲ್ಲಿ ಸಂಘಟನೆಯ ಪ್ರಮುಖರಾದ ಕರಿಯಪ್ಪ ಅಚ್ಚೊಳ್ಳಿ, ಕೆ.ಜಿ. ವೀರೇಶ್, ಡಿ.ಎಸ್. ಶರಣಬಸವ, ಮುದ್ದಪ್ಪ ಉಂಡ್ರಾಳದೊಡ್ಡಿ, ರವಿ, ಭೀಮಣ್ಣ ಅಯಿಜಪುರ್, ಸತ್ಯಪ್ಪ, ಈಶ್ವರಪ್ಪ, ಹುಲಿಗೆಪ್ಪ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

