ರಾಯಚೂರು

ಆರ್ಸೆನಿಕ್ ಸಮಸ್ಯೆ: ತಪ್ಪೊಪ್ಪಿಕೊಂಡ ಜಿಲ್ಲಾಡಳಿತ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜು.5
ಕೆಳಮಟ್ಟದ ಅಧಿಕಾರಿಗಳ ನಿರಾಸಕ್ತಿ, ಆಡಳಿತದಲ್ಲಿನ ಸಮನ್ವಯತೆ ಕೊರತೆಯಿಂದ ಅನುದಾನ ಲಭ್ಯವಿದ್ದರೂ ಸಚಿವ ಎಚ್.ಕೆ. ಪಾಟೀಲ್ ಆದೇಶದಂತೆ ಆರ್ಸೆನಿಕ್‌ಯುಕ್ತ ಕುಡಿಯುವ ನೀರು ಪಡೆಯುತ್ತಿದ್ದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ದೊರಕಿಸಲು ಸಾಧ್ಯವಾಗಿಲ್ಲ. ಜಿಪಂ.ನಿಂದ ನೀರಿನ ಮೂಲ ಸ್ಥಗಿತಗೊಳಿಸಿದ್ದರಿಂದ ಜನತೆ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.
- ಹೀಗೆ ತಪ್ಪೊಪ್ಪಿಕೊಂಡು ಶನಿವಾರದಿಂದಲೇ ಲೋಪ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದು ಜಿಪಂ ಸಿಇಒ ಜ್ಞಾನಪ್ರಕಾಶ್.
ಆರ್ಸೆನಿಕ್‌ಯುಕ್ತ ನೀರು ಬಳಕೆ ತಡೆ: ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲ್ ಅವರ ಸೂಚನೆಯಂತೆ ಜುಲೈ 1ರಿಂದಲೇ ಜಿಲ್ಲೆಯ 44 ಗ್ರಾಮಗಳಲ್ಲಿ ಆರ್ಸೆನಿಕ್‌ಯುಕ್ತ ನೀರು ದೊರೆಯುತ್ತಿದ್ದ ಕೊಳವೆಬಾವಿ ಮತ್ತು ಬಾವಿಗಳನ್ನು ಗುರುತಿಸಿ ಅವುಗಳ ನೀರು ಬಳಕೆಗೆ ತಡೆಯೊಡ್ಡಲಾಗಿದೆ ಎಂದು ತಿಳಿಸಿದರು.
ಎಂಜಿನಿಯರ್‌ಗಳ ಕರ್ತವ್ಯಲೋಪ: ತಾಪಂ ಮಟ್ಟದ ಎಂಜಿನಿಯರ್‌ಗಳ ಕರ್ತವ್ಯ ಲೋಪದಿಂದಾಗಿ ಪರ್ಯಾಯ ನೀರು ವ್ಯವಸ್ಥೆ ಮಾಡಲು ವಿಳಂಬವಾಗಿದ್ದರಿಂದ ಈ 44 ಗ್ರಾಮಗಳ ಜನತೆಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವುದು ಆಡಳಿತದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ 44 ಗ್ರಾಮಗಳ ಪೈಕಿ 16 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಇನ್ನುಳಿದ ಗ್ರಾಮಗಳಿಗೆ ಶನಿವಾರದಿಂದಲೇ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆರ್ಸೆನಿಕ್‌ಯುಕ್ತ ಕುಡಿಯುವ ನೀರು ಪಡೆಯುತ್ತಿದ್ದ 44 ಗ್ರಾಮಗಳ ಪೈಕಿ ಕೆಲ ಗ್ರಾಮಗಳಲ್ಲಿ ಜನತೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಸದ್ಯದ ನೀರು ಬಳಕೆಗೆ ತಡೆಯದಂತೆ ವಿರೋಧಿಸಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಮುಂದಿನ ಆದೇಶದವರೆಗೆ ಟ್ಯಾಂಕರ್ ಮೂಲಕ ಅಗತ್ಯವಿರುವಷ್ಟು ನೀರೊದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಧಿಕಾರಿಗಳ ತಪ್ಪು: ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ 111 ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಲು ಈಗಾಗಲೇ ಸ್ಮಾಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಂಸ್ಥೆಯು ಸ್ಥಾಪಿಸಿದ ಘಟಕಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ತಪ್ಪೆಸಗಿದ್ದಾರೆ. ಅದರಿಂದ ಈ ಘಟಕಗಳ ಕಾರ್ಯನಿರ್ವಹಣೆ ಇನ್ನಷ್ಟೇ ಕಾರ್ಯಾರಂಭ ಮಾಡಬೇಕಿದೆ ಎಂದು ಹೇಳಿದರು.
ಸರ್ಕಾರಕ್ಕೆ ಪತ್ರ: ನೀರು ಶುದ್ಧೀಕರಣ ಘಟಕಗಳಿಂದ ಶುದ್ಧ ನೀರು ಪಡೆಯಲು ಜನತೆ ಸದ್ಯ ಹಣ ನೀಡಬೇಕಿದ್ದು, ಈ ಹಣದ ಹೊರೆ ಭರಿಸಲು ಜನತೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದಿಂದಲೇ ಈ ಮೊತ್ತ ಭರಿಸಲು ಮನವಿ ಮಾಡುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲಿ ಆರ್ಸೆನಿಕ್‌ಯುಕ್ತ ಕುಡಿಯುವ ನೀರು ಪಡೆಯುತ್ತಿದ್ದ ಗ್ರಾಮಗಳಿಗೆ ಶನಿವಾರದಿಂದಲೇ ಯಾವುದೇ ರೀತಿಯ ತೊಂದರೆಯಾಗದಂತೆ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು.
ತಂಡದ ಭೇಟಿ: ಆರ್ಸೆನಿಕ್‌ಯುಕ್ತ ಕುಡಿಯುವ ನೀರಿನಿಂದ ಬಾಧಿತ ಗ್ರಾಮಗಳಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಹಾಗೂ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮೀಕ್ಷೆ ನಡೆಸಲು ತಜ್ಞರಾದ ಡಾ. ಸುದರ್ಶನ್ ಮತ್ತು ಡಾ. ಅರುಣ್ ಪಾಟೀಲ್ ಅವರ ನೇತೃತ್ವದ ಎರಡು ತಂಡಗಳು ಜಿಲ್ಲೆಗೆ ಜು. 9ರಂದು ಭೇಟಿ ನೀಡಲಿವೆ ಎಂದು ಹೇಳಿದರು. ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಎಇಇ ಮಂಜುನಾಥ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.