ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಶೈಕ್ಷಣಿಕ ಪ್ರಗತಿ
ರಾಯಚೂರು: ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ. ಸಾಮಾಜಿಕ, ಆರ್ಥಿಕವಾಗಿ ಸದೃಢ ದೇಶ ನಿರ್ಮಾಣಕ್ಕೆ ಶೈಕ್ಷಣಿಕ ಪ್ರಗತಿಯೇ ಕಾರಣವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಬುಧವಾರ ಟಾಗೋರ್ ಸ್ಮಾರಕ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇಶದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಪದ್ಧತಿಯಲ್ಲಿ ಕೆಲ ಮಾರ್ಪಾಟು ಮಾಡುವುದು ಅವಶ್ಯಕ. ದೇಶದ ಶಿಲ್ಪಕಲೆ, ಶಬ್ದವೇದಿ ತಂತ್ರಗಾರಿಕೆಗಳೇ ಇಂದಿನ ವೈಜ್ಞಾನಿಕ ಅಭಿವೃದ್ಧಿಗೆ ಅಡಿಪಾಯವಾಗಿವೆ ಎಂದು ಹೇಳಿದರು.
ಪ್ರತಿಭೆಗಳಿಂದಾಗಿ ಖ್ಯಾತಿ: ಭಾರತ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಪ್ರತಿಭೆಗಳಿಂದಾಗಿ ಖ್ಯಾತಿ ಗಳಿಸಿದೆ. ಅದರಲ್ಲೂ ಐಟಿ, ಬಿಟಿ ಕ್ಷೇತ್ರದಲ್ಲಿ ಭಾರತೀಯರ ಸಾಧನೆ ಅಪಾರ. ಎರಡು ಸಾವಿರ ವರ್ಷಗಳ ಹಿಂದೆಯೇ ದೇಶದಲ್ಲಿ ವಿಜ್ಞಾನಿಗಳಿದ್ದರು. ಆದರೆ ಆನಂತರದಲ್ಲಿ ದೇಶ ದಾಸ್ಯಕ್ಕೊಳಗಾಗಿದ್ದರಿಂದ ವಿಜ್ಞಾನಿಗಳು ಪ್ರಾಮುಖ್ಯತೆ ದೊರೆಯದೇ ಮೂಲೆ ಸೇರುವಂತಾಗಿತ್ತು ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಟಾಗೋರ್ ಶಿಕ್ಷಣ ಸಂಸ್ಥೆಯು ಈ ಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಿಕೆ ಆರಂಭಿಸಿದ ಕೀರ್ತಿ ಹೊಂದಿದೆ. ಬಡ ಮಕ್ಕಳಿಗೆ ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ಶಿಕ್ಷಣ ನೀಡಿದೆ ಹೆಮ್ಮೆ ಸಂಸ್ಥೆಯದ್ದಾಗಿದೆ ಎಂದು ತಿಳಿಸಿದರು.
ಸಹಕಾರ ಅಗತ್ಯ: ಟಾಗೋರ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಶಾಸಕ ಸೈಯದ್ ಯಾಸೀನ್ ಮಾತನಾಡಿ, ನಗರವು ಈಚಿನ ವರ್ಷಗಳಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ. ಅದಕ್ಕೆ ಸಾಕ್ಷಿಯೆಂಬಂತೆ ಎಂಜಿನಿಯರಿಂಗ್ ಕಾಲೇಜು, ಕೃಷಿ ವಿವಿ ಸೇರಿದಂತೆ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಆರ್. ತಿಮ್ಮಯ್ಯ ಮಾತನಾಡಿ, ಟಾಗೋರ್ ಶಿಕ್ಷಣ ಸಂಸ್ಥೆಯ ಬೃಹತ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಸ್ಥಳ ಒದಗಿಸುವಂತೆ ಮನವಿ ಮಾಡಿದರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ಅಮರೇಶ್ ಪ್ರಾಸ್ತಾವಿಕ ಮಾತನಾಡಿದರು.
ಜಾಲಹಳ್ಳಿಯ ಶ್ರೀಜಯಶಾಂತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಲಲಿತಮ್ಮ, ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ್, ಆರ್ಡಿಎ ಅಧ್ಯಕ್ಷ ರಾಜಕುಮಾರ್, ನಗರಸಭೆಯ ಹಿರಿಯ ಸದಸ್ಯ ಜಯಣ್ಣ, ಮಾಚನೂರು ಮಲ್ಲಿಕಾರ್ಜುನ, ಗೋಪಾಲರೆಡ್ಡಿ, ಡಾ.ಮಹಾಲಿಂಗ ಸೇರಿದಂತೆ ಅನೇಕರು ಇದ್ದರು.
ಕಾಲೇಜಿನ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

