ರಾಯಚೂರು

ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ: ಡಿಸಿ ಸಾವಿತ್ರಿ

Published On :

ಲಿಂಗಸ್ಗೂರು: ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಬರಗಾಲ ಆವರಿಸಿದೆ. ಬೇಸಿಗೆ ಸಮೀಪಿಸುತ್ತಿದ್ದು ಈ ಸಮಯದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ತಿಳಿಸಿದರು.
ಸ್ಥಳೀಯ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 300 ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದು, ಕ್ರೀಯಾಯೋಜನೆ ರೂಪಿಸಲು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕುಡಿವ ನೀರು, ಬೆಳೆ ಹಾನಿ, ಬರ ಕಾಮಗಾರಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಅನಧಿಕೃತ ಬತ್ತ- ಕಠಿಣ ಕ್ರಮ: ಈ ಬಾರಿ ಬತ್ತದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಕಂಡುಬರುತ್ತಿದೆ. ವ್ಯಾಪಾರಸ್ಥರು ಹಾಗೂ ಅಕ್ಕಿ ಗಿರಣಿ ಮಾಲೀಕರು ಅನಧಿಕೃತವಾಗಿ ಗೋದಾಮುಗಳಲ್ಲಿ ಬತ್ತ ಸಂಗ್ರಹಿಸಿದ ಕುರಿತು ತನಿಖೆ ಕೈಗೊಳ್ಳಲಾಗುವುದು. ಅನಧಿಕೃತ ಸಂಗ್ರಹ ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನೂತನ ಕಾಮಗಾರಿಗೆ ತಡೆ: ವಿವಿಧ ತಾಲೂಕುಗಳಲ್ಲಿ ಕಳೆದ ಐದಾರು ವರ್ಷಗಳಿಂದ ನಿರ್ಮಿತಿ ಕೇಂದ್ರದಿಂದ ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸದೆ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ದೂರುಗಳು ಬಂದಿವೆ. ಅಪೂರ್ಣ ಕಟ್ಟಡಗಳ ಕುರಿತು ಮಾಹಿತಿ ಪಡೆದು ಪೂರ್ಣಗೊಳಿಸುವವರೆಗೆ ನೂತನ ಕಾಮಗಾರಿ ನೀಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಿಂಗಸ್ಗೂರು ತಾಲೂಕಿಗೆ ಬರ ಕಾಮಗಾರಿ ನಿರ್ವಹಣೆಗೆ ಬಿಡುಗಡೆ ಮಾಡಿದ ಒಂದು ಕೋಟಿ ಅನುದಾನ ಸದ್ಬಳಕೆಯಾಗುತ್ತಿದ್ದು, ಕಾಮಗಾರಿ ನಿರ್ವಹಣೆ ಕುರಿತು ಮಾಹಿತಿ ಪಡೆದು ಪುನಃ ಹಣ ಬಿಡುಗಡೆ ಮಾಡಲಾಗುವುದು. ವಿಳಂಬವಾದ ಕಾಮಗಾರಿಗಳಿಗೆ ಜಿಪಂ.ಗೆ ನೋಟಿಸ್ ನೀಡಲಾಗಿದೆ. ಕುಡಿವ ನೀರು ಹೊರತುಪಡಿಸಿ ಖಾಸಗಿ ಕೊಳವೆಬಾವಿ ಕೊರೆಯಲು ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು. ಶಾಸಕ ಮಾನಪ್ಪ ವಜ್ಜಲ್, ಸಹಾಯಕ ಆಯುಕ್ತ ಟಿ. ಯೋಗೇಶ, ತಹಸೀಲ್ದಾರ್ ರಾಚಪ್ಪ ಸಮೇದ, ಡಿವೈಎಸ್ಪಿ ಸೂರ್ಯವಂಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.