ರಾಯಚೂರು

ಸುಧಾರಿತ ತೊಗರಿ ಬೀಜ ಸಂಶೋಧಿಸಿ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.3
ತೊಗರಿ ಕಣಜವೆಂದು ಖ್ಯಾತಿ ಗಳಿಸಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಈಗಾಗಲೇ ಟಿಎಸ್ 3ಆರ್ ತಳಿಯ ತೊಗರಿ ಬೆಳೆ ರೈತರು ಬೆಳೆಯುತ್ತಿದ್ದಾರೆ. ಇದು ಉತ್ತಮ ಇಳುವರಿ ನೀಡುತ್ತಿದೆ. ಇದಕ್ಕಿಂತಲೂ ಹೆಚ್ಚಿನ ಇಳುವರಿಗಾಗಿ ಸುಧಾರಿತ ಮಾರುತಿ ಮಾದರಿಯ ಟಿಎಸ್ 3ಆರ್ ತೊಗರಿ ಬೀಜಗಳನ್ನು ಸಂಶೋಧಿಸುವಂತೆ ಕರ್ನಾಟಕ ರಾಜ್ಯ ಕೃಷಿ ಮಿಷನ್‌ನ ಅಧ್ಯಕ್ಷ ಡಾ. ಎಸ್.ಎ. ಪಾಟೀಲ್ ಸಲಹೆ ನೀಡಿದರು.
  ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ 2013- 14ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ದ್ವಿದಳ ಧಾನ್ಯಗಳ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಿಂದಲೇ ಶೇ. 60ರಷ್ಟಿ ದ್ವಿದಳ ಧಾನ್ಯ: ರಾಜ್ಯದಲ್ಲಿ ಗುಲ್ಬರ್ಗ ಜಿಲ್ಲೆ ಶೇ.60ರಷ್ಟು ದ್ವಿದಳ ಧಾನ್ಯ ಬೆಳೆಯುವ ಜಿಲ್ಲೆಯಾಗಿದೆ. ದೇಶದಲ್ಲೇ ಅತೀ ಹೆಚ್ಚು ಅಂದರೆ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯವನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಾದರೆ ರಾಜ್ಯದ ಉತ್ಪಾದನೆ ಹೆಚ್ಚಾಗುವುದೆಂಬ ಉದ್ದೇಶದಿಂದ ಸರ್ಕಾರ ವಿನೂತನ ಯೋಜನೆಗಳನ್ನು ರೂಪಿಸುತ್ತಿದೆ. ಆದಾಗ್ಯೂ ಪ್ರಕೃತಿ ವಿಕೋಪದಿಂದ ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ತಂತ್ರಜ್ಞಾನ ಬಳಸಿಕೊಂಡು ಉತ್ಪಾದನೆ ಹೆಚ್ಚಿಸಬೇಕಾಗಿದೆ ಎಂದರು.
ತೊಗರಿ- ಪ್ರತಿ ವರ್ಷ 800 ಕೋಟಿ ವಹಿವಾಟು: ಜಿಲ್ಲೆಯಲ್ಲಿ 250 ದಾಲ್ ಮಿಲ್‌ಗಳಿದ್ದು 20 ಲಕ್ಷ ಟನ್ ಸರಾಸರಿ 800 ಕೋಟಿ ವಹಿವಾಟು ಪ್ರತಿ ವರ್ಷ ನಡೆಯುತ್ತದೆ. ಆದಾಗ್ಯೂ ಈ ಜಿಲ್ಲೆಗೆ ತೊಗರಿ ಇಳುವರಿ ಹೆಚ್ಚಿಸಲು ಮಹತ್ವ ನೀಡಬೇಕಾಗಿದೆ ಎಂದರು.
  ಸದ್ಯದ ಪರಿಸ್ಥಿತಿಯಲ್ಲಿ ತೊಗರಿ ಕಾಳನ್ನು ಸಂಸ್ಕರಿಸಿದಾಗ ಶೇ.65 ಬೇಳೆ, ಶೇ.15 ಬೇಳೆ ನುಚ್ಚು ಹಾಗೂ ಶೇ.20 ಭೂಸಾ ದೊರೆಯುತ್ತದೆ. ಈ ಬೆಳೆಯ ಪ್ರಮಾಣವು ಶೇ.70ರಷ್ಟು ಬರುವಂತಾದರೆ ರೈತರಿಗೆ ಇನ್ನು ಹೆಚ್ಚಿನ ಆರ್ಥಿಕ ಪ್ರಯೋಜನವಾಗುತ್ತದೆ ಎಂದರು.
ತಿಪ್ಪೆ, ಸಾವಯವ ಗೊಬ್ಬರದಿಂದ ತೇವಾಂಶ ಹೆಚ್ಚಳ: ಗುಲ್ಬರ್ಗ ಜಿಲ್ಲೆಯಲ್ಲಿ ಮಳೆ ಬಂದರೂ ಕಾಲಕಾಲಕ್ಕೆ ನಿಖರವಾಗಿ ಬರುವುದಿಲ್ಲ. ಹೊಲಗಳಲ್ಲಿ ಹಸಿ ಸಂಗ್ರಹ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಲ್ಯಾಂಡ್ ಎಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು. ತಿಪ್ಪೆ ಗೊಬ್ಬರ ಹಾಗೂ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಪ್ರಮಾಣದ ನೀರು ಹೀರಿಕೊಳ್ಳುವ ಶಕ್ತಿ ಇರುವುದರಿಂದ ರೈತರು ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕೆಂದು ಅವರು ಹೇಳಿದರು.  
118 ಸಂಖ್ಯೆಯ ತಳಿ ಅಭಿವೃದ್ಧಿ: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ. ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ತೊಗರಿ ಬೆಳೆ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು ಕಪ್ಪು ಮಣ್ಣಿನಲ್ಲಿ 150ರಿಂದ 160 ದಿವಸಗಳಲ್ಲಿ ಬೆಳೆಯು ಕಟಾವಿಗೆ ಬರುವ ತಳಿ ಮುಖ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ 118 ಸಂಖ್ಯೆಯ ತೊಗರಿ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ವರ್ಷ ರೈತರ ಹೊಲದಲ್ಲಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಲಾಗುವುದು. ಇದಕ್ಕೆ ನೆಟೆ ರೋಗ ನಿರೋಧಕ ಶಕ್ತಿ ಇರುವುದು ಎಂದು ತಿಳಿಸಿದರು.
  ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕ ಡಾ. ಕೆ.ವಿ. ಸರ್ವೇಶ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಪ್ರಭಾಕರ್ ಶೆಟ್ಟಿ ಇತರರು ಉಪಸ್ಥಿತರಿದ್ದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಐ.ಈ. ಬಳತಕರ್ ಸ್ವಾಗತಿಸಿದರು.
ಭಿತ್ತಿ ಪತ್ರ ಬಿಡುಗಡೆ: ಇದೇ ವೇಳೆ ದ್ವಿದಳ ಧಾನ್ಯಗಳ ಅಧಿಕ ಇಳುವರಿಗಾಗಿ ಸುಧಾರಿತ ತಂತ್ರಜ್ಞಾನಗಳ ಕೈಪಿಡಿ ಹಾಗೂ ವಿವಿಧ ಯೋಜನೆಗಳ ಮಾಹಿತಿಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.