ರಾಯಚೂರು

ಸುದ್ದಿ ಸಂಕ್ಷೇಪ

Published On :

ಪಡಿತರ ಚೀಟಿ: ಅವಧಿ ವಿಸ್ತರಣೆಗೆ ಒತ್ತಾಯ
ಮಸ್ಕಿ: ಆಹಾರ ಪಡಿತರ ಚೀಟಿ ಸಲುವಾಗಿ ಆನ್‌ಲೈನ್ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಿಸುವಂತೆ ಲಿಂಗಸ್ಗೂರು ತಹಸೀಲ್ದಾರರಿಗೆ ಸ್ಥಳೀಯ ಗ್ರಾಪಂ ಅಧ್ಯಕ್ಷ ಅಮರೇಶ್ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರ ಬರೆದು, ಮಸ್ಕಿ ಪಟ್ಟಣವು ಸುಮಾರು 30 ಸಾವಿರ ಜನಸಂಖ್ಯೆ ಹೊಂದಿದೆ. ದೊಡ್ಡ ಗ್ರಾಮವಾಗಿರುವುದರಿಂದ ಆಹಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್ ಅರ್ಜಿ ಸ್ವೀಕರಿಸುವ ಅವಧಿಯು ಜು.30ಕ್ಕೆ ಅಂತ್ಯಗೊಳ್ಳಲಿದೆ ಎಂದು ಹೇಳಲಾಗಿದ್ದು, ಗ್ರಾಪಂ ಸದಸ್ಯರ ಬೇಡಿಕೆ ಹಾಗೂ ಸಾರ್ಳಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅವಧಿಯನ್ನು ವಿಸ್ತರಿಸುವುದು ಸೂಕ್ತ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರವೇಶ ಪರೀಕ್ಷೆ; ವಿನಯ್ ತೇರ್ಗಡೆ
ಮಸ್ಕಿ: ಪಟ್ಟಣದ ಹೋಲಿಫೇಥ್ ಶಾಲೆಯ ವಿದ್ಯಾರ್ಥಿ ವಿನಯ್ ಸಂಗನಾಳ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಶಾಲೆ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ. ನವೋದಯ ಶಾಲೆಯ ಐದನೇ ತರಗತಿ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿ ವಿನಯ್ ಆಯ್ಕೆಯಾಗಿದ್ದಾನೆಂದು ಶಾಲೆಯ ಮುಖ್ಯಗುರು ಕೆ.ವಿ.ರೆಡ್ಡಿ ತಿಳಿಸಿದ್ದಾರೆ.
ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ: ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ ಅಡಿಯಲ್ಲಿ 2013- 14ನೇ ಸಾಲಿಗಾಗಿ ಉಪ ಘಟಕವಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಟ್ಟರ್ ಮತ್ತು ಸಬ್‌ಮರ್ಸಿಬಲ್ ಪಂಪ್ ದುರಸ್ತಿ, 4 ವ್ಹೀಲರ್ ಅಟೋಮೋಟಿವ್ ಸರ್ವೀಸಿಂಗ್, ಹೋವರ ಹ್ಯಾಲಿಂಗ್, 2 ವ್ಹೀಲರ್ ಬೇಸಿಕ್ ಅಟೋಮೋಟಿವ್, ಮೊಬೈಲ್ ಫೋನ್ ದುರಸ್ತಿ, ಕಂಪ್ಯೂಟರ್ ಮತ್ತು ಎಂಎಸ್ ಆಫೀಸ್, ಸ್ಪೋಕನ್ ಇಂಗ್ಲಿಷ್, ಅಂಕೌಂಟ್ ಮತ್ತು ಟ್ಯಾಲಿ, ಬೇಸಿಕ್ ಎಲೆಕ್ಟ್ರಿಕಲ್ ಮತ್ತು ಹೌಸ್ ವೈರಿಂಗ್, ವೆಲ್ಡಿಂಗ್, ಬೇಸಿಕ್ ಕಾರ್ಪೆಂಟರ್ ತರಬೇತಿ ನೀಡಲಾಗುತ್ತದೆ. ಬಾರಬೆಂಡರ್, ಪ್ಲಂಬಿಂಗ್ ಮತ್ತು ಸ್ಯಾನಿಟೇಷನ್, ಸೆಕ್ಯುರಿಟಿ ಗಾರ್ಡ್, ಭಾರೀ ವಾಹನ ಚಾಲನೆ, ಲಘು ವಾಹನ ತರಬೇತಿ, ಬ್ಯೂಟೀಶಿಯನ್, ಕ್ಯಾಂಡಲ್ ಮೇಕಿಂಗ್, ಟೇಲರಿಂಗ್ ತರಬೇತಿ, ಹೇಲ್ತ್ ಕೇರ್, ಕುಕ್ಕಿಂಗ್ ಅಸಿಸ್ಟೆಂಟ್ ತರಬೇತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿಗಳಿಗೆ 5ನೇ ತರಗತಿ, 7ನೇ ತರಗತಿ, 8ನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ  ಹೊಂದಿರಬೇಕು. 18ರಿಂದ 45 ವಯೋವಾನದವರಾಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜು.12 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ ಯಾದಗಿರಿ ಇವರನ್ನು ಸಂಪರ್ಕಿಸಬಹುದು.
ಮಕ್ಕಳ ಹಕ್ಕುಗಳ ಕ್ಲಬ್ ಕಡ್ಡಾಯಗೊಳಿಸಿ ಡಿಸಿ ಆದೇಶ
ರಾಯಚೂರು: ರಾಜ್ಯ ಸರ್ಕಾರ ಈಗಾಗಲೇ ಶಾಲೆಗೊಂದು ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಕಡ್ಡಾಯಗೊಳಿಸಿದೆ. ಅದರ ಜಾರಿ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರದೇ ಕೂಡಲೇ ಮಕ್ಕಳ ಕ್ಲಬ್ ರಚಿಸಿ ಕಾರ್ಯಗತಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜಂಟಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್, ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ.
2007ರಿಂದಲೂ ರಾಜ್ಯ ಸರ್ಕಾರ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ರಚನೆಗೆ ಮತ್ತು ಆ ಮೂಲಕ ಮಕ್ಕಳ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಆಯೋಜಿಸಲು ಸೂಚಿಸುತ್ತಲೇ ಬಂದಿದೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಜಾರಿಯಲ್ಲಿ ನಿರಾಸಕ್ತಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಶಾಲೆಗೊಂದು ಮಕ್ಕಳ ಹಕ್ಕುಗಳ ಕ್ಲಬ್ ಕಡ್ಡಾಯವಾಗಿ ರಚಿಸಿ ಕಾರ್ಯಗತಗೊಳಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.