371 ಕಲಂ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧ
ಯಾದಗಿರಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ 371 ಕಲಂ (ಜೆ) ಮಸೂದೆ ಸಂಪೂರ್ಣ ಜಾರಿಗೆ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಈ ಮಸೂದೆ ಸಂಪೂರ್ಣ ಅನುಷ್ಠಾನವಾಗುವವರೆಗೆ ರಾಜ್ಯ ಸರ್ಕಾದಿಂದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಹೇಳಿದರು.
ನಗರದ ಚಿತ್ತಾಪುರ ರಸ್ತೆಯಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ಸಂಕೀರ್ಣ ಉದ್ಘಾಟಿಸಿ, ಬಳಿಕ ಅಲ್ಲೇ ನಡೆದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಾಡಿನ ಸಮಸ್ತ ಜನತೆಗೆ ಪಾರದರ್ಶಕ, ದಕ್ಷ, ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡಲು ಸರ್ಕಾರ ಕಂಕಣಬದ್ಧವಾಗಿದೆ. ನಾಡಿನ ಜನತೆಯ ನೆಮ್ಮದಿ ಬದುಕಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಬದಲಾಗುತ್ತಿರುವ ಕಾಲಮಾನಕತ್ಕೆ ತಕ್ಕಂತೆ ಸರ್ವಾಂಗೀಣ ಅಭಿವೃದ್ಧಿ ಸಾಧನೆಯತ್ತ ಹೆಜ್ಜೆ ಇಡಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ವಿವಿಧ ಯೋಜನೆಗಳು: ಜಿಲ್ಲೆಯಲ್ಲಿನ 390 ಗ್ರಾಮಗಳಲ್ಲಿ ರು. 7.69 ಕೋಟಿ ಮೊತ್ತದ 528 ಕುಡಿಯುವ ನೀರಿನ ಯೋಜನೆಗಳಡಿಯ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು, ತುರ್ತು ದುರಸ್ತಿ, ಮೇವು ಸರಬರಾಜು ಹಾಗೂ ಇತರ ಕೆಲಸಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಪಂನಿಂದ ಒಟ್ಟು ರು. 22.31 ಕೋಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣಕ್ಕೆ ರು. 420 ಕೋಟಿ ಮಂಜೂರಾಗಿವೆ. ಇದರಲ್ಲಿ ಈವರೆಗೆ ರು. 220 ಕೋಟಿ ವೆಚ್ಚಮಾಡಿ ಸುಮಾರು 25 ಕಿಮೀ ಕಾಲುವೆ ನವೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಜಿಲ್ಲೆಯ ಕೊನೆಯ ಅಂಚಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಬೋರ್ವೆಲ್ ದುರಸ್ತಿ ಮಾಡಲು ತಂಡ ರಚಿಸಿ, ರು. 45.10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಅನುದಾನ ಬಿಡುಗಡೆ: ಜಿಲ್ಲೆಯ ಮೂರೂ ತಾಲೂಕುಗಳ 509 ಗ್ರಾಮಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಬರಪರಿಹಾರ ನಿಧಿಯಡಿ ಕುಡಿಯುವ ನೀರಿಗಾಗಿ ರು. 8.35 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ 528 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಆ ಪೈಕಿ 410 ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣ ರೂಪುಗೊಳ್ಳುತ್ತಿದೆ. ಅಭಿವೃದ್ಧಿ ಕಡೆಗೆ ದಾಪುಗಾಲು ಇಟ್ಟು ಪ್ರಥಮ ಬಾರಿಗೆ ಈ ಕ್ರೀಡಾಂಗಣದ ಉದ್ಘಾಟನೆ ಸಹ ಮಾಡಲಾಗಿದೆ. ಈ ಕ್ರೀಡಾಂಗಣಕ್ಕಾಗಿ ಈಗ ಬಿಡುಗಡೆ ಮಾಡಿದ ರು. 5.5 ಕೋಟಿ ನಡೆಸಿದ್ದು, ಇನ್ನೂ ರು. 12 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಡಜನರ ಅನುಕೂಲಕ್ಕಾಗಿ ಪಟ್ಟಣದಲ್ಲಿ 300 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶದಿಂದ ನಿವೇಶನ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ರು. 27 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಗರದಲ್ಲಿ ರು. 20 ಕೋಟಿ ವೆಚ್ಚದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಗುರ್ತಿಸಿದ್ದು, ಶೀಘ್ರದಲ್ಲಿಯೇ ಇದರ ಕಾಮಗಾರಿ ಆರಂಭಿಸಲಾಗುವುದು. ಮಾಧ್ಯಮ ಸ್ನೇಹಿತರ ಅನುಕೂಲಕ್ಕಾಗಿ ರು. 75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಿಸಲಾಗಿದೆ. ಜಿಲ್ಲಾ ಕೇಂದ್ರದ ನೇತಾಜಿ ವೃತ್ತದಿಂದ ಸುಭಾಷ್ ವೃತ್ತದವರೆಗಿನ ಮುಖ್ಯ ರಸ್ತೆಯ ಮಧ್ಯದಲ್ಲಿನ ಇಂಡೆಕ್ಷನ್ ದೀಪದ ಅಳವಡಿಕೆಗೆ ಚಾಲನೆ ನೀಡಲಾಗುತ್ತಿದೆ. ಮೈಲಾರಲಿಂಗೇಶ್ವರ ದೇವಾಲಯ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶ ಹೊಂದಲಾಗಿದೆ. ಇದರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹ ವಿಶೇಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ರೌಜುಗೌಡ ತಿಳಿಸಿದರು. ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಮರೆಮ್ಮ ಶ್ಯಾಣೆನೋರ, ತೊಗರಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ಗಡ್ಡಿಮನಿ, ಕಾಡಾ ಅಧ್ಯಕ್ಷ ಗಿರೀಶ್ ಮಟ್ಟಣ್ಣವರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವಿಂದ್ರನಾಥ ನಾದ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ತಾಪಂ ಅಧ್ಯಕ್ಷೆ ಲಕ್ಷ್ಮೀ ಚಂಡರಕಿ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಪಂ ಸಿಇಒ ಎಸ್.ಎ. ಜಿಲಾನಿ, ಡಿವೈಎಸ್ಪಿ ಎಸ್.ಬಿ. ಕಟ್ಟಿಮನಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಹಾಗೂ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ವಿವಿಧ ಕವಾಯಿತು ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಸ್ಕೃತಿಕ ಕಾರ್ಯಕ್ರಮ ಜರುಗಿತು. ಸಹಾಯಕ ಆಯುಕ್ತ ಬಿ.ಪಿ. ವಿಜಯ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

