ರಾಯಚೂರು

ಐದು ಗ್ರಾಮಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Published On :





ರಾಯಚೂರು: ದೇವದುರ್ಗ ತಾಲೂಕಿನ ಊಟಿ ಮತ್ತು ಅದರ ಸುತ್ತಲಿನ ಐದು ಗ್ರಾಮಗಳ ಅಭಿವೃದ್ಧಿಗೆ ಊಟಿ ಚಿನ್ನದ ಗಣಿ ಕಂಪನಿ ಅನುದಾನ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರವೇ ಕಾರ್ಯಕರ್ತರು ಚಿನ್ನದ ಗಣಿ ಕಂಪನಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಊಟಿ ಗ್ರಾಮದಿಂದ ಚಿನ್ನದ ಗಣಿ ಕಂಪನಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಊಟಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟದಿಂದ ಅನೇಕ ಸಮಸ್ಯೆಗಳು ಗ್ರಾಮಸ್ಥರಿಗೆ ಎದುರಾಗಿವೆ ಎಂದು ಆರೋಪಿಸಿದರು.
ಆರೋಗ್ಯದ ಮೇಲೆ ಪರಿಣಾಮ: ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಧೂಳಿನಿಂದಾಗಿ ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಎಲ್ಲ ಅವ್ಯವಸ್ಥೆಗೆ ತಡೆಯೊಡ್ಡಿ ಊಟಿ ಹಾಗೂ ಅದರ ಸುತ್ತಲಿನ ಗ್ರಾಮಗಳಾದ ಮೂಡಲಗುಂಡ, ವಂದಲಿ, ಮದರಕಲ್ ಮತ್ತು ಪಲಕನಮರಡಿ ಗ್ರಾಮಗಳಿಗೆ ಮೂಲಸೌಲಭ್ಯಕ್ಕೆ ಗಣಿ ಕಂಪನಿಯು ಐದು ಕೋಟಿ ರುಪಾಯಿ ಒದಗಿಸುವಂತೆ ನಿರಂತರವಾಗಿ ಹೋರಾಟ ನಡೆಸಲಾಗಿದೆ. ಆದರೆ ಆಡಳಿತ ನಿರ್ಲಕ್ಷ್ಯ ಮುಂದುವರಿಸಿದೆ ಎಂದು ಆರೋಪಿಸಿದರು.
ಪ್ರಸ್ತಾವನೆ ಸರಿಯಲ್ಲ: ಇದೇ ವೇಳೆ ದೇವದುರ್ಗದ ಶಾಸಕ ಶಿವನಗೌಡ ನಾಯಕ, ಚಿನ್ನದ ಗಣಿ ಕಂಪನಿಯು ನೀಡುವ ಐದು ಕೋಟಿ ರು. ಗಳನ್ನು ಗುರುಭವನ ನಿರ್ಮಾಣಕ್ಕೆ ಒದಗಿಸುವಂತೆ ಗಣಿ ಕಂಪನಿಗೆ ಪ್ರಸ್ತಾವನೆ ಸಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಗ್ರಾಮಗಳ ಮೂಲಸೌಲಭ್ಯ ಹೊರತುಪಡಿಸಿ ಬೇರಾವುದೇ ಕಾರ್ಯಕ್ಕೆ ಈ ಹಣ ಬಳಸದಂತೆ ಆಗ್ರಹಿಸಿದರು.
ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸಬೇಕು. ಮಹಿಳಾ ಶೌಚಾಲಯಗಳನ್ನು ನಿರ್ಮಿಸಬೇಕು. ಗಣಿಗಾರಿಕೆಯಲ್ಲಿ ಸ್ಫೋಟದ ಬಳಕೆಯಿಂದ ಬಿರುಕು ಬಿಟ್ಟಿ ಮನೆಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು.ಐದೂ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಗಣಿ ಕಂಪನಿಯ ಅಧಿಕಾರಿಗಳು ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಯಿತು ಎಂದು ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಗ್ರಾಮ ಘಟಕದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.