ಬದರೀನಾಥ ಯಾತ್ರಿಗಳು ಸುರಕ್ಷಿತ ವಾಪಸ್
ಕನ್ನಡಪ್ರಭ ವಾರ್ತೆ, ರಾಯಚೂರು, ಜು.4
ಉತ್ತರಾಖಂಡನ ಬದರೀನಾಥನಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ನಗರದ ಜೋಷಿ ಕುಟುಂಬದ ಸದಸ್ಯರು ಗುರುವಾರ ನಗರಕ್ಕೆ ಸುರಕ್ಷಿತವಾಗಿ ಮರಳಿದರು.
ನಗರಕ್ಕೆ ಆಗಮಿಸುತ್ತಿದ್ದಂತೆಯೇ ಅವರನ್ನು ಸಂಬಂಧಿಗಳು ಮಾಲಾರ್ಪಣೆ ಮಾಡಿ, ಸಂಭ್ರಮದಿಂದ ಬರಮಾಡಿಕೊಂಡರು. ಈ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಪ್ರವಾಹ ಪರಿಸ್ಥಿತಿಯ ಬಗ್ಗೆ ಅನುಭವ ಹಂಚಿಕೊಂಡ ಯಾತ್ರಿಗಳಾದ ಶ್ರೀನಿವಾಸಾಚಾರ್ಯ ಜೋಷಿ, ಬದರೀನಾಥನ ಅನುಗ್ರಹದಿಂದಲೇ ನಗರಕ್ಕೆ ಮರಳಿದ್ದಾಗಿ ತಿಳಿಸಿದರು.
ಸರ್ಕಾರದ ನೆರವು: ನಡೆದು ಸಾಗಲು ರಸ್ತೆಗಳಿಲ್ಲ, ಮೇಲೆ ಬಿಡದೇ ಸುರಿಯುತ್ತಿದ್ದ ಮಳೆ, ಉಕ್ಕಿ ಹರಿವ ನದಿ ಹಳ್ಳಗಳಿಂದಾಗಿ ದಿನದೂಡುವುದು ಕಷ್ಟವಾಗಿತ್ತು. ನಿದ್ದೆ, ಊಟವಿಲ್ಲದೇ ರಕ್ಷಣೆಗೆ ಕಾದಿದ್ದೆವು. ದೇಶದ ಸೈನಿಕರು ಹಾಗೂ ರಾಜ್ಯ ಸರ್ಕಾರದ ಪರಿಶ್ರಮದಿಂದ ಸುರಕ್ಷಿತವಾಗಿ ನಮ್ಮೂರು ಸೇರಲು ಸಾಧ್ಯವಾಗಿದೆ ಎಂದರು.
ರಾಯಚೂರಿನಿಂದ ತಾವು ಮತ್ತು ತಮ್ಮ ಪತ್ನಿ ಹಾಗೂ ಬೆಂಗಳೂರಿನಿಂದ ಸಂಬಂಧಿಗಳು ಗಯಾ, ಕಾಶಿ ಭೇಟಿ ನಂತರ ಜೂ.15 ರಂದು ಬದರೀನಾಥಕ್ಕೆ ತಲುಪಿದ್ದಾಗಿ ತಿಳಿಸಿದರು. ಜೂ.17ರಂದು ಕೇದಾರನಾಥನ ದರ್ಶನ ಪಡೆಯುವ ಬಗ್ಗೆ ನಿರ್ಧರಿಸಲಾಗಿತ್ತು. ಜೂ.16ರಂದು ಬದರೀನಾಥನ ದರ್ಶನ ಮುಗಿಸಿ ಕೇದಾರನಾಥಕ್ಕೆ ಹೊರಟು ನಿಲ್ಲುತ್ತಿದ್ದಂತೆಯೇ ಆರಂಭವಾದ ಮಳೆ ಎರಡು ದಿನಗಳ ಕಾಲ ತಮ್ಮನ್ನು ಬದರೀನಾಥದಲ್ಲಿಯೇ ಸಿಲುಕಿಸಿತು ಎಂದು ಅನುಭವ ಹಂಚಿಕೊಂಡರು.
ಜೈ ಜವಾನ್: ಬದರೀನಾಥದಲ್ಲಿನ ಪೇಜಾವರ ಮಠದಲ್ಲಿಯೇ ಆಶ್ರಯ ಪಡೆದ ತಮಗೆ ಆಹಾರ ಧಾನ್ಯ ಮತ್ತು ಅಡುಗೆ ಅನಿಲದ ಕೊರತೆಯಿಂದ ಜೀವನ ನಿರ್ವಹಣೆ ಕಷ್ಟಕ್ಕೆ ತಲುಪಿತು. ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ, ಅನ್ನಕ್ಕೆ ಪರದಾಡುವಂಥ ಸ್ಥಿತಿ ಅಲ್ಲಿತ್ತು. ಅಂಥ ಸಂಕಷ್ಟದ ಗಳಿಗೆಯಿಂದ ತಮ್ಮನ್ನು ಪಾರು ಮಾಡಿದ ಸೈನಿಕರ ಕಾರ್ಯವೈಖರಿಗೆ ಅವರು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

